ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸರ್‌ಮ್ಯಾಟ್‌ ಕ್ಷಿಪಣಿ ಶೀಘ್ರ ಸೇನೆಗೆ’- ರಷ್ಯಾ ಶಕ್ತಿಪ್ರದರ್ಶನ

10ಕ್ಕೂ ಹೆಚ್ಚು ಅಣು ಸಿಡಿತಲೆ ಸಾಗಿಸುವ ಸಾಮರ್ಥ್ಯದ ಖಂಡಾಂತರ ಕ್ಷಿಪಣಿ
Last Updated 23 ಏಪ್ರಿಲ್ 2022, 18:04 IST
ಅಕ್ಷರ ಗಾತ್ರ

ಮಾಸ್ಕೊ: ರಷ್ಯಾವು ಇತ್ತೀಚೆಗಷ್ಟೇ ಪರೀಕ್ಷಿಸಿದ ‘ಸರ್‌ಮ್ಯಾಟ್‌’ ಖಂಡಾಂತರ ಕ್ಷಿಪಣಿಯನ್ನು ಸೇನೆಗೆಶೀಘ್ರವೇ ಸೇರಿಸಿಕೊಳ್ಳಲಾಗುವುದು ಎಂದು ಆ ದೇಶವು ಶನಿವಾರ ಹೇಳಿದೆ. ಹತ್ತು ಅಣ್ವಸ್ತ್ರಗಳನ್ನು ಹೊತ್ತೊಯ್ಯಬಲ್ಲಸಾಮರ್ಥ್ಯವನ್ನು ಇದು ಹೊಂದಿದೆ. ಜತೆಗೆ, ಸಾವಿರಾರು ಕಿಲೋಮೀಟರ್‌ ದೂರದ ಅಮೆರಿಕ ಮತ್ತು ಯುರೋಪ್‌ವರೆಗೆ ತಲುಪುವ ಸಾಮರ್ಥ್ಯ ಹೊಂದಿದೆ.

ಈ ಕ್ಷಿಪಣಿ ನಿಯೋಜನೆ‌ಯು ತನ್ನ ‘ಅಣ್ವಸ್ತ್ರ ಪಡೆಯ ಐತಿಹಾಸಿಕಉನ್ನತೀಕರಣ’ ಎಂದು ರಷ್ಯಾ ಬಣ್ಣಿಸಿದೆ.ಸರ್‌ಮ್ಯಾಟ್‌ ಕ್ಷಿಪಣಿಯನ್ನು ಈ ವರ್ಷದೊಳಗೆ ಸೇನೆಗೆ ಸೇರಿಸಿಸುವ ಗುರಿಯನ್ನು ರಷ್ಯಾದ ಬಾಹ್ಯಾಕಾಶ ಸಂಸ್ಥೆ ‘ರೊಸ್ಕೊಸ್‌ಮೊಸ್‌’ ಮುಖ್ಯಸ್ಥ ಡಿಮಿಟ್ರಿ ರೊಗೊಜಿನ್‌ ನಿಗದಿಪಡಿಸಿಕೊಂಡಿದ್ದಾರೆ. ರಷ್ಯಾದ ಮಹತ್ವಾಕಾಂಕ್ಷೆಯ ಅಸ್ತ್ರವೆಂದು ಬಣ್ಣಿಸಿರುವ ‘ಸರ್‌ಮ್ಯಾಟ್‌’ ಕ್ಷಿಪಣಿಯ ಮೊದಲ ಪ್ರಯೋಗ ಬುಧವಾರಷ್ಟೇ ನಡೆದಿದೆ. ಇದನ್ನು ಸೇನೆಗೆ ಸೇರಿಸುವ ಮೊದಲು ಇನ್ನಷ್ಟು ಪ್ರಯೋಗಕ್ಕೆ ಒಳಪಡಿಸುವ ಅಗತ್ಯವಿದೆ ಎಂದುಪಾಶ್ಚಾತ್ಯಾ ದೇಶಗಳ ಸೇನಾ ತಜ್ಞರು ವಿಶ್ಲೇಷಿಸಿದ್ದಾರೆ.

ರಷ್ಯಾದ ಸರ್ಕಾರಿ ಸ್ವಾಮ್ಯದ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ರೊಗೊಜಿನ್‌ ಅವರು, ‘ಮಾಸ್ಕೊ ಪೂರ್ವಕ್ಕೆ ಸುಮಾರು 3,000 ಕಿ.ಮೀ (1,860 ಮೈಲುಗಳು) ದೂರದಲ್ಲಿ ಸೈಬೀರಿಯಾದ ಕ್ರಸ್ನಾಯಾರ್‌ಸ್ಕ್‌ ಪ್ರದೇಶದಲ್ಲಿ ಈ ಕ್ಷಿಪಣಿಗಳನ್ನು ನಿಯೋಜಿಸಲಾಗುವುದು’ ಎಂದು ಹೇಳಿದರು.

ಸೋವಿಯತ್ ಯುಗದ ‘ವೊಯೆವೊಡಾ’ ಕ್ಷಿಪಣಿಗಳನ್ನು ಇರಿಸಿದ್ದ ಇದೇ ಸ್ಥಳದಲ್ಲಿ ಈ ಅತ್ಯಾಧುನಿಕ ಕ್ಷಿಪಣಿಗಳನ್ನು ಇರಿಸುವುದರಿಂದ ಸಮಯ ಮತ್ತು ಸಂಪನ್ಮೂಲ ಉಳಿಯುತ್ತದೆ ಎಂದರು. ‘ಅತ್ಯಂತ ಶಕ್ತಿಶಾಲಿ ಅಸ್ತ್ರ’ದ ಪರೀಕ್ಷೆ ಒಂದು ಐತಿಹಾಸಿಕ ಘಟನೆ. ಅದು ಮುಂದಿನ 30ರಿಂದ 40 ವರ್ಷಗಳವರೆಗೆ ರಷ್ಯಾದ ನವ ಪೀಳಿಗೆಯ ಸುರಕ್ಷತೆ ಖಾತರಿಪಡಿಸುತ್ತದೆ ಎಂದು ರೊಗೊಜಿನ್‌ ವಿಶ್ವಾಸ ವ್ಯಕ್ತಪಡಿಸಿದರು.

ಉಕ್ರೇನ್‌ ಜತೆಗಿನ ಯುದ್ಧದ ಸಂದರ್ಭದಲ್ಲಿಯೇ ಈ ಕ್ಷಿಪಣಿಯ ಪರೀಕ್ಷೆ ನಡೆಸಿದ್ದನ್ನು ರಷ್ಯಾದ ಬಲ ಪ್ರದರ್ಶನ ಎಂದು ಪರಿಗಣಿಲಾಗಿದೆ. ಉಕ್ರೇನ್‌– ರಷ್ಯಾ ಸಂಘರ್ಷವು ಅಮೆರಿಕ ಮತ್ತು ಅದರ ಮಿತ್ರ ರಾಷ್ಟ್ರಗಳಲ್ಲಿ ಕಳವಳ ತೀವ್ರಗೊಳಿಸಿದೆ. ಪುಟಿನ್ ಅವರು ಇದೇ ವರ್ಷದ ಫೆಬ್ರುವರಿ 24ರಂದು ಉಕ್ರೇನ್ ಮೇಲೆ ವಿಶೇಷ ಸೇನಾ ಕಾರ್ಯಾಚರಣೆಗೆ ಆದೇಶಿಸಿದಾಗ, ‘ನಮ್ಮ ದಾರಿಗೆ ಯಾರೇ ಅಡ್ಡಿಪಡಿಸಿದರೂ ನಿಮ್ಮ ಇತಿಹಾಸದಲ್ಲಿ ಎಂದಿಗೂ ಕಂಡರಿಯದ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದ್ದರು. ಸೇನಾ ಕಾರ್ಯಾಚರಣೆ ಶುರುವಾದಾಗಿನಿಂದಲೂ ಅಣ್ವಸ್ತ್ರಯುದ್ಧ ಸಾಧ್ಯತೆಯ ಬಗ್ಗೆ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಆತಂಕ ಹೆಚ್ಚಿದೆ.

‘ಅಣ್ವಸ್ತ್ರ ಯುದ್ಧ ನಡೆಯವ ಸ್ಥಿತಿಇದೆ’ ಎಂದು ವಿಶ್ವಸಂಸ್ಥೆಯ ಮುಖ್ಯಸ್ಥ ಆಂಟೋನಿಯೊ ಗುಟೆರೆಸ್ ‌ ಇತ್ತೀಚೆಗೆ ಕಳವಳ ವ್ಯಕ್ತಪಡಿಸಿದ್ದರು.

‘ಮತ್ತೊಂದು ಸಾಮೂಹಿಕ ಸಮಾಧಿ ಪತ್ತೆ’

ಕೀವ್‌ (ಎಪಿ): ಮತ್ತೊಂದು ಸಾಮೂಹಿಕ ಸಮಾಧಿ ಮರಿಯುಪೊಲ್‌ ನಗರದ ವಿನೊಹ್ರದ್ನೆ ಗ್ರಾಮದ ಬಳಿ ಪತ್ತೆಯಾಗಿರುವುದಾಗಿ ಸಿಟಿ ಕೌನ್ಸಿಲ್‌ ಹೇಳಿದೆ.

45 ಮೀಟರ್‌ ಉದ್ದ ಮತ್ತು 25 ಮೀಟರ್‌ ಅಗಲದ ಈ ಸಮಾಧಿಯಲ್ಲಿ ಒಂದು ಸಾವಿರಕ್ಕೂ ಹೆಚ್ಚು ನಾಗರಿಕರ ಶವಗಳನ್ನು ಹೂಳಲಾಗಿದೆ ಎಂದು ಹೇಳಿರುವ ಸಿಟಿ ಕೌನ್ಸಿಲ್‌ ಅಧಿಕಾರಿಗಳು, ಪ್ಲಾನೆಟ್‌ ಲ್ಯಾಬ್ಸ್‌ ಬಿಡುಗಡೆ ಮಾಡಿರುವ ಉಪಗ್ರಹ ಚಿತ್ರವನ್ನು ಹಂಚಿಕೊಂಡಿದ್ದಾರೆ.

ರಷ್ಯಾ–ಉಕ್ರೇನ್‌ಗೆ ಗುಟೆರೆಸ್‌ ಭೇಟಿ

ವಿಶ್ವಸಂಸ್ಥೆ (ಪಿಟಿಐ): ಉಕ್ರೇನ್‌ನಲ್ಲಿ ಸಂಘರ್ಷ ಕೊನೆಗೊಳಿಸಿ, ಶಾಂತಿ ಸ್ಥಾಪಿಸುವ ಉದ್ದೇಶದಿಂದ ವಿಶ್ವಸಂಸ್ಥೆ ಮಹಾಪ್ರಧಾನ ಕಾರ್ಯದರ್ಶಿ ಅಂಟೊನಿಯೊ ಗುಟೆರೆಸ್ ಅವರು ಮುಂದಿನ ವಾರ ರಷ್ಯಾ ಹಾಗೂ ಉಕ್ರೇನ್‌ಗೆ ಭೇಟಿ ನೀಡಲಿದ್ದಾರೆ. ‘ಉಕ್ರೇನ್‌ನಲ್ಲಿ ಶಾಂತಿ ನೆಲಸಲು, ಜೀವಗಳನ್ನು ಉಳಿಸಲು, ಮಾನವ ಸಂಕಟ ಕೊನೆಗೊಳಿಸಲು ತುರ್ತು ಕ್ರಮಗಳ ಅಗತ್ಯವಿದೆ’ ಎಂದು ಗುಟೆರೆಸ್ ಶನಿವಾರ ಟ್ವೀಟ್ ಮಾಡಿದ್ದಾರೆ. ಇದೇ 26ರಂದು ಗುಟೆರೆಸ್‌ ಅವರು ಮಾಸ್ಕೊದಲ್ಲಿಪುಟಿನ್‌ ಮತ್ತು ಇದೇ 28ರಂದು ಉಕ್ರೇನ್‌ನಲ್ಲಿ ಝೆಲೆನ್‌ಸ್ಕಿ ಅವರನ್ನು ಭೇಟಿ ಮಾಡಿ ಚರ್ಚಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT