ಬಡ ದೇಶಗಳ ಜನರಿಗೆ ಕೋವಿಡ್ ಲಸಿಕೆ ಬೇಗ ಸಿಗೋದು ಅನುಮಾನ: ಸಂಶೋಧಕರು ಏನಂತಾರೆ?
ರೋಮ್: ವಿಶ್ವದಾದ್ಯಂತ ಪ್ರತಿ ನಾಲ್ವರಲ್ಲಿ ಒಬ್ಬರಿಗೆ 2022ರ ವರೆಗೆ ಕೋವಿಡ್–19 ಲಸಿಕೆ ಸಿಗಲಾರದು ಎಂದು ಸಂಶೋಧಕರು ಹೇಳಿದ್ದಾರೆ.
ವಿಶ್ವದ ಒಟ್ಟು ಜನಸಂಖ್ಯೆಯ ಶೇ 15ಕ್ಕಿಂತ ಕಡಿಮೆ ಇರುವ ಶ್ರೀಮಂತ ರಾಷ್ಟ್ರಗಳು ಪ್ರಮುಖ ಲಸಿಕೆಗಳ ಶೇ 51ರಷ್ಟು ಡೋಸ್‌ಗಳನ್ನು ಕಾಯ್ದಿರಿಸಿವೆ. ಉಳಿದ ಡೋಸ್‌ಗಳನ್ನು ಶೇ 85ರಷ್ಟು ಜನಸಂಖ್ಯೆ ಇರುವ ಕಡಿಮೆ ಮತ್ತು ಮಧ್ಯಮ ಆದಾಯ ಹೊಂದಿರುವ ದೇಶಗಳು ಹಂಚಿಕೊಳ್ಳಬೇಕಿದೆ ಎಂದು ಅಮೆರಿಕದ ‘ಜಾನ್ಸ್ ಹಾಪ್‌ಕಿನ್ಸ್ ಬ್ಲೂಮ್‌ಬರ್ಗ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್’ ಸಂಶೋಧಕರು ಪ್ರಕಟಿಸಿರುವ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: ಮಾಡರ್ನಾ ಲಸಿಕೆ ಶೇ. 94.1ರಷ್ಟು ಪರಿಣಾಮಕಾರಿ; ಮುಂದಿನ ವಾರ ಬಿಡುಗಡೆಗೆ ಸಿದ್ಧತೆ
ಸಾಂಕ್ರಾಮಿಕದ ವಿರುದ್ಧದ ಪರಿಣಾಮಕಾರಿ ಹೋರಾಟಕ್ಕೆ ಹೆಚ್ಚು ಆದಾಯ ಹೊಂದಿರುವ ದೇಶಗಳು ವಿಶ್ವದಾದ್ಯಂತ ಕೋವಿಡ್ ಲಸಿಕೆಯ ಸಮ ಪ್ರಮಾಣದ ವಿತರಣೆಯಲ್ಲಿ ಕೈಜೋಡಿಸಬೇಕಿದೆ ಎಂದೂ ಸಂಶೋಧಕರು ಹೇಳಿದ್ದಾರೆ.
‘ಕೋವಿಡ್–19 ಲಸಿಕೆಯ ಜಾಗತಿಕ ಲಭ್ಯತೆಯ ಅನಿಶ್ಚಿತತೆಯು ಕ್ಲಿನಿಕಲ್ ಟೆಸ್ಟಿಂಗ್‌ಗೆ ಮಾತ್ರ ಸೀಮಿತವಾಗಿಲ್ಲ. ಲಸಿಕೆ ವಿತರಣೆಗೆ ಸಂಬಂಧಿಸಿ ಪಾರದರ್ಶಕ ವ್ಯವಸ್ಥೆ ರೂಪಿಸುವಲ್ಲಿ ಸರ್ಕಾರಗಳು ಮತ್ತು ಉತ್ಪಾದಕರ ವೈಫಲ್ಯವೂ ಒಳಗೊಂಡಿದೆ’ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ನವೆಂಬರ್ 15ರ ವರೆಗಿನ ಲೆಕ್ಕಾಚಾರದ ಪ್ರಕಾರ, ಶ್ರೀಮಂತ ರಾಷ್ಟ್ರಗಳು 13 ಲಸಿಕೆ ಉತ್ಪಾದಕ ಕಂಪನಿಗಳಿಂದ ಕೋವಿಡ್ ಲಸಿಕೆಯ 750 ಕೋಟಿ ಡೋಸ್‌ಗಳನ್ನು ಮುಂಗಡ ಕಾಯ್ದಿರಿಸಿವೆ. ಇದರಲ್ಲಿ ಜಪಾನ್, ಆಸ್ಟ್ರೇಲಿಯಾ ಮತ್ತು ಕೆನಡಾ ಸೇರಿವೆ. ಈ ದೇಶಗಳು ಸುಮಾರು 100 ಕೋಟಿ ಡೋಸ್‌ಗಳನ್ನು ಕಾಯ್ದಿರಿಸಿವೆ. ಆದರೆ ಇದು ಒಟ್ಟು ಕೋವಿಡ್ ಪ್ರಕರಣಗಳ ಶೇ 1ಕ್ಕಿಂತಲೂ ಕಡಿಮೆ ಎಂದೂ ವರದಿ ಉಲ್ಲೇಖಿಸಿದೆ.
ಇದನ್ನೂ ಓದಿ: Karnataka Covid-19 Update: ರಾಜ್ಯದಲ್ಲಿ 1,185 ಹೊಸ ಪ್ರಕರಣ
ಉತ್ಪಾದಕರು ತಮ್ಮ ಗರಿಷ್ಠ ಮಿತಿಯವರೆಗೆ ಲಸಿಕೆ ಉತ್ಪಾದಿಸಿದರೂ ಜಗತ್ತಿನ ಒಟ್ಟು ಜನಸಂಖ್ಯೆಯ ಶೇ 25ರಷ್ಟು ಮಂದಿಗೆ ಮುಂದಿನ ಒಂದು ವರ್ಷದ ವರೆಗೆ ಲಸಿಕೆ ದೊರೆಯಲಾರದು ಎಂದೂ ಹೇಳಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.