ಇಂಡೋನೇಷ್ಯಾದ ಸುಮಾತ್ರ ದ್ವೀಪದ ಪರ್ವತದಲ್ಲಿ ಜ್ವಾಲಾಮುಖಿ ಸ್ಫೋಟ: ಆವರಿಸಿದ ಹೊಗೆ

ಮೌಂಟ್ ಸಿನಾಬಂಗ್: ಇಂಡೋನೇಷ್ಯಾದ ಸುಮಾತ್ರ ದ್ವೀಪದ ಸಿನಾಬಂಗ್ ಪರ್ವತದಲ್ಲಿ ಗುರುವಾರ ಜ್ವಾಲಾಮುಖಿ ಸ್ಫೋಟಿಸಿದ್ದು, ಮುಗಿಲೆತ್ತರಕ್ಕೆ ಬಿಸಿ ಮೋಡಗಳು ಆವರಿಸಿವೆ. ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
‘ಉತ್ತರ ಸುಮಾತ್ರದ ಸಿನಾಬಂಗ್ ಪರ್ವತದಲ್ಲಿ ಉಂಟಾದ ಜ್ವಾಲಾಮುಖಿಯಿಂದಾಗಿ 1,000 ಮೀಟರ್ ಎತ್ತರಕ್ಕೆ ಹೊಗೆ ಮತ್ತು ಬೂದಿ ತುಂಬಿ ಹೋಗಿವೆ. ಅಲ್ಲದೆ 3 ಕಿ.ಮೀ ತನಕ ಬಿಸಿ ಮೋಡಗಳು ಆವರಿಸಿವೆ’ ಎಂದು ಇಂಡೋನೇಷ್ಯಾದ ಜ್ವಾಲಾಮುಖಿ ಮತ್ತು ಭೂವೈಜ್ಞಾನಿಕ ಅಪಾಯ ನಿರ್ವಹಣಾ ಕೇಂದ್ರ ತಿಳಿಸಿದೆ.
‘ಈವರೆಗೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ ಮುನ್ನೆಚ್ಚರಿಕಾ ಕ್ರಮವಾಗಿ ಜ್ವಾಲಾಮುಖಿ ಕಾಣಿಸಿಕೊಂಡ ಸ್ಥಳದಿಂದ 5 ಕಿ.ಮೀ.ನಷ್ಟು ದೂರವೇ ಇರಲು ಸ್ಥಳೀಯರಿಗೆ ಸೂಚನೆ ನೀಡಲಾಗಿದೆ. ಅಲ್ಲದೆ ಶಿಲಾರಸ ಚಿಮ್ಮುವ ಸಾಧ್ಯತೆ ಇರುವುದರಿಂದ ಇದರ ಮೇಲೆ ನಿಗಾಯಿಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ’ ಎಂದು ಸಿನಾಬಂಗ್‌ನ ಮೇಲ್ವಿಚಾರಣಾ ಕೇಂದ್ರದ ಅಧಿಕಾರಿ ಅರ್ಮೆನ್ ಪುತ್ರ ತಿಳಿಸಿದರು.
ಕಳೆದ ಕೆಲವು ವರ್ಷಗಳಿಂದ ಆಗಾಗ ಸಂಭವಿಸುತ್ತಿರುವ ಸಿನಾಬಂಗ್ ಜ್ವಾಲಾಮುಖಿಯಿಂದಾಗಿ ಸುತ್ತಮುತ್ತಲಿನ 30 ಸಾವಿರಕ್ಕೂ ಅಧಿಕ ಸ್ಥಳೀಯರು ತಮ್ಮ ಮನೆಗಳನ್ನು ಬಿಟ್ಟು ಬಂದಿದ್ದಾರೆ. 2014ರಲ್ಲಿ ಭುಗಿಲೆದ್ದ ಲಾವಾರಸ 17 ಮಂದಿಯನ್ನು ಬಲಿ ಪಡೆದಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.