ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಾಯ ಒಡ್ಡಿದರೆ ಭಾರತ ಯಾರನ್ನೂ ಬಿಡುವುದಿಲ್ಲ: ಚೀನಾಗೆ ರಾಜನಾಥ್ ಸಿಂಗ್‌ ಎಚ್ಚರಿಕೆ

ಚೀನಾಗೆ ರಕ್ಷಣಾ ಸಚಿವರ ಸ್ಪಷ್ಟ ಎಚ್ಚರಿಕೆ * ಪರಸ್ಪರ ಲಾಭದ ದ್ವಿಪಕ್ಷೀಯ ಬಾಂಧವ್ಯ ಬೇಕು–ಅಮೆರಿಕಕ್ಕೆ ಪರೋಕ್ಷ ಸಂದೇಶ
Last Updated 15 ಏಪ್ರಿಲ್ 2022, 13:56 IST
ಅಕ್ಷರ ಗಾತ್ರ

ವಾಷಿಂಗ್ಟನ್: ‘ಭಾರತವು ಈಗ ಶಕ್ತಿಶಾಲಿ ರಾಷ್ಟ್ರವಾಗಿ ಹೊರಹೊಮ್ಮಿದೆ. ತನಗೆ ಅಪಾಯ ಒಡ್ಡಿದರೆ ಯಾರನ್ನೂ ಸುಮ್ಮನೆ ಬಿಡುವುದಿಲ್ಲ’ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್‌ ಇಲ್ಲಿ ಕಟುವಾಗಿ ಹೇಳಿದ್ದು, ಈ ಮೂಲಕ ನೆರೆ ರಾಷ್ಟ್ರ ಚೀನಾಗೆ ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆ.

‘ಭಾರತದ ಸೇನೆ ಏನು ಮಾಡಿತು, ಭಾರತ ಸರ್ಕಾರ ಯಾವ ನಿರ್ಧಾರ ಕೈಗೊಂಡಿತ್ತು ಎಂಬುದನ್ನು ನಾನು ಇಲ್ಲಿ ಬಹಿರಂಗವಾಗಿ ಹೇಳಲು ಬಯಸುವುದಿಲ್ಲ. ಆದರೆ, ಭಾರತಕ್ಕೆ ಅಪಾಯ ಒಡ್ಡಿದರೆ, ಯಾರನ್ನೂ ಬಿಡುವುದಿಲ್ಲ ಎಂಬ ಸಂದೇಶವಂತೂ ಸ್ಪಷ್ಟವಾಗಿ ಚೀನಾಗೆ ತಲುಪಿದೆ’ ಎಂದರು.

ಸ್ಯಾನ್‌ಫ್ರಾನ್ಸಿಸ್ಕೊದಲ್ಲಿ ಶುಕ್ರವಾರ ಭಾರತ–ಅಮೆರಿಕನ್ನರ ಸಮುದಾಯವನ್ನು ಉದ್ದೇಶಿಸಿ ಅವರು ಮಾತನಾಡಿದರು. ಭಾರತ ಮತ್ತು ಅಮೆರಿಕ ನಡುವಣ 2+2 ಸಚಿವರ ಹಂತದ ಮಾತುಕತೆಗಾಗಿ ರಾಜನಾಥ್‌ ಸಿಂಗ್ ಇಲ್ಲಿಗೆ ಆಗಮಿಸಿದ್ದಾರೆ.

‘ಪ್ರಧಾನಿ ಮೋದಿ ನೇತೃತ್ವದಲ್ಲಿ ಭಾರತ, ಆರ್ಥಿಕತೆಯಲ್ಲಿ ವಿಶ್ವದಲ್ಲಿಯೇ ಉನ್ನತ ಮೂರು ರಾಷ್ಟ್ರಗಳಲ್ಲಿ ಒಂದಾಗುವ ಹಾದಿಯಲ್ಲಿದೆ. ಶೂನ್ಯ ಲೆಕ್ಕಾಚಾರ’ದ ರಾಜತಾಂತ್ರಿಕ ವ್ಯವಹಾರದಲ್ಲಿ ಭಾರತಕ್ಕೆ ನಂಬಿಕೆ ಇಲ್ಲ. ಒಂದು ರಾಷ್ಟ್ರದ ಬಾಂಧವ್ಯವನ್ನು ಬಲಿಕೊಟ್ಟು, ಇನ್ನೊಂದು ರಾಷ್ಟ್ರದ ಜೊತೆಗೆ ಬಾಂಧವ್ಯ ಹೊಂದಲೂ ಬಯಸುವುದಿಲ್ಲ’ ಎಂದೂ ಇದೇ ಸಂದರ್ಭದಲ್ಲಿ ಅಮೆರಿಕಕ್ಕೂ ಪರೋಕ್ಷವಾಗಿ ಸಂದೇಶ ರವಾನಿಸಿದರು.

ಉಕ್ರೇನ್‌–ರಷ್ಯಾ ಯುದ್ಧದ ಹಿನ್ನೆಲೆಯಲ್ಲಿ ರಷ್ಯಾ ಕುರಿತಂತೆ ಅಮೆರಿಕವು ದೇಶದ ಮೇಲೆ ಒತ್ತಡ ಹೇರುತ್ತಿರುವುದನ್ನು ನೇರವಾಗಿ ಉಲ್ಲೇಖ ಮಾಡದ ಅವರು, ‘ಭಾರತಕ್ಕೆ ಶೂನ್ಯ ಲೆಕ್ಕಾಚಾರದ ರಾಜ ತಾಂತ್ರಿಕತೆಯಲ್ಲಿ ನಂಬಿಕೆ ಇಲ್ಲ’ ಎಂದು ಸ್ಪಷ್ಟಪಡಿಸಿದರು.

‘ಒಂದು ದೇಶದೊಂದಿಗೆಭಾರತ ಉತ್ತಮವಾದ ಬಾಂಧವ್ಯವನ್ನು ಹೊಂದಿದೆ ಎಂಬುದರ ಅರ್ಥ, ಇನ್ನೊಂದು ದೇಶದ ಜೊತೆಗಿನ ಬಾಂಧವ್ಯ ಕಳೆದುಕೊಳ್ಳಲು ಸಿದ್ಧವಿದೆ ಎಂಬುದಲ್ಲ. ಇಂತಹ ರಾಜತಾಂತ್ರಿಕತೆಯನ್ನು ಭಾರತ ಎಂದಿಗೂ ಪಾಲಿಸಿಲ್ಲ’ ಎಂದು ನಿಲುವು ಖಚಿತಪಡಿಸಿದರು.

‘ಉಭಯ ದೇಶಗಳಿಗೂ ಪರಸ್ಪರ ಲಾಭವಾಗುವಂತೆ ದ್ವಿಪಕ್ಷೀಯ ಬಾಂಧವ್ಯವನ್ನು ಹೊಂದುವುದನ್ನು ಭಾರತ ಬಯಸುತ್ತದೆ. ಈಗ ವಿಶ್ವ ಮಟ್ಟದಲ್ಲಿ ಭಾರತದ ವರ್ಚಸ್ಸು ಬದಲಾಗಿದೆ. ಪ್ರತಿಷ್ಠೆಯೂ ಎತ್ತರಕ್ಕೇರಿದೆ. ಮುಂದಿನ ಕೆಲವೇ ವರ್ಷಗಳಲ್ಲಿ ಆರ್ಥಿಕತೆಯಲ್ಲಿ ಭಾರತವು ವಿಶ್ವದ ಮೊದಲ ಮೂರು ರಾಷ್ಟ್ರಗಳಲ್ಲಿ ಒಂದಾಗುವುದನ್ನು ಜಗತ್ತಿನ ಯಾವುದೇ ಶಕ್ತಿಯೂ ತಡೆಯಲಾಗದು’ ಎಂದು ಹೇಳಿದರು.

‘ಜಗತ್ತಿನ ಯಾವುದೇ ದೇಶವು ಅಭ್ಯುದಯ ಸಾಧಿಸಲು ಬಯಸಿದಲ್ಲಿ, ಖಂಡಿತವಾಗಿಯೂ ಅದು ಭಾರತದ ಜೊತೆಗೆ ಉಜ್ವಲವಾದ ವಾಣಿಜ್ಯ ವಹಿವಾಟು ಹೊಂದರಲು ಬಯಸುತ್ತದೆ’ ಎಂದು ರಾಜನಾಥ್‌ ಸಿಂಗ್‌ ಪ್ರತಿಪಾದಿಸಿದರು.

ಭಾರತ–ಚೀನಾ ಗಡಿಯಲ್ಲಿ ಲಡಾಖ್‌ ಬಳಿ ಮೇ 5, 2020ರ ಘರ್ಷಣೆ ಬಳಿಕ ಭಾರತ–ಚೀನಾ ನಡುವಿನ ಬಾಂಧವ್ಯಕ್ಕೆ ಧಕ್ಕೆಯಾಗಿದೆ. ಜೂನ್‌ 15, 2020ರಲ್ಲಿ ಗಾಲ್ವಾನ್‌ ಕಣಿವೆಯಲ್ಲಿ ನಡೆದಿದ್ದ ಘರ್ಷಣೆಯಲ್ಲಿ 20 ಭಾರತೀಯ ಯೋಧರು ಮೃತಪಟ್ಟಿದ್ದರು. ಬಾಂಧವ್ಯ ಸುಧಾರಣೆ ಕ್ರಮವಾಗಿ ಉಭಯ ದೇಶಗಳ ನಡುವೆ ಸೇನಾ ಹಂತದಲ್ಲಿಯೇ ಸುಮಾರು 15 ಸುತ್ತಿನ ಮಾತುಕತೆ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT