ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಾಲಿನ್ಯ ನಿಯಂತ್ರಣ: 'ಇಂಧನ ಕ್ಷೇತ್ರದಲ್ಲೇ ಇದೆ ಭಾರತಕ್ಕೆ ಅಪಾರ ಸಾಮರ್ಥ್ಯ’

ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಬರ್ಕ್‌ಲೇ ಪ್ರಯೋಗಾಲಯದ ಸಂಶೋಧನೆ
Last Updated 30 ಮಾರ್ಚ್ 2021, 6:50 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ‘ಭಾರತವು ವಿದ್ಯುತ್ ಕ್ಷೇತ್ರದಲ್ಲಿ ಸ್ವಚ್ಛ ಇಂಧನ ಉತ್ಪಾದನೆ ಮಾಡುವ ಅಪಾರ ಸಾಮರ್ಥ್ಯ ಹೊಂದಿದೆ. ತನ್ನ ಹಸಿರು ಇಂಧನ ಉತ್ಪಾದನೆ ಪ್ರಮಾಣವನ್ನು ಹೆಚ್ಚಿಸುವ ಮೂಲಕ 2018ರಲ್ಲಿ ಇದ್ದಷ್ಟೇ ಪ್ರಮಾಣದ ಮಾಲಿನ್ಯ ಪ್ರಮಾಣವನ್ನು ದಶಕದ ನಂತರವೂ ಕಾಯ್ದುಕೊಳ್ಳುವುದು ಸಾಧ್ಯವಿದೆ’ ಎಂದು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಬರ್ಕಲೇ ಪ್ರಯೋಗಾಲಯ ನಡೆಸಿದ ಸಂಶೋಧನೆಯಲ್ಲಿ ತಿಳಿಸಲಾಗಿದೆ.

‘ಭಾರತವು ತನ್ನ ಹಸಿರು ಇಂಧನ ಉತ್ಪಾದನಾ ಗುರಿ 450 ಗಿಗಾವಾಟ್‌ ಅನ್ನು ಒಂದು ದಶಕದಲ್ಲಿ 600 ಗಿಗಾವಾಟ್‌ಗೆ ಹೆಚ್ಚಿಸಿಕೊಳ್ಳುವುದು ಸಾಧ್ಯವಿದೆ. ಇದು ಸಾಧ್ಯವಾದರೆ ಭಾರತದಲ್ಲಿ 2018ರಲ್ಲಿ ಇದ್ದಷ್ಟೇ ಹಸಿರು ಮನೆ ಪರಿಣಾಮ ಉಳಿದುಕೊಳ್ಳಲಿದೆ. ಈ ಮೂಲಕ ಜಾಗತಿಕ ಪರಿಸರ ಮಾಲಿನ್ಯ ತಡೆಯುವಲ್ಲಿ ದೇಶವು ಬಹುದೊಡ್ಡ ಕೊಡುಗೆ ನೀಡಿದಂತಾಗುತ್ತದೆ’ ಎಂದು ‘ನ್ಯಾಷನಲ್‌ ಅಕಾಡೆಮಿಕ ಆಫ್‌ ಸೈನ್ಸಸ್‌’ ನಲ್ಲಿ ಪ್ರಕಟವಾದ ಅಧ್ಯಯನ ವರದಿಯಲ್ಲಿ ತಿಳಿಸಲಾಗಿದೆ.

‘ನಾವು ಗಮನಿಸಿರುವಂತೆ ಭಾರತದಲ್ಲಿ ನವೀಕರಿಸಬಹುದಾದ ಇಂಧನ ಉತ್ಪಾದನೆಗೆ ತಗಲುವ ವೆಚ್ಚ ಕಡಿಮೆ ಇದೆ. ‌ಸೌರ ಮತ್ತು ಪವನ ವಿದ್ಯುತ್ ಕ್ಷೇತ್ರದಲ್ಲೇ ದೇಶಕ್ಕೆ ಬೇಕಾದ ಅಗತ್ಯ ವಿದ್ಯುತ್ ಅನ್ನು ಪೂರೈಸಿಕೊಳ್ಳಬಹುದು. ಇನ್ನು ಮುಂದೆ ಕಲ್ಲಿದ್ದಲಿನಂತಹ ಪಳೆಯುಳಿಕೆ ಇಂಧನ ಉತ್ಪಾದನಾ ಘಟಕಗಳಿಗೆ ಹೂಡಿಕೆ ಮಾಡುವ ಬದಲಿಗೆ ನವೀಕರಿಸಬಹುದಾದ ಇಂಧನ ಮೂಲಗಳಿಗೇ ಹೆಚ್ಚು ಆದ್ಯತೆ ಕೊಡಬೇಕು. ಬ್ಯಾಟರಿ ಸಾಮರ್ಥ್ಯ ಹೆಚ್ಚಿಸುವ ಮೂಲಕ ವಿದ್ಯುತ್ ದಾಸ್ತಾನು ಮಾಡುವ ದಾರಿಯನ್ನೂ ಕಂಡುಕೊಂಡರೆ ದೇಶದ ವಿದ್ಯುತ್ ಕ್ಷೇತ್ರದಲ್ಲಿ ಬಹಳಷ್ಟು ಸುಧಾರಣೆಗಳ ಜತೆಗೆ ಮಾಲಿನ್ಯ ನಿಯಂತ್ರಣ ಸಾಧ್ಯವಿದೆ’ ಎಂದು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಸಂಟಾ ಬಾರ್ಬರಾ ಮತ್ತು ಬರ್ಕ್‌ಲೇಪ್ರಯೋಗಾಲಯದ ವಿಜ್ಞಾನಿ ರಣಜಿತ್ ದೇಶ್‌ಮುಖ್‌ ಅಭಿಪ್ರಾಯಪಟ್ಟಿದ್ದಾರೆ.

ಭವಿಷ್ಯದಲ್ಲಿ ಭಾರತದಲ್ಲಿಸೂರ್ಯನ ಬೆಳಕು ಕಡಿಮೆ ಇರುವ ಸಮಯ ಹಾಗೂ ಗಾಳಿ ಬೀಸುವ ಪ್ರಮಾಣ ಕಡಿಮೆ ಇರುವ ಸಮಯದಲ್ಲಷ್ಟೇ ವಿದ್ಯುತ್‌ಗೆ ಕೊರತೆ ಉಂಟಾಗಬಹುದು. ಅದನ್ನು ನೀಗಿಸುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಂಡರೆ ಹಸಿರು ಇಂಧನ ಕ್ಷೇತ್ರದಲ್ಲಿ ಭಾರತ ಜಾಗತಿಕವಾಗಿ ಸಾಕಷ್ಟು ಕೊಡುಗೆ ನೀಡಿದಂತಾಗುತ್ತದೆ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT