ಜಕಾರ್ತ: ಇಂಡೊನೇಷ್ಯಾದಲ್ಲಿ ಕೊರೊನಾ ಸೋಂಕು ಪ್ರಕರಣಗಳು ತೀವ್ರವಾಗಿ ಹೆಚ್ಚಾಗಿದ್ದು, ಆಮ್ಲಜನಕ ಕೊರತೆಯನ್ನು ಎದುರಿಸುತ್ತಿದೆ.
ಇಂಡೊನೇಷ್ಯಾ ಸರ್ಕಾರವು ಅವಶ್ಯಕ ವೈದ್ಯಕೀಯ ಸಾಮಗ್ರಿಗಳನ್ನು ಕಳುಹಿಸುವಂತೆ ಸಿಂಗಪುರ, ಚೀನಾ ಸೇರಿದಂತೆ ಇತರೆ ದೇಶಗಳಲ್ಲಿ ಮನವಿ ಮಾಡಿದೆ.
ಎರಡು ತಿಂಗಳ ಹಿಂದೆ ಭಾರತದಲ್ಲಿ ಸೋಂಕು ಉಲ್ಬಣಗೊಂಡಿದ್ದ ಸಂದರ್ಭದಲ್ಲಿ ಇಂಡೊನೇಷ್ಯಾ ಆಮ್ಲಜನಕ ಕಳುಹಿಸುವ ಮೂಲಕ ನೆರವಾಗಿತ್ತು.
‘1,000 ಆಮ್ಲಜನಕ ಸಿಲಿಂಡರ್‌ಗಳು, ಆಮ್ಲಜನಕ ಸಾಂದ್ರಕಗಳು, ವೆಂಟಿಲೇಟರ್ ಸೇರಿದಂತೆ ಇತರೆ ವೈದ್ಯಕೀಯ ಸಾಮಗ್ರಿಗಳು ಸಿಂಗಪುರದಿಂದ ಇಂಡೊನೇಷ್ಯಾಗೆ ಶುಕ್ರವಾರ ಬಂದಿವೆ. ಆಸ್ಟ್ರೇಲಿಯಾವು 1,000 ವೆಂಟಿಲೇಟರ್‌ಗಳನ್ನು ಕಳುಹಿಸಿದೆ’ ಎಂದು ಇಂಡೊನೇಷ್ಯಾದ ಸಚಿವ ಲುಹುತ್ ಬಿನ್ಸಾರ್ ಪಾಂಡ್‌ಜೈತಾನ್ ತಿಳಿಸಿದ್ದಾರೆ.
‘ಸಿಂಗಪುರದಿಂದ 36 ಸಾವಿರ ಟನ್‌ಗಳಷ್ಟು ಆಮ್ಲಜನಕ ಮತ್ತು 10 ಸಾವಿರ ಆಮ್ಲಜನಕ ಸಾಂದ್ರಕಗಳನ್ನು ಖರೀದಿಸಲು ಸರ್ಕಾರ ನಿರ್ಧರಿಸಿದೆ. ನಾವು ಚೀನಾ ಸೇರಿದಂತೆ ಇತರೆ ಆಮ್ಲಜನಕ ಉತ್ಪಾದಕ ರಾಷ್ಟ್ರಗಳೊಂದಿಗೆ ಸಂಪರ್ಕದಲ್ಲಿದ್ದೇವೆ. ಅಮೆರಿಕ ಮತ್ತು ಯುಎಇ ನೆರವು ನೀಡುವುದಾಗಿ ಹೇಳಿದೆ’ ಎಂದು ಪಾಂಡ್‌ಜೈತಾನ್ ಹೇಳಿದ್ದಾರೆ.
‘ಇಂಡೊನೇಷ್ಯಾದಲ್ಲಿ ಏಕಾಏಕಿ ಸೋಂಕು ಹೆಚ್ಚಾಗಿದ್ದು, ರಾಷ್ಟ್ರ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಅಮೆರಿಕವು ಲಸಿಕೆಯೊಂದಿಗೆ ಹೆಚ್ಚುವರಿ ನೆರವನ್ನು ಒದಗಿಸಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ’ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್ ಸಾಕಿ ತಿಳಿಸಿದ್ದಾರೆ.
ಇಂಡೊನೇಷ್ಯಾದ ಜಾವ ದ್ವೀಪದಲ್ಲಿ ಆಸ್ಪತ್ರೆಗಳು ಭರ್ತಿಯಾಗಿವೆ. ಹಲವೆಡೆ ಆಮ್ಲಜನಕ ಸಿಲಿಂಡರ್‌ಗಳನ್ನು ರೋಗಿಗಳ ಕುಟುಂಬಗಳೇ ತರಬೇಕಾದ ಪರಿಸ್ಥಿತಿ ಎದುರಾಗಿದೆ.
ಇಂಡೊನೇಷ್ಯಾದಲ್ಲಿ 24 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಈವರೆಗೆ 63,760 ಮಂದಿ ಸೋಂಕಿನಿಂದ ಸಾವಿಗೀಡಾಗಿದ್ದಾರೆ. ಗುರುವಾರ 39,000 ಹೊಸ ಪ್ರಕರಣಗಳು ವರದಿಯಾಗಿದ್ದು, ಇದು ಒಂದು ದಿನದಲ್ಲಿ ವರದಿಯಾದ ಅತಿ ಹೆಚ್ಚು ಪ್ರಕರಣಗಳಾಗಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.