ಭಾನುವಾರ, ಜನವರಿ 16, 2022
28 °C

ನ್ಯೂಯಾರ್ಕ್‌ನಲ್ಲಿ ಓಮೈಕ್ರಾನ್‌ ರೂಪಾಂತರ ತಳಿಯ ಐದು ಪ್ರಕರಣ ಪತ್ತೆ

ಪ್ರಜಾವಾಣಿ ವೆಬ್‌‌ ಡೆಸ್ಕ್‌ Updated:

ಅಕ್ಷರ ಗಾತ್ರ : | |

ನ್ಯೂಯಾರ್ಕ್: ಕೊರೊನಾ ವೈರಸ್‌ನ ರೂಪಾಂತರ ತಳಿ ಓಮೈಕ್ರಾನ್‌ ಸೋಂಕಿನ ಐದು ಪ್ರಕರಣಗಳು ದೃಢಪಟ್ಟಿವೆ ಎಂದು ನ್ಯೂಯಾರ್ಕ್‌ ಗವರ್ನರ್ ಕ್ಯಾಥಿ ಹೋಚಲ್‌ ಗುರುವಾರ ಮಾಹಿತಿ ನೀಡಿದ್ದಾರೆ. 

ಈ ಕುರಿತು ಟ್ವೀಟ್‌ ಮಾಡಿರುವ ಅವರು ‘ನ್ಯೂಯಾರ್ಕ್ ರಾಜ್ಯದಲ್ಲಿ ಓಮೈಕ್ರಾನ್‌ ರೂಪಾಂತರದ ಐದು ಪ್ರಕರಣಗಳು ದೃಢಪಟ್ಟಿವೆ‘ ಎಂದು ತಿಳಿಸಿದ್ದಾರೆ. 

‘ಈ ರೂಪಾಂತರವು ಬರುತ್ತಿದೆ ಎಂದು ನಮಗೆ ತಿಳಿದಿತ್ತು. ಸೋಂಕಿನ ಹರಡುವಿಕೆಯನ್ನು ತಡೆಯಲು ನಾವು ಸಿದ್ದರಾಗಿದ್ದೇವೆ‘ ಎಂದು ಹೋಚಲ್‌ ಹೇಳಿದ್ದಾರೆ.

‘ಲಸಿಕೆ ಪಡೆಯಿರಿ. ಬೂಸ್ಟರ್ ಡೋಸ್‌ ಪಡೆಯಿರಿ. ಮಾಸ್ಕ್‌ ಧರಿಸಿ‘ ಎಂದೂ ಅವರು ಜನರಿಗೆ ಮನವಿ ಮಾಡಿದ್ದಾರೆ.

ಈ ವರೆಗೆ ಅಮೆರಿಕದಲ್ಲಿ ಒಟ್ಟು 8 ಓಮೈಕ್ರಾನ್‌ ಪ್ರಕರಣಗಳು ದೃಢಪಟ್ಟಿವೆ. ಈ ಹಿನ್ನೆಲೆಯಲ್ಲಿ ಅಮೆರಿಕಕ್ಕೆ ಬರುವ ಪ್ರಯಾಣಕರ ಮೇಲೆ ಕಠಿಣ ನಿರ್ಬಂಧ ಹೇರಲು ಅಲ್ಲಿನ ಸರ್ಕಾರ ಮುಂದಾಗಿದೆ. 

ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿರುವ ಕೊರೊನಾ ವೈರಸ್‌ನ ಹೊಸ ರೂಪಾಂತರ ತಳಿಗೆ (ಬಿ.1.1.529) ‘ಓಮೈಕ್ರಾನ್‌’ ಎಂಬ ಹೆಸರಿಡಲಾಗಿದೆ. ಇದು ಜಗತ್ತಿನಾದ್ಯಂತ ಭಾರಿ ಕಳವಳ ಮೂಡಿಸಿದ್ದು, ಅತ್ಯಂತ ವೇಗವಾಗಿ ಹರಡುವ ಸಾಮರ್ಥ್ಯ ಹೊಂದಿದೆ.

ದಕ್ಷಿಣ ಆಫ್ರಿಕಾ, ಬೋಟ್ಸ್‌ವಾನಾ, ಜಿಂಬಾಬ್ವೆ, ನಮೀಬಿಯಾ ಮತ್ತು ಲೆಸೊಟೊ ದೇಶದಲ್ಲಿ ಈ ತಳಿಯ ವೈರಾಣು ತಗುಲಿರುವ ಪ್ರಕರಣಗಳು ಪತ್ತೆಯಾಗಿವೆ. ದಕ್ಷಿಣ ಆಫ್ರಿಕಾದಲ್ಲಿ ಈ ತಿಂಗಳ ಆರಂಭದಿಂದ ಕೋವಿಡ್‌ ಹೊಸ ಪ್ರಕರಣಗಳ ಸಂಖ್ಯೆ ವಿಪರೀತ ಪ್ರಮಾಣದಲ್ಲಿ ಏರಿಕೆಯಾಗಿದೆ. ಈ ಏರಿಕೆಗೆ ಓಮೈಕ್ರಾನ್‌ ತಳಿಯೇ ಕಾರಣವಾಗಿರಬಹುದು. ದಕ್ಷಿಣ ಆಫ್ರಿಕಾದ ನೆರೆಯ ದೇಶಗಳಿಗೂ ಈ ರೂಪಾಂತರ ತಳಿಯು ಹರಡಿರಬಹದು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಆಫ್ರಿಕಾ ಘಟಕವು ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು