ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್| 33 ಸಂಸತ್ ಕ್ಷೇತ್ರಗಳ ಉಪಚುನಾವಣೆಗೆ ಇಮ್ರಾನ್ ಪಕ್ಷದಿಂದ ಒಬ್ಬರೇ ಅಭ್ಯರ್ಥಿ!

Last Updated 30 ಜನವರಿ 2023, 8:54 IST
ಅಕ್ಷರ ಗಾತ್ರ

ಲಾಹೋರ್‌: ಪಾಕಿಸ್ತಾನದ ಪದಚ್ಯುತ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಅವರು ಮಾರ್ಚ್ 16 ರಂದು ನಡೆಯಲಿರುವ 33 ಸಂಸತ್‌ ಸ್ಥಾನಗಳಿಗೆ ಸ್ಪರ್ಧಿಸಲಿದ್ದಾರೆ ಎಂದು ಅವರ ಪಕ್ಷ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಘೋಷಿಸಿದೆ. ಪಾಕಿಸ್ತಾನದಲ್ಲಿ ಅಸ್ತಿತ್ವದಲ್ಲಿರುವ ಸಮ್ಮಿಶ್ರ ಸರ್ಕಾರದ ಮೇಲೆ ಒತ್ತಡ ಹೇರುವ ಪ್ರಯತ್ನವಾಗಿ ಇಮ್ರಾನ್‌ ಈ ನಿರ್ಧಾರಕ್ಕೆ ಬಂದಿದ್ದಾರೆ.

ಭಾನುವಾರ ಸಂಜೆ ಲಾಹೋರ್‌ನಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ‘ಪಿಟಿಐ’ ಉಪಾಧ್ಯಕ್ಷ ಮತ್ತು ಮಾಜಿ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಷಿ, ‘ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ’ ಎಂದು ಹೇಳಿದರು.

‘ಎಲ್ಲಾ 33 ಸಂಸತ್‌ ಸ್ಥಾನಗಳಲ್ಲಿ ಇಮ್ರಾನ್ ಖಾನ್ ಅವರೇ ಪಿಟಿಐನ ಏಕೈಕ ಅಭ್ಯರ್ಥಿಯಾಗಲಿದ್ದಾರೆ. ಭಾನುವಾರ ಲಾಹೋರ್‌ನ ಜಮಾನ್ ಪಾರ್ಕ್‌ನಲ್ಲಿ ಖಾನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ’ ಎಂದು ಖುರೇಷಿ ತಿಳಿಸಿದರು.

ಮಾರ್ಚ್ 16 ರಂದು ‘ರಾಷ್ಟ್ರೀಯ ಅಸೆಂಬ್ಲಿಯ (ಪಾಕಿಸ್ತಾನದ ಸಂಸತ್ತು) 33 ಸ್ಥಾನಗಳಿಗೆ ಉಪಚುನಾವಣೆ ನಡೆಯಲಿದೆ ಎಂದು ಪಾಕಿಸ್ತಾನದ ಚುನಾವಣಾ ಆಯೋಗ (ಇಸಿಪಿ) ಶುಕ್ರವಾರ ಪ್ರಕಟಿಸಿತ್ತು.

‘ಈ ಕ್ಷೇತ್ರಗಳಿಂದ ಈ ಹಿಂದೆ ಕಣಕ್ಕಿಳಿದಿದ್ದ ಪಕ್ಷದ ನಾಯಕರು ಖಾನ್ ಅವರ ಪರವಾಗಿ ತಾವೇ ನಾಮಪತ್ರ ಸಲ್ಲಿಸುತ್ತಾರೆ’ ಎಂದು ಪಕ್ಷ ತಿಳಿಸಿದೆ.

ಕಳೆದ ವರ್ಷ ಏಪ್ರಿಲ್‌ನಲ್ಲಿ ಸಂಸತ್ತಿನಲ್ಲಿ ಅವಿಶ್ವಾಸದ ಮೂಲಕ ಇಮ್ರಾನ್‌ ಖಾನ್‌ ಅವರನ್ನು ಪ್ರಧಾನಿ ಸ್ಥಾನದಿಂದ ಕೆಳಗಿಳಿಸಿದ ನಂತರ ಅವರ ಪಕ್ಷದ ಸಂಸತ್‌ ಸದಸ್ಯರು ತಮ್ಮ ಸ್ಥಾನಗಳಿಗೆ ಸಾಮೂಹಿಕವಾಗಿ ರಾಜೀನಾಮೆ ನೀಡಿದ್ದರು.

ಆದರೆ, ಸ್ಪೀಕರ್ ರಾಜಾ ಫರ್ವೇಜ್‌ ಅಶ್ರಫ್ ಅವರು ರಾಜೀನಾಮೆಗಳನ್ನು ಆರಂಭದಲ್ಲಿ ಅಂಗೀಕರಿಸಿರಲಿಲ್ಲ. ’ಸಂಸದರು ಸ್ವಇಚ್ಛೆಯಿಂದ ರಾಜೀನಾಮೆ ನೀಡಿದ್ದಾರೆಯೇ ಎಂಬುದನ್ನು ವೈಯಕ್ತಿಕವಾಗಿ ಪರಿಶೀಲಿಸುವ ಅಗತ್ಯವಿದೆ’ ಎಂದು ಹೇಳಿದರು.

ಕಳೆದ ತಿಂಗಳು, 35 ಪಿಟಿಐ ಸಂಸದರ ರಾಜೀನಾಮೆಯನ್ನು ಸ್ಪೀಕರ್ ಅಂಗೀಕರಿಸಿದ್ದರು. ನಂತರ ಚುನಾವಣಾ ಆಯೋಗವು ಸಂಸತ್‌ ಸ್ಥಾನಗಳನ್ನು ಡಿ–ನೋಟಿಫೈ ಮಾಡಿದೆ.

ತರುವಾಯ, ಸ್ಪೀಕರ್ ಅವರು ಉಳಿದ 43 ಪಿಟಿಐ ಸಂಸದರ ರಾಜೀನಾಮೆಗಳನ್ನು ಅಂಗೀಕರಿಸಿದರು. ಈ ಸ್ಥಾನಗಳನ್ನು ಪಾಕಿಸ್ತಾನ ಚುನಾವಣಾ ಆಯೋಗ ಇನ್ನಷ್ಟೇ ಡಿ–ನೋಟಿಫೈ ಮಾಡಬೇಕಾಗಿದೆ.

ಆಡಳಿತಾರೂಢ ‘ಪಾಕಿಸ್ತಾನ್ ಡೆಮಾಕ್ರಟಿಕ್ ಮೂವ್‌ಮೆಂಟ್ (ಪಿಡಿಎಂ)’ ವಿರುದ್ಧ ಖಾನ್‌ ಬಹು ಸ್ಥಾನಗಳಲ್ಲಿ ಚುನಾವಣೆಗೆ ಸ್ಪರ್ಧಿಸುತ್ತಿರುವುದು ಇದೇ ಮೊದಲಲ್ಲ. ಅಕ್ಟೋಬರ್ 2022 ರಲ್ಲಿ ನಡೆದ ಹಿಂದಿನ ಉಪಚುನಾವಣೆಗಳಲ್ಲಿ, ಪಿಟಿಐ ಅಧ್ಯಕ್ಷರು ಎಂಟು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ್ದರು. ಆರರಲ್ಲಿ ಗೆಲ್ಲುವ ಮೂಲಕ ಮೈತ್ರಿ ಸರ್ಕಾರಕ್ಕೆ ಸಡ್ಡು ಹೊಡೆದಿದ್ದರು.

33 ಕ್ಷೇತ್ರಗಳಲ್ಲಿ ಪಂಜಾಬ್‌ನ 12, ಖೈಬರ್ ಪಖ್ತುಂಖ್ವಾದ 8, ಇಸ್ಲಾಮಾಬಾದ್‌ನ 3, ಸಿಂಧ್‌ನ 9 ಮತ್ತು ಬಲೂಚಿಸ್ತಾನ್‌ನದ 1 ಕ್ಷೇತ್ರ ಸೇರಿದೆ.

ಒಂಬತ್ತು ಪಕ್ಷಗಳ ಮೈತ್ರಿಕೂಟದ ಪಿಡಿಎಂ ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದು ಹೇಳಿದೆ. ಪಿಡಿಎಂ ತನ್ನ ನಿರ್ಧಾರಕ್ಕೆ ಅಂಟಿಕೊಂಡಿದ್ದೇ ಆದರೆ, ಪಿಟಿಐ ಯಾವುದೇ ಸಮಸ್ಯೆಯಿಲ್ಲದೆ ಎಲ್ಲಾ ಸ್ಥಾನಗಳನ್ನು ಮರಳಿ ಪಡೆಯಲಿದೆ.

ಇವುಗಳನ್ನೂ ಓದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT