ವಿಶ್ವ ಭೂಮಿ ದಿನಕ್ಕೆ ‘ಭೂಮಿ ಗೀತ‘ ವಾಚನ

ನ್ಯೂಯಾರ್ಕ್: ವಿಶ್ವದಾದ್ಯಂತ 100ಕ್ಕೂ ಹೆಚ್ಚು ಖ್ಯಾತ ಕವಿ–ಕವಯತ್ರಿಯರು, ಸಂಗೀತಗಾರರು, ನಟ–ನಟಿಯರು, ಗಾಯಕ– ಗಾಯಕಿಯರು, ಕಲಾವಿದರು ವರ್ಚುವಲ್ ಆಗಿ ಒಂದೆಡೆ ಸೇರಿ ಭಾರತದ ಹಿರಿಯ ರಾಜತಾಂತ್ರಿಕ ಅಭಯ್ ಕುಮಾರ್ ಅವರು ಭೂಮಿ ಕುರಿತು ರಚಿಸಿರುವ ‘ಗೀತೆ‘ಯನ್ನು ವಾಚಿಸುವ ಮೂಲಕ ಗುರುವಾರ 'ವಿಶ್ವ ಭೂಮಿ ದಿನ'ವನ್ನು ಆಚರಿಸಲಿದ್ದಾರೆ.
ಏಪ್ರಿಲ್ 22 ರಂದು ವಿಶ್ವ ಭೂಮಿ ದಿನ. ಇದರ ಅಂಗವಾಗಿ ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ಜಲತಜ್ಞ, ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ರಾಜೇಂದ್ರ ಸಿಂಗ್, ಬಾಲಿವುಡ್ ನಟಿ ಮನೀಷಾ ಕೊಯಿರಾಲಾ, ಖ್ಯಾತ ಬರಹಗಾರ ರಾಣಾ ಸಫ್ವಿ ಮತ್ತು ನಟ ಡ್ಯಾನಿಶ್ ಹುಸೇನ್ ಸೇರಿದಂತೆ ವಿಶ್ವದಾದ್ಯಂತದ 100 ಕ್ಕೂ ಹೆಚ್ಚು ಖ್ಯಾತನಾಮರು ವರ್ಚುವಲ್ ಕಾರ್ಯಕ್ರಮದ ಮೂಲಕ ಅಭಯ್ ರಚಿಸಿದ ಗೀತೆಯನ್ನು ಹಾಡಲಿದ್ದಾರೆ.
ಮಡಗಾಸ್ಕರ್ ಮತ್ತು ಕೊಮೊರೊಸ್‌ನಲ್ಲಿ ಭಾರತೀಯ ರಾಯಭಾರಿಯಾಗಿರುವ ಅಭಯ್ ಕುಮಾರ್ ಒಬ್ಬ ಕವಿ. ಅವರು 2008ರಲ್ಲಿ ರಷ್ಯಾದಲ್ಲಿದ್ದಾಗ ಭೂಮಿಗೆ ಸಂಬಂಧಿಸಿದ ಕವಿತೆಯನ್ನು ರಚಿಸಿದ್ದರು. ಆ ಗೀತೆ ಇಲ್ಲಿವರೆಗೂ 60 ಭಾಷೆಗಳಿಗೆ ಅನುವಾದವಾಗಿದೆ. ಬ್ರೆಸಿಲಿಯಾದ ರಾಷ್ಟ್ರೀಯ ಫಿಲ್ಹಾರ್ಮೋನಿಕ್ ಆರ್ಕೆಸ್ಟ್ರಾಗಳು ಮತ್ತು ಆಮ್ಸ್ಟರ್‌ಡ್ಯಾಮ್ ಕನ್ಸರ್ವೇಟೋರಿಯಂನ ಕಲಾವಿದರು ಈ ಗೀತೆಗೆ ನರ್ತಿಸಿದ್ದಾರೆ. ಪ್ರಸಿದ್ಧ ಕಲಾವಿದ ಡಾ.ಎಲ್.ಸುಬ್ರಮಣ್ಯಂ ಈ ಗೀತೆಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಹಿರಿಯ ಗಾಯಕಿ ಕವಿತಾ ಕೃಷ್ಣಮೂರ್ತಿ ಗೀತೆಯನ್ನು ಹಾಡಿದ್ದಾರೆ.
‘ಈ ಭೂಮಿ ಗೀತೆ – ಭೂಮಿಯ ಮೇಲಿರುವ ಎಲ್ಲ ಜೀವಿಗಳ ಏಕತೆಯ ಬಗ್ಗೆ ಮಾತನಾಡುವ ಒಂದು ಹಾಡು. ಇದರಲ್ಲಿ ಹವಾಮಾನ ಬದಲಾವಣೆ, ಜೀವವೈವಿಧ್ಯದ ನಷ್ಟ ಮತ್ತು ಪರಿಸರ ಮಾಲಿನ್ಯದ ಬಿಕ್ಕಟ್ಟಿನ ವಿರುದ್ಧ ಹೋರಾಡಲು ಎಲ್ಲ ನಾಗರಿಕರು ಮತ್ತು ರಾಷ್ಟ್ರಗಳ ನಡುವೆ ಏಕತೆ ಬಯಸುವಂತಹ ಸಾರವಿದೆ. ಇಂಥ ವೈವಿಧ್ಯಮಯ ಸಂಸ್ಕೃತಿ, ನಂಬಿಕೆಗಳ ನಡುವೆಯೂ ನಾವು ಈ ಭೂಮಿ ಎಂಬ ಗ್ರಹವನ್ನು ನಮ್ಮ ಮನೆಯಂತೆ ನೋಡಬೇಕು ಎಂಬುದು ಈ ಗೀತೆಯ ತಾತ್ಪರ್ಯವಾಗಿದೆ‘ ಎಂದು ಅಭಯ್ ಕುಮಾರ್ ಹೇಳಿದ್ದಾರೆ.
‘ಭೂಮಿ ಗೀತೆಯನ್ನು ವರ್ಚುವಲ್ ಆಗಿ ವಾಚಿಸುತ್ತಿರುವುದು, ಕೋವಿಡ್ ಸಾಂಕ್ರಾಮಿಕದ ಸಂಕಷ್ಟದ ಸಮಯದಲ್ಲಿ ಜನರಲ್ಲಿ ಭರವಸೆ, ಸ್ಪೂರ್ತಿ ಮತ್ತು ಒಗ್ಗಟ್ಟನ್ನು ತರುವ ಪ್ರಯತ್ನವಾಗಿದೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.