ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಲಿಬಾನ್ ಉಗ್ರರಿಗೆ ಜಗ್ಗದೆ ಮಹಿಳೆಯರ ರಕ್ಷಣೆಗಾಗಿ ಕಾಬೂಲ್‌ನಲ್ಲೇ ಉಳಿದ ಸಂಸದೆ

Last Updated 20 ಆಗಸ್ಟ್ 2021, 15:36 IST
ಅಕ್ಷರ ಗಾತ್ರ

ಕಾಬೂಲ್: ವಿರೋಧಿಗಳ ತಂಟೆಗೆ ಹೋಗುವುದಿಲ್ಲ ಎಂಬ ಘೋಷಣೆಯ ಹೊರತಾಗಿಯೂ ತಾಲಿಬಾನ್‌ಗಳು ಮನೆ ಮನೆಗೆ ತೆರಳಿ ವಿರೋಧಿಗಳು ಮತ್ತು ಅವರ ಕುಟುಂಬಗಳನ್ನು ಹುಡುಕುತ್ತಿದ್ದಾರೆ ಎಂಬುದು ವಿಶ್ವಸಂಸ್ಥೆಯ ಗುಪ್ತಚರ ದಾಖಲೆಯ ಮೂಲಕ ತಿಳಿದುಬಂದಿದೆ.

ಭಾನುವಾರ ಕಾಬೂಲ್ ಅನ್ನು ವಶಪಡಿಸಿಕೊಂಡ ನಂತರ ತಾಲಿಬಾನ್ ಉಗ್ರರು, ತಮ್ಮ ವಿರುದ್ಧ ಕೆಲಸ ಮಾಡಿದವರಿಗೆ ಸಂಪೂರ್ಣ ಕ್ಷಮಾದಾನದ ಪ್ರತಿಜ್ಞೆ ಮಾಡಿದ್ದರು. ಮಹಿಳೆಯರ ಹಕ್ಕುಗಳನ್ನು ಗೌರವಿಸಲಾಗುವುದು ಮತ್ತು ತಾಲಿಬಾನ್ 2.0ದಲ್ಲಿ ಕ್ರೂರ 1996-2001ರ ನಿಯಮಕ್ಕಿಂತ ವಿಭಿನ್ನವಾಗಿ ಆಡಳಿತ ನಡೆಸುವುದಾಗಿ ಭರವಸೆ ನೀಡಿದ್ದರು. ಆದರೆ, ಮಾತು ತಪ್ಪಿದ ಉಗ್ರರು, ತಮ್ಮ ಹಳೆಯ ಚಾಳಿ ಮುಂದುವರಿಸಿದ್ದಾರೆ. ತಾಲಿಬಾನಿಗಳ ಈ ವರ್ತನೆಯ ಬಗ್ಗೆ ಅರಿವಿದ್ದ ಅಫ್ಗಾನಿಸ್ತಾನದ ಹಲವರು ಈಗಾಗಲೇ ದೇಶ ತೊರೆದಿದ್ದಾರೆ.

ಈ ಮಧ್ಯೆ, ಕೆಲವರು ಮಾತ್ರ ಅಲ್ಲಿಯೇ ಉಳಿದು ತಾಲಿಬಾನ್ ಪಡೆಗಳನ್ನು ವಿರೋಧಿಸುವ ಮೂಲಕ ಮಹಿಳೆಯರ ಹಕ್ಕುಗಳಿಗಾಗಿ ಹೋರಾಡುವ ಪ್ರತಿಜ್ಞೆ ಮಾಡಿದ್ದಾರೆ.

ಅಂತಹವರಲ್ಲಿ ಆಫ್ಗಾನ್ ಸಂಸದೆ ಫರ್ಜಾನಾ ಕೊಚೈ ಸಹ ಸೇರಿದ್ದಾರೆ. ತಾಲಿಬಾನ್ ಉಗ್ರರು ತಮ್ಮ ಮಾತನ್ನು ಮೀರಿ ವಿರೋಧಿಗಳ ಮನೆಗಳಲ್ಲಿ ಹುಡುಕಾಟ ನಡೆಸುತ್ತಿದ್ದಾರೆ ಎಂದು ಅವರು ಸ್ಕೈ ನ್ಯೂಸ್‌ಗೆ ತಿಳಿಸಿದ್ದಾರೆ.

ರಾಷ್ಟ್ರೀಯ ಚಾನಲ್‌ನಲ್ಲಿ ಕೆಲಸ ಮಾಡುತ್ತಿದ್ದ ತನ್ನ ಒಬ್ಬ ಮಹಿಳಾ ಸ್ನೇಹಿತೆಗೆ ಕೆಲಸಕ್ಕೆ ಹೋಗಲು ಅವಕಾಶ ನಿರಾಕರಿಸುವ ಮೂಲಕ ತಾಲಿಬಾನ್ ದಂಗೆಕೋರರು ಈಗಾಗಲೇ ತಮ್ಮ ಮಾತನ್ನು ಮೀರಿ ನಡೆದಿದ್ದಾರೆ ಎಂದು ಸಂಸದೆ ಕಿಡಿಕಾರಿದ್ದಾರೆ.

‘ನಮ್ಮ ದೇಶದ ಅಧ್ಯಕ್ಷರು ದೇಶವನ್ನು ತೊರೆದಾಗ ನಮ್ಮ ಹೃದಯ ಛಿದ್ರವಾಯಿತು..’ ಎಂದು ನೋವನ್ನು ಹೊರಹಾಕಿದ್ದಾರೆ.

ಇದನ್ನೂ ಓದಿ.. ಹೇಗಿರುತ್ತೆ ತಾಲಿಬಾನ್‌ಗಳ ಕ್ರೌರ್ಯ?: ಭಯಾನಕ ಸತ್ಯ ಬಿಚ್ಚಿಟ್ಟ ಕನ್ನಡಿಗ

‘ಮಹಿಳೆಯರು ಮತ್ತು ಯುವ ಪೀಳಿಗೆಯ ನಾಯಕಿಯಾಗಿ, ಜನರು ನಂಬಿದ ವ್ಯಕ್ತಿಯಾಗಿ, ನನ್ನ ಮೇಲೆ ಕೆಲವು ಬಾದ್ಯತೆಗಳಿವೆ. ವಿಶೇಷವಾಗಿ ಮಹಿಳೆಯರು, ಯುವತಿಯರ ಕುರಿತಾಗಿ ನಮಗೆ ಕೆಲವು ಜವಾಬ್ದಾರಿಗಳಿವೆ. ಹಾಗಾಗಿ, ನಾನು ಟಾರ್ಗೆಟ್ ಆಗುವುದು ಗೊತ್ತಿದ್ದರೂ ಅಫ್ಗಾನಿಸ್ತಾನದಿಂದ ಪಲಾಯನ ಮಾಡಲಿಲ್ಲ’ ಎಂದು ಅವರು ಹೇಳಿದರು.

‘ಮಹಿಳೆಯರ ರಕ್ಷಣೆ ಕುರಿತಾದ ಆ ಒಂದು ಪ್ರಶ್ನೆ ಯಾವಾಗಲೂ ನನ್ನನ್ನು ಭಾವುಕಳನ್ನಾಗಿಸುತ್ತದೆ. ಆ ಪ್ರಶ್ನೆಗೆ ಉತ್ತರಿಸುವುದು ಅಷ್ಟು ಸುಲಭವಲ್ಲ’ ಎಂದು ಕೊಚೈ ಹೇಳಿದರು.

ಹಲವು ಭಾರತೀಯರು ದೇಶ ಬಿಡುತ್ತಿರುವವರ ಬಗ್ಗೆ ಕೇಳಲಾದ ಪ್ರೆಶ್ನೆಗೆ ಉತ್ತರಿಸಿದ ಅವರು, ‘ನೀವು ಹೋಗುತ್ತಿದ್ದೀರಿ. ನಾವು ಎಲ್ಲಿಗೆ ಹೋಗುವುದು? ಇದು ನಮ್ಮ ತಾಯ್ನಾಡು’ ಎಂದು ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT