ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಂಗ್‌ಕಾಂಗ್‌ ಚುನಾವಣೆಗೆ ಚೀನಾ ನಿರ್ಬಂಧ: ಭಾರತ ಮೂಲದ ಅಮೆರಿಕ ಸಂಸದರ ಖಂಡನೆ

ಹಾಂಗ್‌ಕಾಂಗ್‌ ಚುನಾವಣಾ ವ್ಯವಸ್ಥೆಗೆ ಚೀನಾ ಪ್ರಸ್ತಾಪಿಸಿರುವ ನಿರ್ಬಂಧ
Last Updated 9 ಮಾರ್ಚ್ 2021, 6:41 IST
ಅಕ್ಷರ ಗಾತ್ರ

ವಾಷಿಂಗ್ಟನ್‌ : ಹಾಂಗ್‌ಕಾಂಗ್‌ನ ಚುನಾವಣಾ ವ್ಯವಸ್ಥೆಯ ಮೇಲೆ ಬೀಜಿಂಗ್‌ ಹೇರಲು ಮುಂದಾಗಿರುವ ಬದಲಾವಣೆಗಳ ಬಗ್ಗೆ ಅಮೆರಿಕದ ಸಂಸತ್ತಿನ ಉಭಯ ಸದನಗಳ ಸದಸ್ಯರ ಗುಂಪು ತೀವ್ರ ಕಳವಳ ವ್ಯಕ್ತಪಡಿಸಿದೆ.

ಜನಪ್ರತಿನಿಧಿ ಸಭೆಯಲ್ಲಿನ ವಿದೇಶಾಂಗ ವ್ಯವಹಾರಗಳ ಸಮಿತಿಯ ಏಷ್ಯಾ ಉಪ ಸಮಿತಿಯ ಅಧ್ಯಕ್ಷರಾಗಿರುವ ಭಾರತೀಯ ಸಂಜಾತ ಆಮಿ ಬೇರಾ ಅವರು ಈ ಗುಂಪಿನ ನೇತೃತ್ವ ವಹಿಸಿದ್ದಾರೆ.

‘ಹಾಂಗ್‌ಕಾಂಗ್‌ನ ಚುನಾವಣಾ ವ್ಯವಸ್ಥೆಯಲ್ಲಿ ಚೀನಾ ತರಲು ಬಯಸಿರುವ ಬದಲಾವಣೆಗಳ ಬಗ್ಗೆ ನಮಗೆ ತೀವ್ರ ಕಳವಳ ಇದೆ. ಈ ಪರಿಷ್ಕರಣೆಗಳ ಮೂಲಕ ಚೀನಾ, ಹಾಂಗ್‌ಕಾಂಗ್‌ ನಾಗರಿಕರ ಸ್ವಾಯತ್ತತೆ, ಮೂಲಭೂತ ಸ್ವಾತಂತ್ರ್ಯ ಮತ್ತು ಮೂಲಭೂತ ಮಾನವ ಹಕ್ಕುಗಳ ಮೇಲೆ ಬಿಗಿ ಹಿಡಿತವನ್ನು ಮುಂದುವರಿಸಲು ಬಯಸುತ್ತಿದೆ’ ಎಂದು ಜನಪ್ರತಿನಿಧಿ ಮತ್ತು ಸೆನೆಟ್‌ ಸದಸ್ಯರನ್ನು ಒಳಗೊಂಡ ಈ ಗುಂಪು ಬೇಸರ ವ್ಯಕ್ತಪಡಿಸಿದೆ.

ಹಾಂಗ್‌ಕಾಂಗ್‌ ಚುನಾವಣಾ ವ್ಯವಸ್ಥೆ ಮೇಲೆ ಹೊಸ ನಿರ್ಬಂಧಗಳನ್ನು ಹೇರುವುದಕ್ಕೆ ಸಂಬಂಧಿಸಿದಂತೆ ಚೀನಾ ಸರ್ಕಾರವು ನ್ಯಾಷನಲ್‌ ಪೀಪಲ್ಸ್‌ ಕಾಂಗ್ರೆಸ್‌ನಲ್ಲಿ ಮಾರ್ಚ್‌ 11ರಂದು ಮತದಾನ ನಿಗದಿಪಡಿಸಿದೆ. ಇದನ್ನು ವಿರೋಧಿಸಿ ಅಮೆರಿಕದ ಉಭಯ ಸದನಗಳ ಸಂಸತ್‌ ಸದಸ್ಯರ ಈ ತಂಡ ಜಂಟಿ ಹೇಳಿಕೆ ಬಿಡುಗಡೆ ಮಾಡಿದೆ.

‘ಚೀನಾದ ಕಮ್ಯುನಿಷ್ಟ್‌ ಪಕ್ಷವು, ಈ ರೀತಿಯ ಯೋಜಿತ ಕ್ರಮಗಳ ಮೂಲಕ ಹಾಂಗ್‌ಕಾಂಗ್‌ ಮೇಲೆ ತನ್ನ ಸರ್ವಾಧಿಕಾರಿ ವ್ಯವಸ್ಥೆಯನ್ನು ಹೇರುವ ಪ್ರಯತ್ನವನ್ನು ದ್ವಿಗುಣಗೊಳಿಸುತ್ತಿದೆ’ ಎಂದು ಹೇಳಿಕೆಯಲ್ಲಿ ದೂರಲಾಗಿದೆ.

ಈ ಪ್ರಯತ್ನಗಳ ಮೂಲಕ ಬೀಜಿಂಗ್‌, 1984ರ ಸೈನೊ–ಬ್ರಿಟಿಷ್‌ ಜಂಟಿ ಘೋಷಣೆ ಮತ್ತು ಹಾಂಗ್‌ಕಾಂಗ್‌ ಮೂಲ ಕಾನೂನಿನ ಕಟ್ಟುಪಾಡುಗಳು ಹಾಗೂ ಅಂತರರಾಷ್ಟ್ರೀಯ ಬದ್ಧತೆಗಳನ್ನು ಮತ್ತೊಮ್ಮೆ ಉಲ್ಲಂಘಿಸುತ್ತಿದೆ ಎಂದು ಆರೋಪಿಸಲಾಗಿದೆ.

ಹಾಂಗ್‌ಕಾಂಗ್‌ನ ಪ್ರಜಾಪ್ರಭುತ್ವ ಹೋರಾಟಗಳಿಗೆ ಈ ರೀತಿಯ ಮುದ್ರೆ ಒತ್ತುವ ಬೀಜಿಂಗ್‌ನ ಪ್ರಯತ್ನಗಳು ತನ್ನದೇ ಅಭದ್ರತೆಯನ್ನು ಒತ್ತಿಹೇಳುತ್ತವೆ ಎಂದು ಹೇಳಿದೆ.

‘ಹಾಂಗ್ಕಾಂಗ್ ಜನರ ಸ್ವಾತಂತ್ರ್ಯ, ಪ್ರಜಾಪ್ರಭುತ್ವ ಮತ್ತು ನ್ಯಾಯವನ್ನು ಬೆಂಬಲಿಸಲು ಅಮೆರಿಕ ಸಂಸತ್ತು ಒಂದೇ ಧ್ವನಿಯಲ್ಲಿ ಮಾತನಾಡುವುದನ್ನು ಮುಂದುವರಿಸಲಿದೆ. ಹಾಂಗ್‌ಕಾಂಗ್‌ ಜನರ ಸ್ವಾಯತ್ತತೆ ಮತ್ತು ಮೂಲಭೂತ ಸ್ವಾತಂತ್ರ್ಯಗಳನ್ನು ರಕ್ಷಿಸಲು ಹಾಗೂ ಅವರನ್ನು ಬೆಂಬಲಿಸಲು ಎರಡು ವರ್ಷಗಳಲ್ಲಿ ಮಹತ್ವದ ಹೊಸ ಸಾಧನಗಳನ್ನು ನೀಡುವ ಶಾಸನವನ್ನು ನಾವು ಅಂಗೀಕರಿಸಿದ್ದೇವೆ’ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

‘ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರು ಆ ಸಾಧನಗಳನ್ನು ಬಳಸಿಕೊಳ್ಳಬೇಕು ಮತ್ತು ಹಾಂಗ್‌ಕಾಂಗ್‌ ಜನರನ್ನು ಬೆಂಬಲಿಸಲು ತನ್ನ ಮಿತ್ರರಾಷ್ಟ್ರಗಳು ಮತ್ತು ಪಾಲುದಾರರೊಂದಿಗೆ ಸೇರಿ ಇತರ ಕಾರ್ಯವಿಧಾನಗಳನ್ನು ಅಭಿವೃದ್ಧಿಪಡಿಸಿಕೊಳ್ಳಬೇಕು’ ಎಂದು ಈ ಗುಂಪು ಒತ್ತಾಯಿಸಿದೆ.

‌ಸೆನೆಟ್‌ನ ವಿದೇಶಾಂಗ ವ್ಯವಹಾರಗಳ ಸಮಿತಿಯ ಪೂರ್ವ ಏಷ್ಯಾ ಉಪ ಸಮಿತಿಯ ಅಧ್ಯಕ್ಷ ಎಡ್‌ ಮಾರ್ಕಿ, ಸದಸ್ಯರಾದ ಮಿಟ್‌ ರೊಮ್ನಿ, ಸ್ಟೀವ್‌ ಚಬೊಟ್‌, ಜೆಫ್‌ ಮರ್ಕ್ಲೆ, ಜೇಮ್ಸ್‌ ಮೆಕ್‌ಗವರ್ನ್‌, ಮಾರ್ಕೊ ರೊಬಿಯೊ, ಕ್ರಿಸ್‌ ಸ್ಮಿತ್‌ ಮತ್ತಿತರರು ಈ ಗುಂಪಿನಲ್ಲಿ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT