ಕರಾಚಿ: ಮತಾಂತರಕ್ಕೆ ಒಪ್ಪದ ಹಿಂದೂ ವಿವಾಹಿತೆ ಮೇಲೆ ಅತ್ಯಾಚಾರ

ಕರಾಚಿ: ಪಾಕಿಸ್ತಾನದ ದಕ್ಷಿಣ ಸಿಂಧ್ ಪ್ರಾಂತ್ಯದಲ್ಲಿ ಅಪಹರಣಕಾರರು ಹಿಂದೂ ವಿವಾಹಿತೆಯನ್ನು ಅಪಹರಿಸಿದ್ದು, ಆಕೆ ಇಸ್ಲಾಂಗೆ ಮತಾಂತರವಾಗಲು ನಿರಾಕರಿಸಿದ್ದಕ್ಕೆ ಅತ್ಯಾಚಾರ ನಡೆಸಿ ಬೆದರಿಕೆ ಹಾಕಿರುವ ಘಟನೆ ನಡೆದಿದೆ.
ಪಾಕಿಸ್ತಾನದಲ್ಲಿ ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯದ ಮೇಲೆ ಇಂತಹ ದೌರ್ಜನ್ಯಗಳ ಸರಣಿ ಇತ್ತೀಚೆಗೆ ಹೆಚ್ಚುತ್ತಿವೆ. ಹಿಂದೂ ಯುವತಿಯರ ಅಪಹರಣ ಮತ್ತು ಬಲವಂತದ ಮತಾಂತರ ಘಟನೆಗಳು ಸಿಂಧ್ ಪ್ರಾಂತ್ಯದಲ್ಲಿ ಹೆಚ್ಚು ವರದಿಯಾಗುತ್ತಿವೆ.
‘ಇಬ್ರಾಹಿಂ ಮಾಂಗ್ರಿಯೊ, ಪನ್ಹೋ ಮಾಂಗ್ರಿಯೊ ಮತ್ತು ಅವರ ಸಹಚರರು ಅಪಹರಿಸಿ, ಮತಾಂತರಕ್ಕೆ ಒತ್ತಾಯಿಸಿದರು. ಇದಕ್ಕೆ ನಿರಾಕರಿಸಿದಕ್ಕೆ ಉಮರ್‌ಕೋಟ್ ಜಿಲ್ಲೆಯ ಸಮಾರೊ ಪಟ್ಟಣದಲ್ಲಿ ಮೂರು ದಿನಗಳ ಕಾಲ ಅತ್ಯಾಚಾರ ಎಸಗಿ, ಬೆದರಿಕೆ ಹಾಕಿದರು’ ಎಂದು ಅಪಹರಣಕಾರರಿಂದ ತಪ್ಪಿಸಿಕೊಂಡು ಬಂದಿರುವ ಮಹಿಳೆ ಆರೋಪಿಸಿದ್ದಾರೆ. ಈ ಮಹಿಳೆ ತನ್ನ ಹೇಳಿಕೆಯ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಮಹಿಳೆ ಮತ್ತು ಆಕೆಯ ಕುಟುಂಬದವರು ಪೊಲೀಸ್ ಠಾಣೆ ಎದುರು ಕುಳಿತಿದ್ದಾರೆ. ಆದರೆ, ಆರೋಪಿಗಳ ಮೇಲೆ ಪೊಲೀಸರು ಈವರೆಗೆ ಪ್ರಕರಣ ದಾಖಲಿಸಿಲ್ಲ ಎಂದು ಸ್ಥಳೀಯ ಹಿಂದೂ ನಾಯಕರು ಹೇಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.