ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನ್ನನ್ನು ಕ್ಷಮಿಸಿ ಎಂದು ದೇಶದ ಜನರೆದುರು ಕಣ್ಣೀರಿಟ್ಟ ಕಿಮ್‌ ಜಾಂಗ್‌ ಉನ್‌

Last Updated 12 ಅಕ್ಟೋಬರ್ 2020, 12:41 IST
ಅಕ್ಷರ ಗಾತ್ರ

ಪ್ಯೋಂಗ್ಯಾಂಗ್‌ (ಉತ್ತರ ಕೊರಿಯಾ): ಕೊರೊನಾ ವೈರಸ್‌ ಸಾಂಕ್ರಾಮಿಕದ ಸಮಯದಲ್ಲಿ ಉತ್ತರ ಕೊರಿಯಾದ ಜನರೊಂದಿಗೆ ಇರಲು ವಿಫಲವಾಗಿದ್ದಕ್ಕೆ ಕಿಮ್‌ ಜಾಂಗ್‌ ಕ್ಷಮೆಯಾಚಿಸಿದ್ದಾರೆ.

ಸದ್ಯ ಅಧಿಕಾರದಲ್ಲಿರುವ ತಮ್ಮ ಪಕ್ಷ ‘ವರ್ಕರ್ಸ್‌ ಪಾರ್ಟಿ ಆಫ್‌ ಕೊರಿಯಾ’ದ 75ನೇ ಸಂಸ್ಥಾಪನಾ ದಿನದದಲ್ಲಿ ಮಾತನಾಡುತ್ತಿದ್ದ ಉತ್ತರ ಕೊರಿಯಾದ ಅಧ್ಯಕ್ಷ ಕಿಮ್‌, ಭಾವುಕರಾದರು. ‘ಉತ್ತರ ಕೊರಿಯನ್ನರು ನನ್ನ ಮೇಲೆ ಇಟ್ಟಿರುವ ನಂಬಿಕೆಗೆ ತಕ್ಕಂತೆ ನಾನು ನಡೆದುಕೊಂಡಿಲ್ಲ,’ ಎಂದು ಒಪ್ಪಿಕೊಂಡರು. ಅದಕ್ಕಾಗಿ ಅವರು ಕ್ಷಮೆಯನ್ನೂ ಕೇಳಿದರು. ಈ ನಡುವೆ ಅವರು ಕನ್ನಡಕ ತೆಗೆದು ಕಣ್ಣೀರು ಒರೆಸಿಕೊಂಡರು ಎಂದು ಮಾಧ್ಯಮ ಸಂಸ್ಥೆ ‘ಗಾರ್ಡಿಯನ್’ ಸೋಮವಾರ ವರದಿ ಮಾಡಿದೆ.

‘ನಮ್ಮ ಜನರು ನನ್ನ ಮೇಲೆ ಆಕಾಶದಷ್ಟು ಎತ್ತರಕ್ಕೆ ಮತ್ತು ಸಮುದ್ರದಷ್ಟು ಆಳವಾದ ನಂಬಿಕೆ ಇಟ್ಟಿದ್ದಾರೆ. ಆದರೆ ನಾನು ತೃಪ್ತಿಕರವಾಗಿ ನಡೆದುಕೊಳ್ಳುವಲ್ಲಿ ವಿಫಲವಾಗಿದ್ದೇನೆ. ಅದಕ್ಕಾಗಿ ನಾನು ನಿಜವಾಗಿಯೂ ವಿಷಾದಿಸುತ್ತೇನೆ,’ ಎಂದು ಅವರು ಹೇಳಿದ್ದಾರೆ.

ಈ ಹಿಂದೆ ದೇಶದ ಚುಕ್ಕಾಣಿ ಹಿಡಿದಿದ್ದ ತನ್ನ ತಂದೆ ಮತ್ತು ಅಜ್ಜನನ್ನೂ ಕಿಮ್‌ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದರು.

ಮಹಾನ್ ಕಮಾಂಡರ್‌ಗಳಾಗಿದ್ದ ಕಿಮ್ ಇಲ್-ಸುಂಗ್ ಮತ್ತು ಕಿಮ್ ಜಾಂಗ್‌-ಇಲ್ ಅವರ ಆದರ್ಶಗಳನ್ನು ಎತ್ತಿಹಿಡಿಯಲು, ಈ ದೇಶವನ್ನು ಮುನ್ನಡೆಸುವ ಪ್ರಮುಖ ಜವಾಬ್ದಾರಿಯನ್ನು ನನಗೆ ವಹಿಸಲಾಗಿತ್ತು. ಎಲ್ಲ ಜನರ ನಂಬಿಕೆಗೆ ಧನ್ಯವಾದಗಳು. ಆದರೆ, ಸಂಕಷ್ಟದ ಸಮಯದಲ್ಲಿ ನಮ್ಮ ಜನರಿಗೆ ಒಳಿತು ಮಾಡಲು ನನ್ನ ಪ್ರಯತ್ನ ಮತ್ತು ಪ್ರಾಮಾಣಿಕತೆ ಸಾಲದೇ ಹೋಯಿತು,’ ಎಂದು ಅವರು ಹೇಳಿದ್ದಾರೆ.

ಖಂಡಾಂತರ ಕ್ಷಿಪಣಿ ಮತ್ತು ಇತರ ಮಿಲಿಟರಿ ಯುದ್ಧೋಪಕರಣಗಳ ಪ್ರದರ್ಶನ ನಡೆದ ಪಕ್ಷದ 75ನೇ ಸಂಸ್ಥಾಪನಾ ದಿನದ ಭಾಷಣವನ್ನು ಕಿಮ್‌ ಜನರ ಸಹಾನುಭೂತಿ ಗಳಿಸಲು ಬಳಸಿಕೊಂಡಿದ್ದಾರೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT