ಶನಿವಾರ, ಅಕ್ಟೋಬರ್ 24, 2020
18 °C

ಪಾಕ್ ಪ್ರಧಾನಿ ರಾಜೀನಾಮೆಗೆ ಆಗ್ರಹ; ದೇಶವ್ಯಾಪಿ ಪ್ರತಿಭಟನೆಗೆ ವಿಪಕ್ಷಗಳ ನಿರ್ಧಾರ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಇಸ್ಲಾಮಾಬಾದ್: ಪ್ರಧಾನಿ ಸ್ಥಾನಕ್ಕೆ ಇಮ್ರಾನ್ ಖಾನ್ ತಕ್ಷಣ ರಾಜೀನಾಮೆ ನೀಡಬೇಕು ಎಂದು ಪಾಕಿಸ್ತಾನದ ಪ್ರಮುಖ ವಿರೋಧಪಕ್ಷಗಳು ಆಗ್ರಹಪಡಿಸಿವೆ. ಈ ಬಗ್ಗೆ ದೇಶವ್ಯಾಪಿ ಪ್ರತಿಭಟನೆ ನಡೆಸಲು ಒಟ್ಟಾಗಿ ಪಾಕಿಸ್ತಾನ್ ಡೆಮಾಕ್ರಟಿಕ್ ಮೂವ್ ಮೆಂಟ್ (ಪಿಡಿಎಂ) ಮೈತ್ರಿಕೂಟವನ್ನು ಸ್ಥಾಪಿಸಿವೆ.

ಪ್ರಧಾನಿ ರಾಜೀನಾಮೆಗೆ ಆಗ್ರಹಿಸಿ ಹೋರಾಟ ಕುರಿತು ಚರ್ಚಿಸಲು ಭಾನುವಾರ ನಡೆದ ಸಭೆಯಲ್ಲಿ 26 ಅಂಶಗಳಿರುವ ಜಂಟಿ ನಿರ್ಣಯ ಕೈಗೊಳ್ಳಲಾಗಿದೆ. ಪಾಕಿಸ್ತಾನ ಫೀಪಲ್ಸ್ ಪಾರ್ಟಿ (ಪಿಪಿಪಿ), ಪಾಕಿಸ್ತಾನ್ ಮುಸ್ಲಿಂ ಲೀಗ್ -ನವಾಜ್ (ಪಿಎಂಎಲ್-ಎನ್), ಜಮಾಯಿತ್ ಉಲೆಮಾ ಇ ಇಸ್ಲಾಂ ಫಾಜಿಲ್ (ಜೆಯುಐ-ಎಫ್) ಮತ್ತು ಹಾಗೂ ಇತರೆ ಪಕ್ಷಗಳು ಸಭೆಯಲ್ಲಿದ್ದವು.

ಸರ್ವಪಕ್ಷಗಳ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೆಯುಐ-ಎಫ್ ಮುಖ್ಯಸ್ಥ ಮೌಲಾನಾ ಫಾಜಿಲ್ ಉರ್ ರೆಹಮಾನ್ ಅವರು ಈ ನಿರ್ಣಯವನ್ನು ಓದಿದರು. ಅಕ್ಟೋಬರ್ ತಿಂಗಳಿನಿಂದ ಆಡಳಿತರೂಡ ಪಾಕಿಸ್ತಾನ್ ತೆಹ್ರೀಕ್ ಇ ಇನ್ಸಾಫ್ ಸರ್ಕಾರದ ವಿರುದ್ಧ ಜನಾಂದೋಲನವು ಆರಂಭವಾಗಲಿದೆ ಎಂದು ತಿಳಿಸಿದರು.

ಪಾಕಿಸ್ತಾನ ಸರ್ಕಾರವು ಸ್ಥಿರವಾಗಿದೆ ಎಂದು ಹೇಳಿಕೊಳ್ಳುತ್ತಿರುವುದು ಸತ್ಯಕ್ಕೆ ದೂರವಾದುದು ಎಂದು ಪ್ರತಿಪಾದಿಸಿವೆ. 'ಪಾಕಿಸ್ತಾನ ಸೇನೆ'ಯನ್ನು ಪರೋಕ್ಷವಾಗಿ ಉಲ್ಲೇಖಿಸಿ, ಸರ್ಕಾರದ ಆಂತರಿಕ ವಿಷಯದಲ್ಲಿ ಅತಿಯಾಗಿ ಹಸ್ತಕ್ಷೇಪ ನಡೆಯುತ್ತಿದೆ. ಇದು ದೇಶ ಮತ್ತು ಸಂಸ್ಥೆಗಳ ಸ್ಥಿರತೆಗೆ ಧಕ್ಕೆ ತರಲಿದೆ ಎಂದೂ ವ್ಯಾಖ್ಯಾನಿಸಿವೆ.

ನಿರ್ಣಯದ ಪ್ರಕಾರ,  ಹಂತ, ಹಂತವಾಗಿ ಪ್ರತಿಭಟನೆ ಆರಂಭವಾಗಲಿದೆ. ಮೊದಲ ಹಂತದಲ್ಲಿ ಅಕ್ಟೋಬರ್ ನಲ್ಲಿ ನಾಲ್ಕೂ ಪ್ರಾಂತ್ಯಗಳಲ್ಲಿ ಜಾಥಾ, ಎರಡನೇ ಹಂತದಲ್ಲಿ ಡಿಸೆಂಬರ್ ನಲ್ಲಿ ದೇಶದಾದ್ಯಂತ ಪ್ರತಿಭಟನಾ ಸಭೆ ನಡೆಯಲಿವೆ. ಅಂತಿಮವಾಗಿ ಜನವರಿ ತಿಂಗಳಲ್ಲಿ ಇಸ್ಲಾಮಾಬಾದ್ ಗೆ ಜಾಥಾ ಹೊರಡಲಿದ್ದು, ಚಳವಳಿಯನ್ನು ತೀವ್ರಗೊಳಿಸಲಾಗುತ್ತದೆ.

ಪಾರದರ್ಶಕವಾದ ಕ್ರಮದಲ್ಲಿ ಮತ್ತೆ ಚುನಾವಣೆಯನ್ನು ನಡೆಸಬೇಕು. ಮುಕ್ತ ಮತ್ತು ನ್ಯಾಯಸಮ್ಮತವಾದ ಚುನಾವಣೆಯನ್ನು ನಡೆಸಲು ಅಗತ್ಯ ಸುಧಾರಣಾ ಕ್ರಮಗಳನ್ನು ಜಾರಿಗೊಳಿಸಬೇಕು ಎಂದು ವಿರೋಧಪಕ್ಷಗಳು ಆಗ್ರಹಪಡಿಸಿವೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು