ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಕ್ರೇನ್‌ನಲ್ಲಿ ತುರ್ತಾಗಿ ಶಾಂತಿ ಸ್ಥಾಪನೆ ಅಗತ್ಯ: ಭಾರತ–ಅಮೆರಿಕ ಸಹಮತ

Last Updated 7 ಜನವರಿ 2023, 12:33 IST
ಅಕ್ಷರ ಗಾತ್ರ

ವಾಷಿಂಗ್ಟನ್: ಉಕ್ರೇನ್‌ನಲ್ಲಿ ಶಾಂತಿ ಸ್ಥಾಪನೆಯ ಪ್ರಕ್ರಿಯೆಗೆ ಒತ್ತು ನೀಡುವುದು ಈಗಿನ ಅಗತ್ಯ ಎಂಬುದಕ್ಕೆ ಭಾರತ ಮತ್ತು ಅಮೆರಿಕ ಸಹಮತ ವ್ಯಕ್ತಪಡಿಸಿವೆ ಎಂದು ಜೋ ಬೈಡನ್ ಆಡಳಿತವು ಹೇಳಿದೆ.

ರಕ್ಷಣಾ ಇಲಾಖೆಯ ವಕ್ತಾರ ನೆಡ್ ಪ್ರೈಸ್‌ ಅವರು, ಶಾಂತಿ ಸ್ಥಾಪನೆಯ ಪ್ರಕ್ರಿಯೆಯಲ್ಲಿ ಅಮೆರಿಕವು ಭಾರತವನ್ನು ಒಳಗೊಂಡು ತನ್ನ ಭಾಗಿದಾರ ದೇಶಗಳ ಜೊತೆಗೆ ಸಂಪರ್ಕದಲ್ಲಿದೆ ಎಂದು ತಿಳಿಸಿದರು.

‘ಉಕ್ರೇನ್‌ನಲ್ಲಿ ಶಾಂತಿ ಸ್ಥಾಪನೆ ಅಗತ್ಯ ಎಂಬುದಕ್ಕೆ ಭಾರತ–ಅಮೆರಿಕದ ಸಹಮತವಿದೆ. ಇದೇ ಅಭಿಪ್ರಾಯವನ್ನು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರೂ ನೀಡಿದ್ದಾರೆ. ವಿಶ್ವದ ನಾಯಕರು ಸೇರಿದ್ದ ಜಿ–20 ಸಭೆಯಲ್ಲಿ ಶಾಂತಿ ಸ್ಥಾಪನೆಯ ಅಗತ್ಯ ಕುರಿತಂತೆ ಅವರು ಬಲವಾಗಿ ಪ್ರತಿಪಾದಿಸಿದ್ದರು. ಇದು, ಸ್ವಾಗತಾರ್ಹ ನಡೆ’ ಎಂದು ಪ್ರೈಸ್‌ ಹೇಳಿದರು.

ಶಾಂತಿ ಸ್ಥಾಪನೆಯ ಯತ್ನದಲ್ಲಿ ನಾವು ಭಾರತದ ಬೆಂಬಲವನ್ನು ಸ್ವಾಗತಿಸುತ್ತೇವೆ. ಭಾರತವು ಮಾನವೀಯ ನೆಲೆಯಲ್ಲಿ ನೆರವು ನೀಡಿದೆ. ಇದು, ಯುದ್ಧದ ಯುಗವಲ್ಲ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ನಿಲುವನ್ನು ಒಪ್ಪುತ್ತೇವೆ. ಈ ನಿಲುವು ಜಿ–20 ಸಭೆಯಲ್ಲಿಯೂ ಪ್ರಮುಖವಾಗಿ ಧ್ವನಿಸಿತ್ತು ಎಂದು ಅವರು ಹೇಳಿದರು.

ಉಕ್ರೇನ್ ಮತ್ತು ರಷ್ಯಾ ಎರಡರ ಜೊತೆಗೂ ಬಾಂಧವ್ಯವನ್ನು ಹೊಂದಿರುವ ಭಾರತದಂತಹ ದೇಶಗಳು ಯುದ್ಧವನ್ನು ಕೊನೆಗಾಣಿಸುವ ಇಚ್ಛಾಶಕ್ತಿ ಪ್ರದರ್ಶಿಸಬೇಕು ಎಂದು ಅಮೆರಿಕ ರಕ್ಷಣಾ ಇಲಾಖೆಯ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದರು.

ರಷ್ಯಾ ನಡೆಸುತ್ತಿರುವ ಯುದ್ಧದ ಪರಿಣಾಮ ಕೇವಲ ಉಕ್ರೇನ್ ಮೇಲಷ್ಟೇ ಆಗಿಲ್ಲ. ಅದಕ್ಕೂ ಮೀರಿದ ಪರಿಣಾಮಗಳು ವಿಶ್ವದಾದ್ಯಂತ ವಿವಿಧ ದೇಶಗಳ ಮೇಲೂ ಬೀರಿವೆ ಎಂದು ಹೇಳಿದರು.

ವಿದೇಶಾಂಗ ಸಚಿವ ಎಸ್‌.ಜೈಶಂಕರ್ ಅವರು ಕಳೆದ ನವೆಂಬರ್‌ನಲ್ಲಿ ಮಾಸ್ಕೊಗೆ ಭೇಟಿ ನೀಡಿದ್ದಾಗ, ಕೋವಿಡ್‌ ಪರಿಸ್ಥಿತಿಯ ಎರಡು ವರ್ಷದ ನಂತರ ಶುರುವಾಗಿರುವ ಈ ಯುದ್ಧವು ಆರ್ಥಿಕತೆ, ಮುಖ್ಯವಾಗಿ ಅಭಿವೃದ್ಧಿಶೀಲ ದೇಶಗಳ ಮೇಲೆ ಗಂಭೀರ ಸ್ವರೂಪದ ಪರಿಣಾಮವನ್ನು ಉಂಟುಮಾಡಿದೆ ಎಂದು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT