ಗುರುವಾರ, 1 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಮ್ರಾನ್‌ ಖಾನ್‌ ದಿನದ ಮಟ್ಟಿಗೆ ನಿರಾಳ: ಗುರುವಾರ ಮತ್ತೆ ಬಂಧನ ಯತ್ನ ಸಾಧ್ಯತೆ

Last Updated 15 ಮಾರ್ಚ್ 2023, 15:25 IST
ಅಕ್ಷರ ಗಾತ್ರ

ಲಾಹೋರ್‌ : ಪಾಕಿಸ್ತಾನದ ಪದಚ್ಯುತ ಪ್ರಧಾನಿ ಇಮ್ರಾನ್ ಖಾನ್‌ ಬಂಧನಕ್ಕೆ ಪಾಕ್‌ ಪೊಲೀಸರು ಮತ್ತು ಭದ್ರತಾ ಸಿಬ್ಬಂದಿ ನಡೆಸುತ್ತಿದ್ದ ಕಾರ್ಯಾಚರಣೆಯನ್ನು ಗುರುವಾರದವರೆಗೆ ಸ್ಥಗಿತಗೊಳಿಸುವಂತೆ ಲಾಹೋರ್‌ ಹೈಕೋರ್ಟ್‌ ಬುಧವಾರ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಮಂಗಳವಾರದಿಂದ ಆರಂಭವಾಗಿದ್ದ ಖಾನ್‌ ಬಂಧನ ಯತ್ನ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.

ಪೊಲೀಸ್‌ ಕಾರ್ಯಾಚರಣೆಯನ್ನು ಪ್ರಶ್ನಿಸಿ ಪಾಕಿಸ್ತಾನ್‌ ತೆಹ್ರೀಕ್‌–ಎ–ಇನ್ಸಾಫ್‌ (ಪಿಟಿಐ) ಪಕ್ಷ ಲಾಹೋರ್‌ ಹೈಕೋರ್ಟ್‌ ಮೊರೆ ಹೋಗಿತ್ತು. ಈ ಕಾರ್ಯಾಚರಣೆಯನ್ನು ನಿಲ್ಲಿಸಲು ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಪಿಟಿಐ ಅರ್ಜಿಯಲ್ಲಿ ಕೋರಿತ್ತು.

ಇಮ್ರಾನ್‌ ಖಾನ್‌ ನಿವಾಸವಾದ ‘ಜಮಾನ್‌ ಪಾರ್ಕ್‌’ನಲ್ಲಿ ಗುರುವಾರ ಬೆಳಿಗ್ಗೆ 10 ಗಂಟೆಯವರೆಗೆ ಕಾರ್ಯಾಚರಣೆ ನಿಲ್ಲಿಸುವಂತೆ ಹೈಕೋರ್ಟ್‌ ಬುಧವಾರ ಆದೇಶಿಸಿತು ಎಂದು ಡಾನ್‌ ಪತ್ರಿಕೆ ವರದಿ ಮಾಡಿದೆ.

ಪಿಟಿಐ ಪಕ್ಷದ ನಾಯಕ ಫವಾದ್‌ ಚೌಧರಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ತಾರಿಕ್‌ ಸಲೀಂ ಶೇಖ್‌ ಅವರು ಈ ಕುರಿತು ಆದೇಶಿಸಿದರು.

ಬಂಧಿಸದೆ ಹಿಂದಿರುಗಿದ ಪೊಲೀಸರು:

ಇಮ್ರಾನ್‌ ಬಂಧಿಸದಂತೆ ತಡೆಯಲು ಅವರ ಬೆಂಬಲಿಗರು ಬುಧವಾರವೂ ಇಮ್ರಾನ್‌ ನಿವಾಸದ ಸುತ್ತಲೂ ದೊಡ್ಡ ಸಂಖ್ಯೆಯಲ್ಲಿ ಜಮಾಯಿಸಿ, ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನಕಾರರನ್ನು ಚದುರಿಸಲು ಪೊಲೀಸರು ಜಲಫಿರಂಗಿ, ಅಶ್ರುವಾಯು, ಲಾಠಿ ಪ್ರಯೋಗಿಸಿದರು. ಪೊಲೀಸರ ಮೇಲೆ ಇಮ್ರಾನ್‌ ಬೆಂಬಲಿಗರೂ ಕಲ್ಲುಗಳನ್ನು ತೂರಿದರು.

ಖಾನ್‌ ಬಂಧನಕ್ಕೆ ಮಂಗಳವಾರದಿಂದ ನಿರಂತರ ಪ್ರಯತ್ನ ನಡೆಸಿದ್ದ ಪಾಕ್‌ ಪೊಲೀಸರು ಮತ್ತು ರೇಂಜರ್‌ಗಳು ಲಾಹೋರ್‌ ಹೈಕೋರ್ಟ್‌ ಆದೇಶದ ಬಳಿಕ ಬುಧವಾರ ಕಾರ್ಯಾಚರಣೆ ನಿಲ್ಲಿಸಿ ಹಿಂದಿರುಗಿದರು. ಇದು ಖಾನ್‌ ಬೆಂಬಲಿಗರನ್ನು ಹರ್ಷೋದ್ಗಾರ ಮತ್ತು ಸಂಭ್ರಮಾಚರಣೆಯಲ್ಲಿ ತೊಡಗುವಂತೆ ಮಾಡಿತು.

‘ಸಮ್ಮಿಶ್ರ ಸರ್ಕಾರದ ದುರುದ್ದೇಶಗಳು ಈಡೇರಲು ಬಿಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿರುವುದಾಗಿ’ ಟ್ವೀಟ್‌ ಮಾಡಿರುವ ಪಿಟಿಐ ಪಕ್ಷವು, ‘ಹೆಚ್ಚಿನ ಕಾರ್ಯಕರ್ತರು ಜಮಾನ್‌ ಪಾರ್ಕ್‌ನತ್ತ ಬರುತ್ತಿದ್ದಾರೆ’ ಎಂದು ತಿಳಿಸಿದೆ.

ಖಾನ್‌ ಅವರ ನಿವಾಸ ಬಳಿ ಮಂಗಳವಾರ ಪೊಲೀಸರೊಂದಿಗೆ ನಡೆದಿದ್ದ ಘರ್ಷಣೆಯಲ್ಲಿ 54 ಪೊಲೀಸರು ಸೇರಿದಂತೆ 60 ಜನರು ಗಾಯಗೊಂಡಿದ್ದರು. ಹೀಗಾಗಿ ಬುಧವಾರ ಹಿರಿಯ ರೇಂಜರ್‌ಗಳನ್ನು ನಿಯೋಜಿಸಲಾಗಿತ್ತು.

ವಾರಂಟ್‌ ರದ್ದುಪಡಿಸಲು ಇಸ್ಲಾಮಾಬಾದ್‌ ಹೈಕೋರ್ಟ್ ನಕಾರ

ಭ್ರಷ್ಟಾಚಾರ ಪ್ರಕರಣದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಂಧನದ ವಾರಂಟ್ ಅನ್ನು ರದ್ದುಪಡಿಸಲು ಇಸ್ಲಾಮಾಬಾದ್‌ ಹೈಕೋರ್ಟ್ ಬುಧವಾರ ನಿರಾಕರಿಸಿದೆ.

ಈ ಕುರಿತು ಇಮ್ರಾನ್‌ ಖಾನ್‌ ಅವರು ಅರ್ಜಿಯೊಂದಿಗೆ ವಿಚಾರಣಾ ನ್ಯಾಯಾಲಯಕ್ಕೆ ಹೋಗುವಂತೆ ಕೋರ್ಟ್‌ ಆದೇಶಿಸಿದೆ.

‘ತೋಶಾಖಾನಾ’ ಪ್ರಕರಣದಲ್ಲಿ ತಮ್ಮ ವಿರುದ್ಧದ ಬಂಧನದ ವಾರಂಟ್‌ಗಳನ್ನು ರದ್ದುಪಡಿಸಲು ಕೋರಿ ಖಾನ್‌ ಇಸ್ಲಾಮಾಬಾದ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT