ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜಿ–7’ ಶೃಂಗಕ್ಕೆ ಸಿಂಗಾರಗೊಂಡ ಕಾರ್ನ್‌ವೆಲ್‌

Last Updated 11 ಜೂನ್ 2021, 11:12 IST
ಅಕ್ಷರ ಗಾತ್ರ

ಫಾಲ್‌ಮೌಥ್‌, ಬ್ರಿಟನ್‌: ಬ್ರಿಟನ್‌ನ ವಾಯವ್ಯ ಭಾಗದಲ್ಲಿ, ಕಡಲತೀರದ ನಗರ ಕಾರ್ನ್‌ವೆಲ್‌ ಪ್ರವಾಸಿಗರಿಂದ ಗಿಜಿಗುಡುವ ಬೀಚ್‌ನಿಂದ, ಸಮುದ್ರದ ತೆರೆಗಳ ಏರಿಳಿತದೊಂದಿಗೆ ಆಟವಾಡಿ ಸಂಭ್ರಮಿಸುವುದಕ್ಕೆ ಪ್ರಸಿದ್ಧಿ.

ಆದರೆ, ಈಗ ಈ ನಗರ ಬೇರೆಯೇ ಕಾರಣಕ್ಕಾಗಿ ಗಮನ ಸೆಳೆಯುತ್ತಿದೆ. ಆಳೆತ್ತರದ ಕಬ್ಬಿಣದ ಸರಳುಗಳನ್ನು ಬಳಸಿ ಹಾಕಿರುವ ಬೇಲಿಗಳು, ಬಿಗಿ ಬಂದೋಬಸ್ತ್‌ಗಾಗಿ ನೂರಾರು ಜನ ಪೊಲೀಸರ ನಿಯೋಜನೆ, ಮೋಜು ಕಾಣುತ್ತಿದ್ದ ಬೀಚ್‌ನಲ್ಲಿ ಪ್ರತಿಭಟನೆ, ಧಿಕ್ಕಾರದ ಕೂಗುಗಳು ಕೇಳಿಸುತ್ತಿವೆ.

ಏಳು ಬಲಿಷ್ಠ ರಾಷ್ಡ್ರಗಳ ಒಕ್ಕೂಟವಾದ ‘ಜಿ–7’ನ ಶೃಂಗಸಭೆ ಇಂದಿನಿಂದ ಭಾನುವಾರದವರೆಗೆ ನಡೆಯುತ್ತಿರುವುದು ಇಂಥ ವಿದ್ಯಮಾನಗಳಿಗೆ ಕಾರಣವಾಗಿದೆ.

ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರಲ್ಲದೇ, ಕೆನಡಾ, ಫ್ರಾನ್ಸ್‌, ಜರ್ಮನಿ, ಇಟಲಿ ಹಾಗೂ ಜಪಾನ್‌ನ ನಾಯಕರು ಇಲ್ಲಿ ಬಂದಿಳಿಯಲಿದ್ದು, ಸಮೀಪದ ಗ್ರಾಮ ಕಾರ್ಬಿಸ್‌ ಬೇ ಎಂಬಲ್ಲಿ ಮೂರು ದಿನಗಳ ಕಾಲ ನಡೆಯುವ ಶೃಂಗಸಭೆಯಲ್ಲಿ ಪಾಲ್ಗೊಳ್ಳುವರು.

ಹವಾಮಾನ ಬದಲಾವಣೆ ತಡೆಗಟ್ಟಲು ಕ್ರಮ ಕೈಗೊಳ್ಳಬೇಕು, ಕೋವಿಡ್‌ ಲಸಿಕೆಯ ಉತ್ಪಾದನೆಗೆ ಅಡ್ಡಿಯಾಗಿರುವ ಬೌದ್ಧಿಕಆಸ್ತಿ ಹಕ್ಕುಗಳಿಗೆ ಸಂಬಂಧಿಸಿದ ನಿಯಮಗಳನ್ನು ಸಡಿಲಗೊಳಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆಗಳು ಆರಂಭವಾಗಿವೆ.

ಕಡಲ ಕಿನಾರೆಯಲ್ಲೂ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ. 3,000ಕ್ಕೂ ಹೆಚ್ಚು ಅಧಿಕಾರಿಗಳಿಗೆ ಸ್ಥಳಾವಕಾಶ ಕಲ್ಪಿಸುವ ಬೃಹತ್‌ ಹಡಗನ್ನು ಸ್ಥಳೀಯ ಆಡಳಿತ ಬಾಡಿಗೆಗೆ ಪಡೆದಿದೆ. ಒಟ್ಟಾರೆ, ಈ ಶೃಂಗಸಭೆಗೆ ಯಾವುದೇ ರೀತಿಯ ಅಡ್ಡಿ ಆಗಬಾರದು ಎಂದು ಇಲ್ಲಿನ ಆಡಳಿತ ಹಲವಾರು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ.

ಇಲ್ಲಿನ ಪ್ರಮುಖ ರಸ್ತೆಯನ್ನು ಒಂದು ವಾರದ ಅವಧಿಗೆ ಬಂದ್‌ ಮಾಡಲಾಗಿದೆ. ಲೋಕಲ್‌ ಟ್ರೇನ್‌ಗಳ ಸಂಚಾರವನ್ನೂ ಸ್ಥಗಿತಗೊಳಿಸಲಾಗಿದೆ.

ಕಾರ್ಬಿಸ್‌ ಬೇ ಗ್ರಾಮದ ‘ಟ್ರೆಗಾನಾ ಕ್ಯಾಸಲ್‌’ನಲ್ಲಿ ಏಳು ರಾಷ್ಟ್ರಗಳ ನಾಯಕರು ತಂಗಲಿರುವ ಕಾರಣ, ಈ ಹೋಟೆಲ್‌ಗೆ ಬಿಗಿ ಭದ್ರತೆ ಒದಗಿಸಲಾಗಿದೆ. ಈ ಹೋಟೆಲ್‌ ಸುತ್ತ ಮೂರು ಮೀಟರ್‌ ಎತ್ತರ, ಲೋಹದ ಬೇಲಿ ಹಾಕಲಾಗಿದ್ದು, ಅದಕ್ಕೆ ‘ರಿಂಗ್‌ ಆಫ್‌ ಸ್ಟೀಲ್‌’ ಎಂದು ಕರೆಯಲಾಗುತ್ತಿದೆ. ಒಟ್ಟಾರೆ, ಈ ಹೋಟೆಲ್‌ ಈಗ ಉಕ್ಕಿನ ಕೋಟೆಯಂತಾಗಿದೆ ಎನ್ನಬಹುದು.

ಸಮೀಪವೇ ಇರುವ ಫಾಲ್‌ಮೌಥ್‌ ಪಟ್ಟಣದಲ್ಲಿ ಅಂತರರಾಷ್ಟ್ರೀಯ ಮಾಧ್ಯಮಗಳ ಪ್ರತಿನಿಧಿಗಳಿಗಾಗಿ ವ್ಯವಸ್ಥೆ ಮಾಡಲಾಗಿದ್ದು, ಅಲ್ಲಿಯೂ ವ್ಯಾಪಕ ಭದ್ರತೆಯನ್ನು ಕೈಗೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT