ಮಂಗಳವಾರ, ಜುಲೈ 27, 2021
25 °C
ಬಲೂಚಿಸ್ತಾನದಲ್ಲಿ ಭದ್ರತಾ ಪಡೆಗಳ ಮೇಲೆ ಉಗ್ರರ ಗುಂಡಿನ ದಾಳಿ

ಪಾಕ್ ಅರೆಸೇನಾ ಪಡೆಯ ಐವರು ಸೈನಿಕರು ಸಾವು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕರಾಚಿ: ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದ ವ್ಯಾಪ್ತಿಯ ಜಿಲ್ಲೆಯೊಂದರಲ್ಲಿ ಗಸ್ತು ತಿರುಗುತ್ತಿದ್ದ ಭದ್ರತಾ ಪಡೆಗಳನ್ನು ಗುರಿಯಾಗಿಸಿ ಭಯೋತ್ಪಾದಕರು ನಡೆಸಿರುವ ದಾಳಿಯಲ್ಲಿ ಅರೆಸೇನಾ ಪಡೆಯ ಐವರು ಸೈನಿಕರು ಹತರಾಗಿದ್ದಾರೆ ಎಂದು ಶುಕ್ರವಾರ ಮಾಧ್ಯಮ ವರದಿ ತಿಳಿಸಿದೆ.

ಪಾಕಿಸ್ತಾನದ ಸಶಸ್ತ್ರ ಪಡೆಗಳ ಮಾಧ್ಯಮ ವಿಭಾಗವಾದ‌ ಆಂತರಿಕ ಸೇವಾ ಸಾರ್ವಜನಿಕ ಸಂಪರ್ಕದ (ಐಎಸ್‌ಪಿಆರ್) ಪ್ರಕಾರ, ಬಲೂಚಿಸ್ತಾನದ ಫ್ರಂಟಿಯರ್ ಕಾರ್ಪ್ಸ್‌ಗೆ ಸೇರಿದ ಐವರು ಸೈನಿಕರು ಭಯೋತ್ಪಾದಕರೊಂದಿಗೆ ಗುಂಡಿನ ಕಾದಾಟ ನಡೆಸುವಾಗ ಸಾವನ್ನಪ್ಪಿದ್ದಾರೆ.

ಭಯೋತ್ಪಾದಕರನ್ನು ಹತ್ತಿಕ್ಕಲು ಶೋಧ ಕಾರ್ಯಾಚರಣೆ ಪ್ರಗತಿಯಲ್ಲಿದೆ ಎಂದು ಎಂದು ಐಎಸ್‌ಪಿಆರ್ ತಿಳಿಸಿದೆ.

ಬಲೂಚಿಸ್ತಾನದ ಸಿಬಿ ಜಿಲ್ಲೆಯ ಸಂಗನ್ ಪ್ರದೇಶದಲ್ಲಿ ಭಯೋತ್ಪಾದಕರ ವಿರುದ್ಧ ನಡೆದ ಈ ಕಾರ್ಯಾಚರಣೆಯಲ್ಲಿ ಭಯೋತ್ಪಾದಕರಿಗೆ ಭಾರಿ ನಷ್ಟವಾಗಿದೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.

ಆಂತರಿಕ ಭದ್ರತಾ ಸಚಿವ ಶೇಖ್ ರಶೀದ್ ಅಹ್ಮದ್ ಈ ದಾಳಿ ಖಂಡಿಸಿದ್ದಾರೆ. ‘ಇಂತಹ ಹೇಡಿತನದ ದಾಳಿಗಳನ್ನು ನಡೆಸುವ ಮೂಲಕ ಭಯೋತ್ಪಾದಕರು ನಮ್ಮನ್ನು ನಿರಾಶೆಗೊಳಿಸಲಾಗದು. ದೇಶವು ಭಯೋತ್ಪಾದಕರ ವಿರುದ್ಧ ತನ್ನ ಎಲ್ಲ ಶಕ್ತಿಯಿಂದ ಹೋರಾಡಲಿದೆ’ ಎಂದು ಅವರು ಹೇಳಿದರು.

ಈ ತಿಂಗಳ ಆರಂಭದಲ್ಲಿ, ಮಾರ್ಜೆಟ್-ಕ್ವೆಟ್ಟಾ ರಸ್ತೆಯಲ್ಲಿ ನಡೆದ ಸ್ಫೋಟದಲ್ಲಿ ಬಲೂಚಿಸ್ತಾನದ ಫ್ರಾಂಟಿಯರ್ ಕಾರ್ಪ್ಸ್‌ಗೆ ಸೇರಿದ ನಾಲ್ವರು ಸೈನಿಕರು ಸಾವನ್ನಪ್ಪಿದ್ದರು.

ಸಂಪನ್ಮೂಲದಲ್ಲಿ ಸಮೃದ್ಧವಾಗಿರುವ ಬಲೂಚಿಸ್ತಾನ ದೀರ್ಘಕಾಲದಿಂದಲೂ ತಾಲಿಬಾನ್ ಮತ್ತು ಬಲೂಚ್ ರಾಷ್ಟ್ರೀಯವಾದಿಗಳ ಹಿಂಸಾಚಾರಕ್ಕೆ ಗುರಿಯಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು