ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾದಲ್ಲಿನ ಇಸ್ಲಾಂ ಧರ್ಮ ಚೀನೀ ದೃಷ್ಟಿಕೋನಕ್ಕೆ ಬದ್ಧವಾಗಿರಬೇಕು: ಜಿನ್‌ಪಿಂಗ್‌

Last Updated 17 ಜುಲೈ 2022, 5:57 IST
ಅಕ್ಷರ ಗಾತ್ರ

ಷಿಜಿಯಾಂಗ್: ‘ಚೀನಾದಲ್ಲಿನ ಇಸ್ಲಾಂ ಧರ್ಮ ಚೀನೀ ದೃಷ್ಟಿಕೋನಕ್ಕೆ ಬದ್ಧವಾಗಿರಬೇಕು, ದೇಶದಲ್ಲಿನ ಎಲ್ಲ ಧರ್ಮಗಳು ಚೀನಾದ ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷದ ಸಮಾಜವಾದಿ ಪರಿಕಲ್ಪನೆಗೆ ಹೊಂದಿಕೊಳ್ಳಬೇಕು. ಈ ತತ್ವವನ್ನು ಎತ್ತಿಹಿಡಿಯುವತ್ತ ಅಧಿಕಾರಿಗಳು ಪ್ರಯತ್ನಿಸಬೇಕು’ ಎಂದು ಅಧ್ಯಕ್ಷ ಷಿ ಜಿನ್‌ಪಿಂಗ್ ಸೂಚಿಸಿದ್ದಾರೆ.

ಲಡಾಖ್‌ಗೆ ಸಮೀಪದಲ್ಲಿರುವ ಷಿಜಿಯಾಂಗ್ ಪ್ರದೇಶಕ್ಕೆ ಭೇಟಿ ನೀಡಿರುವ ಜಿನ್‌ಪಿಂಗ್‌, ಕಳೆದ ಹಲವಾರು ವರ್ಷಗಳಿಂದ ಈ ಪ್ರದೇಶದಲ್ಲಿ ಉಯಿಘರ್‌ ಮುಸ್ಲಿಮರ ಪ್ರತಿಭಟನೆಗಳನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿರುವ ಚೀನಾದ ಭದ್ರತಾ ಪಡೆಗಳನ್ನು ಭೇಟಿಯಾದರು.

ಜುಲೈ 12 ರಂದು ಪ್ರಾರಂಭವಾದ ತಮ್ಮ ನಾಲ್ಕು ದಿನಗಳ ಪ್ರವಾಸದಲ್ಲಿ ಜಿನ್‌ಪಿಂಗ್‌ ಹಲವು ಅಧಿಕಾರಿಗಳನ್ನು ಭೇಟಿಯಾಗಿದ್ದಾರೆ. ‘ಚೀನೀ ರಾಷ್ಟ್ರಕ್ಕಾಗಿ ಸಮುದಾಯ ಪ್ರಜ್ಞೆಯನ್ನು ಗಟ್ಟಿಯಾಗಿ ಬೆಳೆಸಬೇಕು. ವಿವಿಧ ಜನಾಂಗಗಳ ನಡುವೆ ವಿನಿಮಯ, ಸಂವಹನ ಮತ್ತು ಏಕೀಕರಣ ಮನೋಭಾವವನ್ನು ಉತ್ತೇಜಿಸಬೇಕು’ ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು. ಈ ಬಗ್ಗೆ ಅಲ್ಲಿನ ಸರ್ಕಾರಿ ಮಾಧ್ಯಮಗಳು ವರದಿ ಮಾಡಿವೆ.

‘ಚೀನಾದಲ್ಲಿರುವ ಇಸ್ಲಾಂ ಧರ್ಮವು ದೃಷ್ಟಿಕೋನದಲ್ಲಿ ಚೀನೀ ಆಗಿರಬೇಕು. ಸಮಾಜವಾದಿ ಪರಿಕಲ್ಪನೆಯ ಸಮಾಜಕ್ಕೆ ಧರ್ಮಗಳು ಒಗ್ಗಿಕೊಳ್ಳಬೇಕು. ಈ ತತ್ವವನ್ನು ಎತ್ತಿಹಿಡಿಯಲು ಹೆಚ್ಚಿನ ಪ್ರಯತ್ನಗಳನ್ನು ಮಾಡಬೇಕು’ ಎಂದು ಅವರು ಅಧಿಕಾರಿಗಳಿಗೆ ಒತ್ತಾಯಿಸಿದರು.

ಧರ್ಮಗಳ ಅನುಯಾಯಿಗಳ ಸಾಮಾನ್ಯ ಧಾರ್ಮಿಕ ಅಗತ್ಯಗಳನ್ನು ಖಾತ್ರಿಪಡಿಸಬೇಕು ಮತ್ತು ಅವರು ಪಕ್ಷ ಮತ್ತು ಸರ್ಕಾರಕ್ಕೆ ನಿಕಟವಾಗಬೇಕು ಎಂದು ಅವರು ತಿಳಿಸಿದರು.

ಚೀನಾದಲ್ಲಿನ ಇಸ್ಲಾಂ ಧರ್ಮವು ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷದ ನೀತಿಗಳೊಂದಿಗೆ ನಿಲ್ಲಬೇಕೆಂದು ಅಧ್ಯಕ್ಷ ಷಿ ಜಿನ್‌ಪಿಂಗ್‌ ಹಲವು ವರ್ಷಗಳಿಂದ ಪ್ರತಿಪಾದಿಸುತ್ತಾ ಬಂದಿದ್ದಾರೆ.

ಸಾಂಸ್ಕೃತಿಕ ಅಸ್ಮಿತೆಯ ಪ್ರಾಮುಖ್ಯತೆಯನ್ನು ಒತ್ತಿಹೇಳಿದ ಅವರು, ಎಲ್ಲಾ ಜನಾಂಗಗಳಿಗೆ ಶಿಕ್ಷಣ ಮತ್ತು ಮಾರ್ಗದರ್ಶನ ದೊರೆಯಬೇಕು ಎಂದಿದ್ದಾರೆ. ಆ ಮೂಲಕ ಅವರು ಚೀನಾ ಗುಣಲಕ್ಷಣಗಳಾದ ಮಾತೃಭೂಮಿ, ಚೀನೀ ರಾಷ್ಟ್ರ, ಚೀನೀ ಸಂಸ್ಕೃತಿ, ಕಮ್ಯುನಿಸ್ಟ್ ಪಕ್ಷ, ಸಮಾಜವಾದದೊಂದಿಗೆ ಗುರುತಿಸಿಕೊಳ್ಳುವಂತೆ ಮಾಡಬೇಕು ಎಂದು ಹೇಳಿದ್ದಾರೆ.

ಉಯಿಘರ್‌ ಮುಸ್ಲಿಮರನ್ನು ಚೀನಾ ದೊಡ್ಡ ಪ್ರಮಾಣದ ರಾಜಕೀಯ ಮರುಶಿಕ್ಷಣದ ಶಿಬಿರಗಳಲ್ಲಿ ಇರಿಸಿ, ಹಿಂಸಿಸುತ್ತಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಆದರೆ, ಚೀನಾ ಅದನ್ನು ನಿರಾಕರಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT