ಗುರುವಾರ , ಆಗಸ್ಟ್ 5, 2021
29 °C
‘ಕೋವಿಡ್‌–19‘ ಲಸಿಕೆ ಪಡೆಯಲು ನಿರಾಕರಿಸಿದ ಹೂಸ್ಟೆನ್‌ ಆಸ್ಪತ್ರೆಯ ‌150 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಲಾಗಿದೆ ಅಥವಾ ಉದ್ಯೋಗಿಗಳೇ ರಾಜೀನಾಮೆ ನೀಡಿದ್ದಾರೆ.

ಕೋವಿಡ್‌ ಲಸಿಕೆ ಪಡೆಯಲು ನಿರಾಕರಣೆ: ಹೂಸ್ಟನ್ ಆಸ್ಪತ್ರೆಯ ನೌಕರರು ವಜಾ

ಎಪಿ Updated:

ಅಕ್ಷರ ಗಾತ್ರ : | |

Prajavani

ಡಲ್ಲಾಸ್‌: ‘ಕೋವಿಡ್‌–19‘ರ ಲಸಿಕೆ ಪಡೆಯಲು ನಿರಾಕರಿಸಿದ ಹೂಸ್ಟನ್‌ ಆಸ್ಪತ್ರೆಯ ‌150ಕ್ಕೂ ಹೆಚ್ಚು ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಲಾಗಿದೆ ಅಥವಾ ಉದ್ಯೋಗಿಗಳೇ ರಾಜೀನಾಮೆ ನೀಡಿದ್ದಾರೆ.

ಲಸಿಕೆ ಪಡೆಯುವ ಅಗತ್ಯತೆ ಪ್ರಶ್ನಿಸಿ ಹೂಸ್ಟನ್ ಆಸ್ಪತ್ರೆಯ ಉದ್ಯೋಗಿಗಳು ನ್ಯಾಯಾಲಯದ ಮೆಟ್ಟಿಲೇರಿದ್ದರು. ನ್ಯಾಯಾಧೀಶರು ಇವರ ಅರ್ಜಿಯನ್ನು ವಜಾಗೊಳಿಸಿದ ನಂತರ, ಆಸ್ಪತ್ರೆಯವರು ಇವರನ್ನು ಉದ್ಯೋಗದಿಂದ ವಜಾಗೊಳಿಸಿದ್ದಾರೆ ಅಥವಾ ಉದ್ಯೋಗಿಗಳೇ ರಾಜೀನಾಮೆ ನೀಡಿದ್ದಾರೆ.

ಈ ನೌಕರರು, ಕೋವಿಡ್‌ ಲಸಿಕೆ ಪಡೆಯುವ ಪ್ರಕ್ರಿಯೆಯನ್ನು, ಎರಡನೇ ಮಹಾಯುದ್ಧದಲ್ಲಿ ನಾಜಿಗಳ ಮೇಲೆ ನಡೆದ ವೈದ್ಯಕೀಯ ಪ್ರಯೋಗಗಳಿಗೆ ಹೋಲಿಸಿ, ಲಸಿಕೆ ಪಡೆಯುವ ಅಗತ್ಯವನ್ನು ಪ್ರಶ್ನಿಸಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ವೇಳೆ ನ್ಯಾಯಾಧೀಶರು ‘ಈ ಹೋಲಿಕೆ ಖಂಡನೀಯ‘ ಎಂದಿದ್ದಲ್ಲದೇ ‘ಕೋವಿಡ್‌ ಲಸಿಕೆ ಪ್ರಾಯೋಗಿಕ ಮತ್ತು ಅಪಾಯ ಎಂದು ಅರ್ಜಿಯಲ್ಲಿ ಉಲ್ಲೇಖಿಸಿರುವ ಮಾಹಿತಿಯೂ ಸುಳ್ಳು‘ ಎಂದು ಹೇಳಿದ್ದಾರೆ.

ನ್ಯಾಯಾಧೀಶರು ನೌಕರರ ಅರ್ಜಿಗಳನ್ನು ವಜಾಗೊಳಿಸುತ್ತಿದ್ದಂತೆ, ಆಸ್ಪತ್ರೆಯ ಆಡಳಿತ ಮಂಡಳಿ, ‘ಲಸಿಕೆ ತೆಗೆದುಕೊಳ್ಳಲು ಆಸಕ್ತಿ ತೋರದ ನೌಕರರು ಬೇರೆಡೆ ಕೆಲಸಕ್ಕೆ ಹೋಗಬಹುದು‘ ಎಂದು ತಿಳಿಸಿತು.

ಆಸ್ಪತ್ರೆಯ ಆಡಳಿತ ಮಂಡಳಿ ಈ ಮೊದಲು ಲಸಿಕೆ ಪಡೆಯಲು ನಿರಾಕರಿಸಿದ ಉದ್ಯೋಗಿಗಳನ್ನು ಎರಡು ವಾರಗಳ ಅಮಾನತು ಮಾಡಿತ್ತು. ಈ ಅವಧಿಯಲ್ಲಿ 153 ಉದ್ಯೋಗಿಗಳಲ್ಲಿ ಕೆಲವರು ರಾಜೀನಾಮೆ ನೀಡಿದ್ದಾರೆ. ಇನ್ನೂ ಕೆಲವರನ್ನು ಕಂಪನಿಯೇ ಮಂಗಳವಾರ ವಜಾಗೊಳಿಸಿದೆ ಎಂದು ಹೂಸ್ಟನ್ ಮೆಥೋಡಿಸ್ಟ್ ಆಸ್ಪತ್ರೆಯ ವಕ್ತಾರರು ತಿಳಿಸಿದ್ದಾರೆ.

ಅಮೆರಿಕದಲ್ಲಿ ಕೊರೊನಾ ಸೋಂಕಿನಿಂದ ರೋಗಿಗಳು ಮತ್ತು ಇತರರನ್ನು ರಕ್ಷಿಸಲು ಆರೋಗ್ಯ ಸಂಸ್ಥೆಗಳೂ ಏನೆಲ್ಲ ಪ್ರಯತ್ನಗಳನ್ನು ನಡೆಸುತ್ತಿವೆ. ಆದರೆ, ಇದೇ ಮೊದಲು ಲಸಿಕೆ ನಿರಾಕರಿಸಿರುವ ಪ್ರಕರಣ ನಡೆದಿದೆ.

ಅಮೆರಿಕದಲ್ಲಿ ಆಸ್ಪತ್ರೆಗಳು ತಮ್ಮ ಉದ್ಯೋಗಿಗಳಿಗೆ ಲಸಿಕೆ ಹಾಕಿಸುವುದನ್ನು ಕಡ್ಡಾಯಗೊಳಿಸಿವೆ. ಈ ನಿರ್ಧಾರ ಅಮೆರಿಕದ ಪ್ರಮುಖ ಆರೋಗ್ಯ ರಕ್ಷಣಾ ವ್ಯವಸ್ಥೆಯಲ್ಲಿನ ಆದ್ಯತಾ ಕ್ರಮವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು