ಶುಕ್ರವಾರ, ಜುಲೈ 1, 2022
28 °C

ಚೀನಾ ಸೇನಾಭ್ಯಾಸ: ಅಮೆರಿಕ– ಜಪಾನ್‌ ಜಂಟಿ ವೈಮಾನಿಕ ಅಭ್ಯಾಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಟೋಕಿಯೊ/ ಬೀಜಿಂಗ್(ಎಪಿ/ರಾಯಿಟರ್ಸ್‌): ಜಪಾನ್ ಮತ್ತು ಅಮೆರಿಕ ಪಡೆಗಳು ಜಪಾನ್ ಸಮುದ್ರದ ಮೇಲೆ ಯುದ್ಧ ವಿಮಾನಗಳು ಜಂಟಿ ಹಾರಾಟ ಅಭ್ಯಾಸ ನಡೆಸಿದವು ಎಂದು ಜಪಾನ್ ಸೇನೆ ಗುರುವಾರ ತಿಳಿಸಿದೆ.

ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಕ್ವಾಡ್‌ ಶೃಂಗಸಭೆಯಲ್ಲಿ ಭಾಗವಹಿಸುವ ಸಲುವಾಗಿ ಟೋಕಿಯೊಕ್ಕೆ ಭೇಟಿ ನೀಡಿದ್ದಾಗ  ಚೀನಾ ಮತ್ತು ರಷ್ಯಾದ ಕಾರ್ಯತಂತ್ರದ ಬಾಂಬರ್‌ ವಿಮಾನಗಳು ಮಂಗಳವಾರ ಜಪಾನ್ ಬಳಿ ಜಂಟಿ ಹಾರಾಟ ನಡೆಸಿದ್ದಕ್ಕೆ ‌ಅಮೆರಿಕ ಮತ್ತು ಜಪಾನ್‌ ಜಂಟಿ ವೈಮಾನಿಕ ಹಾರಾಟ ನಡೆಸುವ ಮೂಲಕ ಸ್ಪಷ್ಟ ಪ್ರತಿಕ್ರಿಯೆ ನೀಡಿವೆ.

ಚೀನಾ-ರಷ್ಯಾದ ಯುದ್ಧ ವಿಮಾನಗಳ ಜಂಟಿ ಹಾರಾಟವು, ಕ್ವಾಡ್‌ಗೆ ಬೆದರಿಕೆಯೊಡ್ಡುವ ಜತೆಗೆ, ಪ್ರಚೋದನೆ ಹೆಚ್ಚಿಸುವ ಉದ್ದೇಶ ಹೊಂದಿದೆ ಎಂದು ಜಪಾನ್‌ ರಕ್ಷಣಾ ಸಚಿವ ನಬುವೊ ಕಿಶಿ ಹೇಳಿದ್ದಾರೆ.

ಬುಧವಾರ ನಡೆದ ಈ ಜಂಟಿ ಹಾರಾಟದಲ್ಲಿ ಎಂಟು ಯುದ್ಧವಿಮಾನಗಳು ಪಾಲ್ಗೊಂಡಿದ್ದವು. ಇದರಲ್ಲಿ ಅಮೆರಿಕದ ನಾಲ್ಕು ಎಫ್ -16 ಫೈಟರ್‌ಗಳು ಮತ್ತು ಜಪಾನಿನ ಎಫ್ -15 ನಾಲ್ಕು ವಿಮಾನಗಳು ಇದ್ದವು ಎಂದು ಜಪಾನ್ ಸ್ವ ರಕ್ಷಣಾ ಪಡೆಗಳ ಜಂಟಿ ಸಿಬ್ಬಂದಿ ತಿಳಿಸಿದ್ದಾರೆ.

ಉತ್ತರ ಕೊರಿಯಾ ಮತ್ತೊಂದು ಅಣ್ವಸ್ತ್ರ ಪರೀಕ್ಷೆ ನಡೆಸುವ ಆತಂಕದ ಮಧ್ಯೆ, ಕೊರಿಯನ್ ಪರ್ಯಾಯ ದ್ವೀಪ ಮತ್ತು ಜಪಾನ್ ನಡುವಿನ ಸಮುದ್ರದ ಕಡೆಗೆ ಖಂಡಾಂತರ ಕ್ಷಿಪಣಿ ಸೇರಿ ಮೂರು ಕ್ಷಿಪಣಿಗಳನ್ನು ಉತ್ತರ ಕೊರಿಯಾ ಹಾರಿಸಿದ ಕೆಲವೇ ತಾಸುಗಳಲ್ಲಿ ಅಮೆರಿಕ ಮತ್ತು ಜಪಾನ್‌ ಯುದ್ಧ ವಿಮಾನಗಳ ಜಂಟಿ ಹಾರಾಟ ನಡೆದಿದೆ. 

ಉತ್ತರ ಕೊರಿಯಾ ಉಡಾಯಿಸಿದ ಕ್ಷಿಪಣಿಗಳು ಜಪಾನ್‌ನ ವಿಶೇಷ ಆರ್ಥಿಕ ವಲಯದ ಹೊರಗೆ ನೀರಿನಲ್ಲಿ ಬಿದ್ದವು.

ತೈವಾನ್‌ ಸುತ್ತ ಸಮರಾಭ್ಯಾಸ:

ದ್ವೀಪ ರಾಷ್ಟ್ರ ತೈವಾನ್‌ ಆಕ್ರಮಣಕ್ಕೆ ಚೀನಾ ಮುಂದಾದರೆ ಸೈನ್ಯದೊಂದಿಗೆ ಮಧ್ಯಪ್ರವೇಶಿಸುವುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಎಚ್ಚರಿಕೆ ನೀಡಿದ ಕೆಲವು ದಿನಗಳಲ್ಲಿ, ಚೀನಾ ಬುಧವಾರ ತೈವಾನ್ ಸುತ್ತಲೂ ಸೇನಾ ಸಮಾರಭ್ಯಾಸಗಳನ್ನು ನಡೆಸುವುದಾಗಿ ಘೋಷಿಸಿದೆ.

ಉಕ್ರೇನ್‌ ಮೇಲೆ ರಷ್ಯಾ ಆಕ್ರಮಣ ಆರಂಭಿಸಿದ ಬಿನ್ನಲ್ಲೇ, ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್, ‘ಅಗತ್ಯಬಿದ್ದರೆ ತೈವಾನ್‌ ದ್ವೀಪವನ್ನು ಬಲಪ್ರಯೋಗಿಸಿ ಪಡೆಯಲಾಗುವುದು’ ಎಂದು ಇತ್ತೀಚೆಗೆ ಬೆದರಿಕೆ ಹಾಕಿದ್ದರು. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು