ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಮ್ರಾನ್ ಖಾನ್ ‘ಮಿನಿ ಟ್ರಂಪ್’ ಎಂದ ಮಾಜಿ ಪತ್ನಿ ರೆಹಮ್ ಖಾನ್

Last Updated 4 ಏಪ್ರಿಲ್ 2022, 5:08 IST
ಅಕ್ಷರ ಗಾತ್ರ

ಇಸ್ಲಾಮಾಬಾದ್: ತಮ್ಮನ್ನು ಅಧಿಕಾರದಿಂದ ಕೆಳಗಿಳಿಸುವ ಅವಿಶ್ವಾಸ ನಿರ್ಣಯವನ್ನು ಅಂಗೀಕರಿಸದಂತೆ ಮಾಡಿ, ಅಧ್ಯಕ್ಷರ ಮೂಲಕ ಸಂಸತ್ತನ್ನು ವಿಸರ್ಜಿಸಿದ ಪಾಕಿಸ್ತಾನದ ಹಂಗಾಮಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಅವರ ಮಾಜಿ ಪತ್ನಿ ರೇಶಮ್ ಖಾನ್, ‘ಮಿನಿ ಟ್ರಂಪ್’ ಎಂದು ಕರೆದಿದ್ದಾರೆ. ಅಲ್ಲದೆ, ಅವರ ಇತ್ತೀಚಿನ ಟ್ವೀಟ್‌ಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಟ್ವಿಟರ್ ಸಂಸ್ಥೆಯನ್ನು ಒತ್ತಾಯಿಸಿದ್ದಾರೆ.

ಪಾಕಿಸ್ತಾನದ ಪ್ರಧಾನಿ ವ್ಯಾಪಕ ಹಿಂಸಾಚಾರವನ್ನು ಪ್ರಚೋದಿಸುತ್ತಿದ್ದಾರೆ. ರಾಜಕೀಯ ವಿರೋಧಿಗಳನ್ನು ದೇಶದ್ರೋಹಿಗಳು ಮತ್ತು ಅಮೆರಿಕನ್ನರ ಏಜೆಂಟರು ಎಂದು ಹೆಸರಿಸುವ ಮೂಲಕ ಅವರ ಮೇಲೆ ದಾಳಿಯನ್ನು ಪ್ರಚೋದಿಸುತ್ತಿದ್ದಾರೆ. ದಯವಿಟ್ಟು ಗಮನಿಸಿ ಮತ್ತು ಅವರ ಟ್ವಿಟರ್ ಖಾತೆಯನ್ನು ಅಮಾನತುಗೊಳಿಸಿ ಎಂಬ ರಾಜಕೀಯ ವಿಶ್ಲೇಷಕ ಅದ್ನಾನ್ ಹಫೀಜ್ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ರೆಹಮ್ ಖಾನ್, ತುಂಬಾ ಒಳ್ಳೆಯ ಉಪಾಯ! ಈ ‘ಮಿನಿ ಟ್ರಂಪ್’ ಹಿಂಸಾಚಾರ ಪ್ರಚೋದಿಸುವುದನ್ನು ಮತ್ತು ನಮ್ಮ ಭದ್ರತೆ ಹಾಗೂ ಸ್ಥಿರತೆಗೆ ಹಾನಿಯುಂಟುಮಾಡುವುದನ್ನು ತಡೆಯಬೇಕು ಎಂದಿದ್ದಾರೆ.

ಖೈಬರ್ ಪಖ್ತುಂಖ್ವಾ ಮುಖ್ಯಮಂತ್ರಿ ಮಹಮೂದ್ ಖಾನ್ ಅವರಿಗೆ ಪಾಕ್ ಪ್ರಧಾನಿ ಅಭಿನಂದನಾ ಟ್ವೀಟ್‌ಗೆ ಸಂಬಂಧಿಸಿದಂತೆಯೂ ರೆಹಮ್ ಖಾನ್ ಕಿಡಿಕಾರಿದ್ದಾರೆ. ಸ್ಥಳೀಯ ಚುನಾವಣೆಯಲ್ಲಿ ತಮ್ಮ ಪಕ್ಷದ ಗೆಲುವನ್ನು ಉಲ್ಲೇಖಿಸಿ, 'ಈ ಕ್ಷೇತ್ರಗಳಲ್ಲಿ ಭವಿಷ್ಯದಲ್ಲಿ ಏನು ಕಾಯುತ್ತಿದೆ ಎಂಬುದರ ಕುರಿತು ಎಲ್ಲಾ ದೇಶದ್ರೋಹಿಗಳಿಗೆ ಇದು ಆರಂಭಿಕ ಎಚ್ಚರಿಕೆ' ಎಂದು ಇಮ್ರಾನ್ ಟ್ವೀಟ್ ಮಾಡಿದ್ದರು.

‘ನಾಳೆ ನೀವು ಮತ ಚಲಾಯಿಸಿದರೆ ಭವಿಷ್ಯವನ್ನು ನೋಡುತ್ತೀರಿ. ಸಾರ್ವಜನಿಕರಿಂದ ತಿರಸ್ಕರಿಸಲ್ಪಟ್ಟಿದ್ದೇವೆ ಎಂದು ಅವರಿಗೆ(ವಿರೋಧಿಗಳು) ತಿಳಿದಿದೆ. ನಾಳೆ ನಾವು ಗೆಲ್ಲುವುದನ್ನು ನೀವು ನೋಡುತ್ತೀರಿ’ ಎಂದು ಇಮ್ರಾನ್ ಖಾನ್ ಟ್ವೀಟ್‌ನಲ್ಲಿ ಹೇಳಿದ್ದಾರೆ.

ಈ ಮಧ್ಯೆ, ‘ಹಿಂಸಾಚಾರವನ್ನು ಪ್ರಚೋದಿಸುವ ಅಥವಾ ಕಾನೂನು ಸುವ್ಯವಸ್ಥೆಯನ್ನು ಹಾಳು ಮಾಡುವ ಪಿಟಿಐ ಪಕ್ಷದ ಬೆಂಬಲಿಗರನ್ನು ಬಂಧಿಸಿ ಕಂಬಿಗಳ ಹಿಂದೆ ಹಾಕಬೇಕು. ಅವರ ವಿರುದ್ಧ ದೇಶದ್ರೋಹ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಬೇಕು’ ಎಂದು ಮಾಜಿ ಪ್ರಧಾನಿ ನವಾಜ್ ಷರೀಫ್ ಪುತ್ರಿ ಮರ್ಯಮ್ ನವಾಜ್ ಷರೀಫ್ ಹೇಳಿದ್ದಾರೆ.

ಭಾರೀ ನಾಟಕೀಯ ಬೆಳವಣಿಗೆಯಲ್ಲಿ ನಿನ್ನೆ ಪಾಕಿಸ್ತಾನ ಸಂಸತ್ತಿನ ಡೆಪ್ಯೂಟಿ ಸ್ಪೀಕರ್ ಸರ್ಕಾರ ವಿರುದ್ಧದ ಅವಿಶ್ವಾಸ ನಿರ್ಣಯವನ್ನು ಅಂಗೀಕರಿಸಲು ನಿರಾಕರಿಸಿದ್ದರು.

342 ಸದಸ್ಯ ಬಲದ ರಾಷ್ಟ್ರೀಯ ಸಂಸತ್ತಿನಲ್ಲಿ ಬಹುಮತವನ್ನು ಕಳೆದುಕೊಂಡಿದ್ದ ಖಾನ್, ಅಧ್ಯಕ್ಷರ ಮೂಲಕ ಶೀಘ್ರ ಚುನಾವಣೆಗೆ ಆದೇಶ ಮಾಡಿಸಿ ವಿರೋಧಿಗಳ ಯೋಜನೆಯನ್ನು ಬುಡಮೇಲು ಮಾಡಿದ್ದರು. ಅಧ್ಯಕ್ಷ ಅಲ್ವಿ ಅವರು ಪ್ರಧಾನ ಮಂತ್ರಿಯ ಸಲಹೆಯಂತೆ ರಾಷ್ಟ್ರೀಯ ಸಂಸತ್ತನ್ನು ವಿಸರ್ಜಿಸಿ ಮೂರು ತಿಂಗಳೊಳಗೆ ಅಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದೆ ಎಂದು ಘೋಷಿಸಿದ್ದಾರೆ.

‘ಪಾಕಿಸ್ತಾನದ ಸಾಂವಿಧಾನಿಕ ಇತಿಹಾಸದಲ್ಲಿ ಈ ದಿನವನ್ನು ಕರಾಳ ದಿನವಾಗಿ ನೆನಪಿಸಿಕೊಳ್ಳಲಾಗುತ್ತದೆ’ ಎಂದು ವಿರೋಧಿ ಬಣದ ನಾಯಕ ಶೆಹಬಾಜ್ ಷರೀಫ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT