ಸೋಮವಾರ, ಮಾರ್ಚ್ 8, 2021
22 °C

ಬೈಡನ್‌ ಆಡಳಿತಕ್ಕೆ ಮತ್ತೆ 20 ಮಂದಿ ಭಾರತ ಮೂಲದ ಅಮೆರಿಕನ್ನರ ನೇಮಕ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ಅಮೆರಿಕದ ನೂತನ ಅಧ್ಯಕ್ಷರಾಗಿ ಜನವರಿ 20ರಂದು ಪ್ರಮಾಣ ವಚನ ಸ್ವೀಕರಿಸಲಿರುವ ಜೋ ಬೈಡನ್‌ ಅವರು, ತಮ್ಮ ಹೊಸ ಆಡಳಿತಕ್ಕೆ ಮತ್ತೆ 20 ಮಂದಿ ಭಾರತ ಮೂಲದ ಅಮೆರಿಕನ್ನ‌ರನ್ನು ಸೇರಿಸಿಕೊಂಡಿದ್ದಾರೆ.

ಪ್ರಮುಖ ಹುದ್ದೆಗಳಿಗೆ ಇವರೆಲ್ಲರನ್ನೂ ನೇಮಿಸಿಕೊಳ್ಳಲಾಗಿದ್ದು, ಇವರಲ್ಲಿ 13 ಮಂದಿ ಮಹಿಳೆಯರಿದ್ದಾರೆ. ಜತೆಗೆ, 20ರಲ್ಲಿ 17 ಮಂದಿ ಶ್ವೇತಭವನದಲ್ಲಿ ಕಾರ್ಯನಿರ್ವಹಿಸಲಿದ್ದಾರೆ.

ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇಕಡ 1ರಷ್ಟು ಇರುವ ಭಾರತ–ಅಮೆರಿಕನ್ನರು ಹೊಸ ಆಡಳಿತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತ್ತು ಪ್ರಮುಖ ಹುದ್ದೆಗಳನ್ನು ಅಲಂಕರಿಸುವ ಮೂಲಕ ದಾಖಲೆ ಸ್ಥಾಪಿಸಿದ್ದಾರೆ. ಅಧಿಕಾರಕ್ಕೆ ಬರುವ ಮುನ್ನವೇ ಇಷ್ಟೊಂದು ಪ್ರಮಾಣದಲ್ಲಿ ಭಾರತ–ಅಮೆರಿಕನ್ನರನ್ನು ನೇಮಿಸಿರುವುದು ಸಹ ವಿಶೇಷವಾಗಿದೆ.

ವನೀತಾ ಗುಪ್ತಾ ಅವರನ್ನು ನ್ಯಾಯಾಂಗ ಇಲಾಖೆಯ ಅಸೋಸಿಯೇಟ್‌ ಅಟಾರ್ನಿ ಜನರಲ್‌ ಆಗಿ ನೇಮಿಸಲಾಗಿದೆ. ಉಜ್ರಾ ಝೇಯಾ ಅವರನ್ನು ವಿದೇಶಾಂಗ ಇಲಾಖೆಯ ನಾಗರಿಕ ಭದ್ರತೆ ಮತ್ತು  ಮಾನವ ಹಕ್ಕುಗಳ ವಿಭಾಗಕ್ಕೆ ನೇಮಿಸಲಾಗಿದೆ.

ಮಾಲಾ ಅಡಿಗ ಅವರನ್ನು ಅಮೆರಿಕದ ಮೊದಲ ಮಹಿಳೆಯಾಗಲಿರುವ ಡಾ. ಜಿಲ್‌ ಬೈಡನ್‌ ಅವರಿಗೆ ನೀತಿ ನಿರ್ದೇಶಕರನ್ನಾಗಿ ಹಾಗೂ ಗರಿಮಾ ವರ್ಮಾ ಅವರನ್ನು ಡಿಜಿಟಲ್‌ ನಿರ್ದೇಶಕರನ್ನಾಗಿ ನೇಮಿಸಲಾಗಿದೆ.

ಈಗಾಗಲೇ ನೀರಾ ಟಂಡನ್‌ ಅವರನ್ನು ಶ್ವೇತ ಭವನ ಕಚೇರಿ ನಿರ್ವಹಣೆ ಮತ್ತು ಬಜೆಟ್‌ನ ನಿರ್ದೇಶಕರನ್ನಾಗಿ ಮತ್ತು  ಡಾ. ವಿವೇಕ್‌ ಮೂರ್ತಿ ಅವರನ್ನು ಅಮೆರಿಕದ ಸರ್ಜನ್‌ ಜನರಲ್‌ ಆಗಿ ನೇಮಿಸಲಾಗಿದೆ.

‘ಭಾರತ–ಅಮೆರಿಕನ್‌ ಸಮುದಾಯ ಸಾರ್ವಜನಿಕ ಸೇವೆಯಲ್ಲಿ ಸದಾ ಸಮರ್ಪಣಾ ಮನೋಭಾವ ಪ್ರದರ್ಶಿಸಿದೆ. ಹೀಗಾಗಿಯೇ, ಹೊಸ ಆಡಳಿತ ಇವರನ್ನು ಗುರುತಿಸಿ ಆಡಳಿತದಲ್ಲಿ ಅವಕಾಶ ಕಲ್ಪಿಸಿದೆ. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರನ್ನು ನೇಮಿಸಿರುವುದು ಶ್ಲಾಘನೀಯ’ ಎಂದು ಭಾರತೀಯ ವಲಸೆಗಾರ ಸಂಘಟನೆಯ ಸಂಸ್ಥಾಪಕ ಎಂ.ಆರ್‌. ರಂಗಸ್ವಾಮಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು