ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ಜತೆ ಶಾಂತಿ ಬಯಸಿದ ಪಾಕ್‌!

ಪಾಠ ಕಲಿತಿರುವುದಾಗಿ ಹೇಳಿದ ಪಾಕಿಸ್ತಾನ ಪ್ರಧಾನಿ ಶೆಹಬಾಜ್‌ ಷರೀಫ್‌
Last Updated 17 ಜನವರಿ 2023, 13:58 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌ (ಪಿಟಿಐ): ‘ನಾವು ಪಾಠ ಕಲಿತಿದ್ದೇವೆ. ನಮ್ಮ ನೈಜ ಸಮಸ್ಯೆಗಳನ್ನು ಪರಿಹರಿಸಲು ನಮಗೆ ಸಾಧ್ಯವಾದರೆ ನಾವು ಭಾರತದೊಂದಿಗೆ ಶಾಂತಿಯಿಂದ ಬದುಕಲು ಬಯಸುತ್ತೇವೆ’ ಎಂಬ ಸಂದೇಶವನ್ನು ಪಾಕಿಸ್ತಾನ ಪ್ರಧಾನಿ ಶೆಹಬಾಜ್‌ ಷರೀಫ್ ಅವರು ಭಾರತಕ್ಕೆ ರವಾನಿಸಿದ್ದಾರೆ.

‘ಕಾಶ್ಮೀರ ವಿವಾದ ಸೇರಿದಂತೆ ಪ್ರಮುಖವಾದ ಜ್ವಲಂತ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಭಾರತದೊಂದಿಗೆ ಪ್ರಾಮಾಣಿಕ ಮತ್ತು ಗಂಭೀರವಾದ ಮಾತುಕತೆಗಳನ್ನು ಬಯಸುತ್ತೇವೆ. ಅಣ್ವಸ್ತ್ರಸಜ್ಜಿತ ಉಭಯ ರಾಷ್ಟ್ರಗಳ ನಡುವೆ ಮಾತುಕತೆಯ ಪುನರಾರಂಭಕ್ಕೆ ಅನುಕೂಲವಾಗುವಂತೆ ಸಂಯುಕ್ತ ಅರಬ್ ರಾಷ್ಟ್ರ (ಯುಎಇ) ಪ್ರಮುಖ ಪಾತ್ರ ವಹಿಸಲಿದೆ’ ಎಂದು ಷರೀಫ್‌ ಅವರು ದುಬೈ ಮೂಲದ ಅಲ್ ಅರೇಬಿಯಾ ಸುದ್ದಿ ವಾಹಿನಿಗೆ ಸೋಮವಾರ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

‘ದೇಶದ ಸಂಪನ್ಮೂಲವನ್ನು ಬಾಂಬುಗಳು ಮತ್ತು ಮದ್ದುಗುಂಡುಗಳಿಗೆ ವ್ಯರ್ಥಮಾಡಲು ನಾವು ಬಯಸುವುದಿಲ್ಲ. ನಾವು ಪಾಠ ಕಲಿತ್ತಿದ್ದೇವೆ. ಬಡತನ ನಿರ್ಮೂಲನೆಗೆ, ಪ್ರಗತಿ ಸಾಧಿಸಲು, ನಮ್ಮ ಜನರಿಗೆ ಶಿಕ್ಷಣ ಮತ್ತು ಆರೋಗ್ಯ ಸೇವೆಗಳನ್ನು ಒದಗಿಸಲು ನಾವು ಬಯಸುತ್ತೇವೆ. ಕಾಶ್ಮೀರದಂತಹ ಜ್ವಲಂತ ಸಮಸ್ಯೆಗಳನ್ನು ಪರಿಹರಿಸಲು ಗಂಭೀರ ಮತ್ತು ಪ್ರಾಮಾಣಿಕ ಮಾತುಕತೆ ನಡೆಸೋಣ ಎಂಬ ಸಂದೇಶವನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಲುಪಿಸಲು ಬಯಸುವೆ’ ಎಂದು ಅವರು ಹೇಳಿದ್ದಾರೆ.

‘ನಾವು ಭಾರತದೊಂದಿಗೆ ಮೂರು ಯುದ್ಧಗಳನ್ನು ನಡೆಸಿದ್ದೇವೆ. ಯುದ್ಧಗಳು ಜನರಿಗೆ ಹೆಚ್ಚು ದುಃಖ, ಬಡತನ ಮತ್ತು ನಿರುದ್ಯೋಗವನ್ನಷ್ಟೇ ನೀಡಿದವು. ಪರಸ್ಪರ ಜಗಳ, ಸಮಯ ಮತ್ತು ಸಂಪನ್ಮೂಲಗಳನ್ನು ವ್ಯರ್ಥ ಮಾಡುತ್ತಿದ್ದೇವೆ. ಇದೆಲ್ಲವನ್ನು ಬಿಟ್ಟು, ಉಭಯ ರಾಷ್ಟ್ರಗಳ ಜನರು ಕೂಡಿ ಬಾಳಬೇಕು ಮತ್ತು ಪ್ರಗತಿ ಸಾಧಿಸಬೇಕಿದೆ’ ಎಂದು ಷರೀಫ್‌ ಹೇಳಿದ್ದಾರೆ.

ಕಾಶ್ಮೀರ ಸೇರಿದಂತೆ ಭಾರತದೊಂದಿಗಿನ ಎಲ್ಲ ಪ್ರಮುಖ ಸಮಸ್ಯೆಗಳನ್ನು ಬಗೆಹರಿಸಲು ಮೂರನೇ ದೇಶದ ಮಧ್ಯಸ್ಥಿಕೆಯನ್ನು ಪಾಕ್‌ ವಿದೇಶಾಂಗ ಸಚಿವಾಲಯ ಸ್ವಾಗತಿಸಿದೆ ಎಂದು ಅವರು ಹೇಳಿದರು.

ಭಯೋತ್ಪಾದನೆ ಮತ್ತು ಮಾತುಕತೆಗಳು ಒಟ್ಟಿಗೆ ಸಾಗಲು ಸಾಧ್ಯವಿಲ್ಲ. ಇಸ್ಲಾಮಾಬಾದ್ ಮಾತುಕತೆಗೆ ಪುನರಾರಂಭಿಸಲು ಅನುಕೂಲಕರ ವಾತಾವರಣ ಒದಗಿಸಬೇಕು. ಕಾಶ್ಮೀರ ವಿವಾದ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ವಿಷಯ. ಇದರಲ್ಲಿ ಮೂರನೇ ದೇಶದ ಯಾವುದೇ ಪಾತ್ರವನ್ನು ಬಯಸುವುದಿಲ್ಲ ಎಂದು ಭಾರತ ತನ್ನ ನಿಲುವು ಸಮರ್ಥಿಸಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT