ಗುರುವಾರ , ಡಿಸೆಂಬರ್ 2, 2021
21 °C

ಚೀನಾದಲ್ಲಿ ಮತ್ತೆ ಸೋಂಕು ಹೆಚ್ಚಳ: ಹಲವೆಡೆ ಲಾಕ್‌ಡೌನ್‌, ವಿಮಾನಯಾನ ನಿರ್ಬಂಧ

ಎಎಫ್‌ಪಿ Updated:

ಅಕ್ಷರ ಗಾತ್ರ : | |

ಬೀಜಿಂಗ್‌: ಪ್ರವಾಸಿಗರಿಂದ ಚೀನಾದಲ್ಲಿ ಕೋವಿಡ್‌ ಏಕಾಏಕಿ ಉಲ್ಬಣಿಸಿದ್ದು, ಹಲವು ಪ್ರದೇಶಗಳಿಗೆ ವಿಮಾನ ಹಾರಾಟವನ್ನು ರದ್ದು ಮಾಡಲಾಗಿದೆ. ಶಾಲೆಗಳನ್ನು ಮುಚ್ಚಲಾಗಿದ್ದು, ಸೋಂಕು ತಡೆಯಲು ಕ್ರಮ ಕೈಗೊಳ್ಳಲಾಗಿದೆ. ಸಾಮೂಹಿಕ ಪರೀಕ್ಷೆಯನ್ನು ಮಾಡಿಸಲಾಗುತ್ತಿದೆ. 

ಜಗತ್ತಿನ ಹಲವು ದೇಶಗಳು ಕೋವಿಡ್‌ ನಿರ್ಬಂಧಗಳನ್ನು ತಾತ್ಕಾಲಿಕವಾಗಿ ಸಡಿಲಿಸುತ್ತಿದ್ದರೂ, ಚೀನಾ ಮಾತ್ರ ಗಡಿ ನಿರ್ಬಂಧವೂ ಸೇರಿದಂತೆ, ಲಾಕ್‌ಡೌನ್‌  ಕ್ರಮಗಳನ್ನು ಅನುಸರಿಸಿ ಕೋವಿಡ್‌ ಸೋಂಕನ್ನು ಶೂನ್ಯಕ್ಕೆ ತಂದಿಟ್ಟಿತ್ತು.  ಆದರೆ,  ಸತತ ಐದನೇ ದಿನ ಚೀನಾದಲ್ಲಿ ಹೆಚ್ಚಿನ ಪ್ರಕರಣಗಳು ವರದಿಯಾಗಿವೆ. ಉತ್ತರ ಮತ್ತು ವಾಯುವ್ಯ ಪ್ರದೇಶಗಳಲ್ಲಿ ಸೋಂಕು ಪ್ರಕರಣಗಳು ಕಾಣಿಸಿಕೊಂಡಿದ್ದು, ಅದನ್ನು ತಡೆಯಲು ಅಧಿಕಾರಿಗಳು ಹರಸಾಹಸಪಡುತ್ತಿದ್ದಾರೆ. 

ಸದ್ಯ ಸೋಂಕು ಪ್ರಕರಣಗಳು ಹೆಚ್ಚಾಗಲು ಪ್ರವಾಸಿಗರ ಗುಂಪಿನಲ್ಲಿದ್ದ ಒಂದು ವೃದ್ಧ ದಂಪತಿ ಕಾರಣ ಎಂದು ಅಧಿಕಾರಿಗಳು ಭಾವಿಸಿದ್ದಾರೆ. ದಂಪತಿ ಮೊದಲಿಗೆ ಶಾಂಘೈನಲ್ಲಿ ಸಂಚರಿಸಿದ್ದರು. ನಂತರ ಕ್ಸಿಯಾನ್, ಗನ್ಸು ಪ್ರಾಂತ್ಯ ಮತ್ತು ಮಂಗೋಲಿಯಾದ ಒಳನಾಡಿನಲ್ಲಿ ಓಡಾಡಿದ್ದಾರೆ ಎನ್ನಲಾಗಿದೆ. 

ರಾಜಧಾನಿ ಬೀಜಿಂಗ್ ಸೇರಿದಂತೆ ಕನಿಷ್ಠ ಐದು ಪ್ರಾಂತ್ಯಗಳು ಮತ್ತು ಪ್ರದೇಶಗಳಲ್ಲಿ ಈ ವೃದ್ಧ ದಂಪತಿಯ ನಿಕಟ ಸಂಪರ್ಕದಲ್ಲಿದ್ದ ಹತ್ತಾರು ಮಂದಿಗೆ ಸೋಂಕು ತಗುಲಿದೆ ಎನ್ನಲಾಗಿದೆ.

ಇದಕ್ಕೆ ಪ್ರತಿಯಾಗಿ ಸ್ಥಳೀಯ ಆಡಳಿತಗಳು ಸಾಮೂಹಿಕ ಪರೀಕ್ಷೆಗಳನ್ನು ನಡೆಸುತ್ತಿದೆ. ಪ್ರವಾಸಿ ತಾಣಗಳು, ಶಾಲೆಗಳು ಮತ್ತು ಮನರಂಜನಾ ಸ್ಥಳಗಳನ್ನು ನಿರ್ಬಂಧಿಸಲಾಗಿದೆ. ಕೆಲ ಪ್ರದೇಶಗಳಲ್ಲಿ ಲಾಕ್‌ಡೌನ್‌ಅನ್ನು ವಿಧಿಸಲಾಗಿದೆ.

ಇನ್ನೂ ಕೆಲವು ಪ್ರದೇಶಗಳಲ್ಲಿ ತೀರ ಅಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಬರುವಂತೆ ನಾಗರಿಕರಿಗೆ ತಿಳಿಸಲಾಗಿದೆ. 

ಸೋಂಕು ಉಲ್ಬಣಗೊಂಡಿರುವ  ಕ್ಸಿಯಾನ್, ಲಾಂನ್ಸೋಗೆ ವಿಮಾನಸೇವೆಯನ್ನು ತಡೆಯಲಾಗಿದೆ. 

ಗುರುವಾರ 13 ಹೊಸ ಪ್ರಕರಣಗಳು ವರದಿಯಾಗಿವೆ ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು