ಬುಧವಾರ, ಸೆಪ್ಟೆಂಬರ್ 29, 2021
21 °C

ಅಫ್ಗಾನಿಸ್ತಾನ: ಅಂತರರಾಷ್ಟ್ರೀಯ ಸಮುದಾಯದಿಂದ 1.2 ಬಿಲಿಯನ್ ಡಾಲರ್‌ ನೆರವು ಘೋಷಣೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಿಶ್ವಸಂಸ್ಥೆ/ಜಿನೀವಾ (ಪಿಟಿಐ): ಅಫ್ಗಾನಿಸ್ತಾನದಲ್ಲಿ ಎದುರಾಗಿರುವ ಮಾನವೀಯ ಬಿಕ್ಕಟ್ಟಿಗೆ ಅಂತರರಾಷ್ಟ್ರೀಯ ಸಮುದಾಯದವು 1.2 ಬಿಲಿಯನ್‌ ಡಾಲರ್‌ (ಅಂದಾಜು ₹8,833 ಕೋಟಿ) ನೆರವು ಘೋಷಿಸಿದೆ ಎಂದು ವಿಶ್ವಸಂಸ್ಥೆ ತಿಳಿಸಿದೆ.

ಅಫ್ಗಾನಿಸ್ತಾನದ ಮಾನವೀಯ ಪರಿಸ್ಥಿತಿ ಕುರಿತು ವಿಶ್ವಸಂಸ್ಥೆಯು ಜಿನೀವಾದಲ್ಲಿ ಉನ್ನತ ಮಟ್ಟದ ಸಚಿವರ ಸಭೆಯನ್ನು ಸೋಮವಾರ ಆಯೋಜಿಸಿತ್ತು. ಈ ಸಂದರ್ಭದಲ್ಲಿ ಅಫ್ಗಾನಿಸ್ತಾನದ ಜನರನ್ನು ಬೆಂಬಲಿಸಲು ಮತ್ತು ಮಾನವ ಹಕ್ಕುಗಳ ರಕ್ಷಣೆಗೆ ಕೈಗೊಳ್ಳಬೇಕಾದ ಕಾರ್ಯಗಳ ಕುರಿತು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೊನಿಯ ಗುಟೆರೆಸ್‌ ಒತ್ತಿ ಹೇಳಿದ್ದರು.

ಇದಕ್ಕಾಗಿ ಅಂತರರಾಷ್ಟ್ರೀಯ ಪಾಲುದಾರರಿಂದ ಅಗತ್ಯವಿರುವ ತುರ್ತು ನಿಧಿಯ ಕುರಿತು ಅವರು ಪ್ರಸ್ತಾಪಿಸಿದ್ದರು. ಈ ಕಾರ್ಯಕ್ಕೆ ತುರ್ತಾಗಿ 606 ಮಿಲಿಯನ್‌ ಅಮೆರಿಕನ್‌ ಡಾಲರ್‌ (ಅಂದಾಜು ₹4,461 ಕೋಟಿ) ನೆರವಿನ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದರು.

ಸಭೆಯ ಮುಕ್ತಾಯದ ಭಾಷಣದಲ್ಲಿ ವಿಶ್ವಸಂಸ್ಥೆಯ ಮಾನವೀಯ ವ್ಯವಹಾರಗಳ ಅಧೀನ ಪ್ರಧಾನ ಕಾರ್ಯದರ್ಶಿ ಮತ್ತು ತುರ್ತು ಪರಿಹಾರ ಸಂಯೋಜಕ ಮಾರ್ಟಿನ್ ಗ್ರಿಫಿತ್ಸ್ ಅವರು ಅಫ್ಗಾನಿಸ್ತಾನದ ಮಾನವೀಯ ಬಿಕ್ಕಟ್ಟಿಗೆ ಅತ್ಯಂತ ಉದಾರವಾದ ಸದಸ್ಯ ದೇಶಗಳಿಂದ 1.2 ಬಿಲಿಯನ್‌ ಡಾಲರ್‌ಗಳಷ್ಟು ಮಾನವೀಯ ಮತ್ತು ಅಭಿವೃದ್ಧಿ ನೆರವು ಘೋಷಿಸಲಾಗಿದೆ ಎಂದು ತಿಳಿಸಿದರು.

‘ಅಫ್ಗಾನಿಸ್ತಾನದ ಜನರ ಒಗ್ಗಟ್ಟಿಗೆ ಸಂಬಂಧಿಸಿದಂತೆ ನನ್ನ ನಿರೀಕ್ಷೆಗಳನ್ನು ಈ ಸಭೆ ಪೂರ್ಣವಾಗಿ ಪೂರೈಸಿದೆ’ ಎಂದು ಗುಟೆರೆಸ್‌ ಹೇಳಿದರು.

‘ಅಫ್ಗಾನಿಸ್ತಾನದ ಆಡಳಿತದೊಂದಿಗೆ ತೊಡಗಿಸಿಕೊಳ್ಳದೆ ಅಲ್ಲಿನ ಜನರಿಗೆ ಮಾನವೀಯ ನೆರವು ನೀಡುವುದು ಅಸಾಧ್ಯವಾಗಿದೆ’ ಎಂದು ಅವರು ಇದೇ ವೇಳೆ ಅವರು ತಿಳಿಸಿದರು.

‘ಈಗಿನ ಸ್ಥಿತಿಗತಿಯನ್ನು ನೋಡಿದರೆ ಅಫ್ಗಾನಿಸ್ತಾನದಲ್ಲಿ ಅಂತಾರಾಷ್ಟ್ರೀಯ ಸಮುದಾಯಕ್ಕೆ ಸಂಬಂಧಪಟ್ಟ ಎಲ್ಲ ಅಂಶಗಳಿಗೂ ತಾಲಿಬಾನ್ ಜೊತೆಗೆ ತೊಡಗಿಸಿಕೊಳ್ಳುವುದು ಅಗತ್ಯವಾಗಿದೆ. ಅದು ಭಯೋತ್ಪಾದನೆಯ ಬಗ್ಗೆ ಇರಲಿ, ಮಾನವ ಹಕ್ಕುಗಳ ಬಗ್ಗೆ ಇರಲಿ, ಔಷಧಗಳ ಬಗ್ಗೆ ಇರಲಿ, ಸರ್ಕಾರದ ಸ್ವರೂಪದ ಬಗ್ಗೆಯೇ ಇರಲಿ ನಾವು ಅವರೊಂದಿಗೆ ತೊಡಗಿಸಿಕೊಳ್ಳವುದು ಮಹತ್ವದ್ದಾಗಿದೆ’ ಎಂದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು