ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮ್ಯಾನ್ಮಾರ್‌: ಪ್ರತಿಭಟನಕಾರರಿಗೆ ಆಶ್ರಯ ನೀಡದಂತೆ ಮಿಲಿಟರಿ ಆಡಳಿತ ಎಚ್ಚರಿಕೆ

Last Updated 14 ಫೆಬ್ರುವರಿ 2021, 6:36 IST
ಅಕ್ಷರ ಗಾತ್ರ

ಯಾಂಗೂನ್‌ : ತಲೆಮರೆಸಿಕೊಂಡಿರುವ ರಾಜಕೀಯ ಕಾರ್ಯಕರ್ತರಿಗೆ, ಪ್ರತಿಭಟನಕಾರರಿಗೆ ಆಶ್ರಯ ನೀಡದಂತೆ ಮ್ಯಾನ್ಮಾರ್‌ನ ಮಿಲಿಟರಿ ಆಡಳಿತ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ.

ಮ್ಯಾನ್ಮಾರ್‌ನಲ್ಲಿ ಸೇನಾ ದಂಗೆಯ ವಿರುದ್ಧ ಧ್ವನಿಯೆತ್ತಿರುವ ಮತ್ತು ಪ್ರತಿಭಟನೆಗೆ ಮುಂದಾಗಿರುವ ಪ್ರಜಾಪ್ರಭುತ್ವ ಪ್ರಚಾರಕರ ಬಂಧನಕ್ಕೆ ಮಿಲಿಟರಿ ಆಡಳಿತ ಕ್ರಮ ಕೈಗೊಂಡಿದೆ.

ದೇಶದ ಪ್ರಮುಖ ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿಅಸಹಕಾರ ಚಳವಳಿಗೆ ಸೇರ್ಪಡೆಯಾಗುತ್ತಿರುವ ವೈದ್ಯರು ಮತ್ತು ಇತರರ ಬಂಧನಕ್ಕೆ ಭದ್ರತಾ ಪಡೆಗಳು ಮುಂದಾಗಿವೆ.

ದೇಶದಲ್ಲಿ ಪ್ರತಿಭಟನೆಗೆ ಬೆಂಬಲ ನೀಡಿರುವ ಏಳು ಮುಖಂಡರ (ಪ್ರಜಾಪ್ರಭುತ್ವ ಪರ ನಾಯಕರ) ಬಂಧನಕ್ಕೆ ಪೊಲೀಸರು ಶೋಧ ಕಾರ್ಯಕೈಗೊಂಡಿದ್ದಾರೆ.

ತಲೆಮರೆಸಿಕೊಂಡಿರುವ ಈ ಕಾರ್ಯಕರ್ತರು ಕಂಡ ಕೂಡಲೇ ಸಮೀಪದ ಪೊಲೀಸ್‌ ಠಾಣೆಗೆ ಮಾಹಿತಿ ನೀಡಬೇಕು. ಒಂದು ವೇಳೆ ಅವರಿಗೆ ಆಶ್ರಯ ನೀಡಿದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಅಲ್ಲಿನ ಮಿಲಿಟರಿ ಆಡಳಿತ ಮಾಧ್ಯಮದಲ್ಲಿ ನೋಟಿಸ್‌ ಪ್ರಕಟಿಸಿದೆ.

ತಲೆಮರೆಸಿಕೊಂಡಿರುವ ನಾಯಕರ ಪಟ್ಟಿಯಲ್ಲಿ ಮಿನ್ ಕೋ ನಾಯಿಂಗ್ ಅವರೂ ಇದ್ದಾರೆ. 1988ರಲ್ಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿದ್ದಾಗ ಹಿಂದಿನ ಸರ್ವಾಧಿಕಾರದ ವಿರುದ್ಧ ಪ್ರಮುಖ ಪ್ರತಿಭಟನೆಗಳಿಗೆ ಸಹಾಯ ಮಾಡಿದ್ದಕ್ಕಾಗಿ ಅವರನ್ನು ದಶಕಕ್ಕೂ ಹೆಚ್ಚು ಕಾಲ ಜೈಲಿನಲ್ಲಿಡಲಾಗಿತ್ತು.

ತನ್ನ ಬಂಧನದ ವಾರಂಟ್‌ ಹೊರಡುವುದಕ್ಕೂ ಗಂಟೆ ಮುನ್ನ ನಾಯಿಂಗ್ ಅವರು ಫೇಸ್‌ಬುಕ್‌ನಲ್ಲಿ ವಿಡಿಯೊ ಸಂದೇಶ ಕಳಿಸಿದ್ದರು. ‘ಅವರು ರಾತ್ರಿಯಲ್ಲಿ ಜನರನ್ನು ಬಂಧಿಸುತ್ತಿದ್ದಾರೆ ಮತ್ತು ನಾವು ಜಾಗರೂಕರಾಗಿರಬೇಕು’ ಎಂದು ಸಂದೇಶದಲ್ಲಿ ಹೇಳಿದ್ದರು.

ರಾಜಕೀಯ ಕೈದಿಗಳ ಮೇಲ್ವಿಚಾರಣಾ ಗುಂಪಿನ ಸಹಾಯ ಸಂಘದ ಪ್ರಕಾರ, ಆಂಗ್ ಸಾನ್ ಸೂಕಿ ಅವರ ರಾಜಕೀಯ ಮಿತ್ರರು ಸೇರಿದಂತೆ ಸುಮಾರು 400 ಜನರನ್ನು ಬಂಧಿಸಲಾಗಿದೆ.

ಮಾಧ್ಯಮಗಳಿಗೆ ಸೂಚನೆ: ಇದೇ ವೇಳೆ, ‘ಸಾರ್ವಜನಿಕ ಅಶಾಂತಿಗೆ ಕಾರಣವಾಗುವ ಬರಹಗಳನ್ನು ಪತ್ರಕರ್ತರು ಮತ್ತು ಸುದ್ದಿ ಮಾಧ್ಯಮ ಸಂಸ್ಥೆಗಳು ಬರೆಯಬಾರದು’ ಎಂದು ಮಾಹಿತಿ ಸಚಿವಾಲಯವು ದೇಶದ ವಿದೇಶಿ ವರದಿಗಾರರ ಕ್ಲಬ್‌ಗೆ ಶನಿವಾರ ಕಳುಹಿಸಿದ ಸೂಚನೆಯಲ್ಲಿತಿಳಿಸಲಾಗಿದೆ.

ದೇಶದಲ್ಲಿ ಘಟನೆಗಳನ್ನು ವರದಿ ಮಾಡುವಾಗ ‘ಸುದ್ದಿ ಮಾಧ್ಯಮ ನೀತಿಸಂಹಿತೆ’ ಪಾಲಿಸುವಂತೆ ವರದಿಗಾರರಿಗೆ ಸೂಚನೆ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT