ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಪಾಳ: ರಾಜೀನಾಮೆಗೆ ನಿರಾಕರಿಸಿದ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ 

Last Updated 27 ಅಕ್ಟೋಬರ್ 2021, 11:08 IST
ಅಕ್ಷರ ಗಾತ್ರ

ಕಠ್ಮಂಡು:ನೇಪಾಳ ಸು‍ಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಚೋಳೇಂದ್ರ ಶುಂಶೇರ್‌ ರಾಣಾ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರಾಕರಿಸಿದ್ದಾರೆ.

ಶೇರ್‌ ಬಹದ್ದೂರ್‌ ದೇವುಬಾ ನೇತೃತ್ವದ ಸಚಿವ ಸಂಪುಟದಲ್ಲಿ ಸ್ಥಾನ ಕಲ್ಪಿಸಲು ನ್ಯಾಯಮೂರ್ತಿಗಳು ತಮ್ಮ ಸೋದರ ಮಾವ ಅವರಿಗೆ ಸಹಾಯ ಮಾಡಿದ ಆರೋಪದ ನಡುವೆಯೇ ಅವರ ರಾಜೀನಾಮೆಗೆ ಒತ್ತಾಯ ಕೇಳಿ ಬಂದಿದೆ. ಇದು ನ್ಯಾಯಾಲಯದಲ್ಲಿ ಬಿಕ್ಕಟ್ಟಿನ ಪರಿಸ್ಥಿತಿ ನಿರ್ಮಿಸಿದೆ.

ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಗಳ ಒಂದು ವಿಭಾಗವು ರಾಣಾ ಅವರ ರಾಜೀನಾಮೆಗೆ ಒತ್ತಾಯಿಸಿದೆ. ಕೆಲವು ವಕೀಲರು ನ್ಯಾಯಾಲಯವನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ.

ರಾಣಾ ಅವರ ಜೊತೆ ಮಂಗಳವಾರ ಸುಪ್ರೀಂಕೋರ್ಟ್‌ನ 15 ನ್ಯಾಯಮೂರ್ತಿಗಳ ಸಭೆ ನಡೆದಿದೆ. ಬೀದಿಗಳಲ್ಲಿ ಮತ್ತು ಮಾಧ್ಯಮಗಳಲ್ಲಿ ಧ್ವನಿ ಎತ್ತಿದ ಮಾತ್ರಕ್ಕೆ ತಾವು ಹುದ್ದೆಗೆ ರಾಜೀನಾಮೆ ನೀಡುವುದಿಲ್ಲ ಎಂದು ರಾಣಾ ಅವರು ಈ ವೇಳೆ ಹೇಳಿದರು.

‘ನಾನು ಸಾಂವಿಧಾನಿಕ ಪ್ರಕ್ರಿಯೆಯನ್ನು ಎದುರಿಸುತ್ತೇನೆ, ಆದರೆ ಹುದ್ದೆ ತ್ಯಜಿಸುವುದಿಲ್ಲ ಎಂದು ರಾಣಾ ಅವರು ನ್ಯಾಯಮೂರ್ತಿಗಳಿಗೆ ಹೇಳಿದ್ದಾರೆ’ ಎಂದು ಸುಪ್ರೀಂಕೋರ್ಟ್‌ನ ವಕ್ತಾರ ಬಾಬುರಾಮ್‌ ದಹಲ್‌ ಪಿಟಿಐಗೆ ತಿಳಿಸಿದರು.

‘ನಾನು ಯಾವುದೇ ಒತ್ತಡಕ್ಕೂ ಮಣಿಯುವುದಿಲ್ಲ. ಅಗತ್ಯವಿದ್ದರೆ ಕಾನೂನು ಕ್ರಮ ಅನುಸರಿಸುತ್ತೇನೆ’ ಎಂದು ರಾಣಾ ಅವರು ಹೇಳಿರುವುದಾಗಿ ದಹಲ್‌ ಉಲ್ಲೇಖಿಸಿದರು.

ಸಾವಿರಾರು ಪ್ರಕರಣಗಳು ಬಾಕಿ ಇದ್ದು ನ್ಯಾಯಮೂರ್ತಿಗಳು ಸಭೆಗಳನ್ನು ನಡೆಸುವಲ್ಲಿ ನಿರತರಾಗಿದ್ದಾರೆ. ಇದರಿಂದ ವಿಚಾರಣೆಗೆ ಅಡಚಣೆಯಾಗುತ್ತದೆ ಎಂದು ಆರೋಪಿಸಿರುವ ಒಂದು ವರ್ಗದ ವಕೀಲರು ಸುಪ್ರೀಂಕೋರ್ಟಿಗೆ ಹೋಗುವುದನ್ನು ಬಹಿಷ್ಕರಿಸಲು ತೀರ್ಮಾನಿಸಿದ್ದಾರೆ.

ರಾಣಾ ಅವರು ಸ್ವಯಂ ಪ್ರೇರಣೆಯಿಂದ ರಾಜೀನಾಮೆ ನೀಡದಿದ್ದರೆ ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸುವುದಾಗಿ ನೇಪಾಳ ವಕೀಲರ ಸಂಘ ಎಚ್ಚರಿಸಿದೆ.

ಆದರೂ ಕೆಲವು ವಕೀಲರು ಬುಧವಾರದಿಂದ ತಮ್ಮ ದೈನಂದಿನ ಕೆಲಸಕ್ಕೆ ಮರಳಲು ಆರಂಭಿಸಿದ್ದಾರೆ ಎಂದು ದಹಲ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT