ಮಂಗಳವಾರ, ಸೆಪ್ಟೆಂಬರ್ 28, 2021
21 °C

ಅಫ್ಗನ್‌ ರಾಯಭಾರಿ ಹಿಂದಕ್ಕೆ ಕರೆಸಿಕೊಳ್ಳುವ ನಿರ್ಧಾರ ದುರದೃಷ್ಟಕರ: ಪಾಕಿಸ್ತಾನ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಇಸ್ಲಾಮಾಬಾದ್‌: ರಾಯಭಾರಿ ಪುತ್ರಿಯ ಅಪಹರಣ ಪ್ರಕರಣದ ನಂತರ ಇಸ್ಲಾಮಾಬಾದ್‌ನಲ್ಲಿದ್ದ ತನ್ನ ರಾಯಭಾರಿಯನ್ನು ವಾಪಸ್ ಕರೆಸಿಕೊಳ್ಳಲು ನಿರ್ಧರಿಸಿರುವ ಅಫ್ಗನ್ ಸರ್ಕಾರದ ನಿರ್ಧಾರ ದುರದೃಷ್ಟಕರ ಮತ್ತು ವಿಷಾದನೀಯ ಎಂದು ಹೇಳಿರುವ ಪಾಕಿಸ್ತಾನ ಸರ್ಕಾರ, ನಿರ್ಧಾರವನ್ನು ಮರು ಪರಿಶೀಲಿಸುವಂತೆ ಒತ್ತಾಯಿಸಿದೆ.

ಈ ಘಟನೆ ನಂತರ ಅಫ್ಗನ್‌ ರಾಯಭಾರಿ ಮತ್ತು ಅವರ ಕುಟುಂಬಕ್ಕೆ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಇದೇ ವೇಳೆ ಇಲ್ಲಿನ ಅಫ್ಗನ್‌ ರಾಯಭಾರ ಕಚೇರಿ ಮತ್ತು ದೂತಾವಾಸದ ಸಿಬ್ಬಂದಿಗೆ ನೀಡಿದ್ದ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಲಾಗಿದೆ ಎಂದು ಪಾಕಿಸ್ತಾನ  ವಿದೇಶಾಂಗ ಸಚಿವಾಲಯ ತಿಳಿಸಿದೆ.

’ಪಾಕಿಸ್ತಾನದಲ್ಲಿನ ತನ್ನ ಹಿರಿಯ ರಾಜತಾಂತ್ರಿಕರನ್ನು ವಾಪಸ್ ಕರೆಸಿಕೊಳ್ಳುವ ಅಫ್ಗನ್‌ ಸರ್ಕಾರದ ನಿರ್ಧಾರ ದುರದೃಷ್ಟಕರ ಸಂಗತಿ. ಈ ನಿರ್ಧಾರವನ್ನು ಅಫ್ಗನ್‌ ಸರ್ಕಾರ ಮರು ಪರಿಶೀಲಿಸುವ ವಿಶ್ವಾಸವಿದೆ’ ಎಂದು ವಿದೇಶಾಂಗ ಸಚಿವಾಲಯ ವಿಶ್ವಾಸ ವ್ಯಕ್ತಪಡಿಸಿದೆ.

ಪಾಕಿಸ್ತಾನದ ವಿದೇಶಾಂಗ ಕಾರ್ಯದರ್ಶಿ ಭಾನುವಾರ ಅಫ್ಗನ್‌ ರಾಯಭಾರಿಯನ್ನು ಭೇಟಿಯಾಗಿ, ರಾಜತಾಂತ್ರಿಕರ ಸುರಕ್ಷತೆಗಾಗಿ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರಿಸುವ ಜತೆಗೆ, ಸಂಪೂರ್ಣ ಸಹಕಾರ ನೀಡುವ ಭರವಸೆ ನೀಡಿದರು.

ಪಾಕಿಸ್ತಾನಲ್ಲಿರುವ ಅಘ್ಗಾನಿಸ್ಥಾನದ ರಾಯಭಾರಿ ನಜೀಬುಲ್ಲಾ ಅಲಿಖಿಲ್‌ ಅವರ ಪುತ್ರಿಯನ್ನು ಅಪಹರಿಸಿ, ಹಲ್ಲೆ ನಡೆಸಲಾಗಿದ್ದು, ಪ್ರಧಾನಿ ಇಮ್ರಾಖಾನ್ ಅವರ ಸೂಚನೆ ಮೇರೆಗೆ ಈ ಪ್ರಕರಣವನ್ನು ಉನ್ನತ ಮಟ್ಟದಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಪಾಕಿಸ್ತಾನ ವಿದೇಶಾಂಗ ಸಚಿವಾಲಯ ಭಾನುವಾರ ರಾತ್ರಿ ತಿಳಿಸಿದೆ. 

ಇಸ್ಲಾಮಾಬಾದ್‌ನಲ್ಲಿ ಶುಕ್ರವಾರ ಅಘ್ಗನ್ ರಾಯಭಾರಿ ಪುತ್ರಿ ಸಿಲ್‌ಸಿಲಾ ಅಲಿಖಿಲ್ ಅವರು ಬಾಡಿಗೆ ವಾಹನದಲ್ಲಿ ಮನೆಗೆ ತೆರಳುತ್ತಿದ್ದಾಗ ಅಪರಿಚಿತ ವ್ಯಕ್ತಿಗಳು ಅಪಹರಿಸಿ, ಚಿತ್ರಹಿಂಸೆ ನೀಡಿದ್ದರು. ಪಾಕಿಸ್ತಾನ ಸರ್ಕಾರ ಭಾನುವಾರ ರಾತ್ರಿ ಈ ವಿಷಯವನ್ನು ಖಚಿತಪಡಿಸಿತ್ತು. ಅಪಹರಣವಾಗಿ ಕೆಲವು ಗಂಟೆಗಳ ಬಂಧನದ ನಂತರ ಸಿಲ್‌ಸಿಲಾ ಅವರು ರಾಜಧಾನಿಯ ಎಫ್ -9 ಪಾರ್ಕ್ ಬಳಿ ಪತ್ತೆಯಾಗಿದ್ದರು. ಅವರ ದೇಹದ ಮೇಲೆ ಗಾಯಗಳ ಗುರುತಿದ್ದವು.

ಆದರೆ, ಪಾಕಿಸ್ತಾನ ಸರ್ಕಾರದ ಆಂತರಿಕ ಸಚಿವ ಶೇಖ್ ರಶೀದ್ ಖಾಸಗಿ ಟಿವಿ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ, ’ರಾಯಭಾರಿಯ ಪುತ್ರಿಯ ಅಪಹರಣವಾಗಿಲ್ಲ. ಪಾಕಿಸ್ತಾನಕ್ಕೆ ಅವಮಾನ ಮಾಡಬೇಕೆಂಬ ಉದ್ದೇಶದಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ರೂಪಿಸಿರುವ ಸಂಚು ಅದು ಎಂದು ಆರೋಪಿಸಿದ್ದಾರೆ.

ಅಚ್ಚರಿಯ ಸಂಗತಿ ಎಂದರೆ, ಈ ಹೇಳಿಕೆ ನೀಡುವುದಕ್ಕೂ ಮುನ್ನ ರಶೀದ್ ಅವರು, ’ಪಾಕಿಸ್ತಾನ ಶೀಘ್ರದಲ್ಲೇ ಅಪಹರಣಕಾರರನ್ನು ಬಂಧಿಸಲಿದೆ’ ಎಂದು ಹೇಳಿಕೆ ನೀಡಿದ್ದರು. ಈ ಪ್ರಕರಣ ಕುರಿತು ಪೊಲೀಸರು ಪ್ರಥಮ ಮಾಹಿತಿ ವರದಿಯನ್ನು ದಾಖಲಿಸಿದ್ದಾರೆ ಎಂದು ಅವರು ಹೇಳಿದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು