ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಾಯಕಾರಿ ರಾಸಾಯನಿಕ ಹೊಂದಿದ್ದ ಹಡಗು ಪಾಕಿಸ್ತಾನದಲ್ಲಿ ಲಂಗರು: ತನಿಖೆಗೆ ಆದೇಶ

ಏಜೆಂಟರ ಮೂಲಕ ಮುಂಬೈನಿಂದ ಹಡಗು ಖರೀದಿಸಿ ಗಡಾನಿ ಹಡಗುಕಟ್ಟೆಗೆ ತೆಗೆದುಕೊಂಡು ಹೋಗಿದ್ದ ಪಾಕ್‌ ವ್ಯಕ್ತಿ
Last Updated 27 ಮೇ 2021, 16:05 IST
ಅಕ್ಷರ ಗಾತ್ರ

ಕರಾಚಿ: ಅಪಾಯಕಾರಿ ರಾಸಾಯನಿಕ ಹೊಂದಿದೆ ಎಂದು ಶಂಕಿಸಲಾದ ಹಡಗೊಂದನ್ನು ಇಂಟರ್‌ಪೋಲ್‌ನ ಎಚ್ಚರಿಕೆಯ ನಡುವೆಯೂ ಪಾಕಿಸ್ತಾನದ ಗಡಾನಿ ಹಡಗುಕಟ್ಟೆಗೆ ತರಲಾಗಿದೆ. ಹಡಗಿಗೆ ಲಂಗರು ಹಾಕಲು ಅನುಮತಿಸಿದ್ದರ ವಿಚಾರವಾಗಿ ಬಲೂಚಿಸ್ತಾನ್‌ ಸರ್ಕಾರವು ಸದ್ಯ ತನಿಖೆ ಆರಂಭಿಸಿದೆ.

'ಪಾಕಿಸ್ತಾನದ ಪ್ರಜೆಯೊಬ್ಬರು ಈ ಹಡಗನ್ನು ಮುಂಬೈನಲ್ಲಿರುವ ತಮ್ಮ ಏಜೆಂಟರ ಮೂಲಕ ಖರೀದಿಸಿದ್ದಾರೆ. ಗಡಾನಿ ಹಡಗುಕಟ್ಟೆಯ ಅಂಗಳಕ್ಕೆ ಅದನ್ನು ತಂದಿದ್ದಾರೆ,' ಎಂದು ಬಲೂಚಿಸ್ತಾನ್ ಸರ್ಕಾರದ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

'ಹಡಗಿನಲ್ಲಿ ಅಪಾಯಕಾರಿ ರಾಸಾಯನಿಕಗಳು ಮತ್ತು ಸಾಮಗ್ರಿಗಳಿವೆ ಎಂದು ಇಂಟರ್ಪೋಲ್ ಎಚ್ಚರಿಸಿತ್ತು. ಗಡಾನಿ ಹಡಗುಕಟ್ಟೆಯಲ್ಲಿ ಲಂಗರು ಹಾಕಲು ಹೇಗೆ ಅನುಮತಿ ನೀಡಲಾಯಿತು ಎಂಬುದರ ಬಗ್ಗೆ ತನಿಖೆ ಆರಂಭಿಸಲಾಗಿದೆ,' ಎಂದು ಬಲೂಚಿಸ್ತಾನ ಸರ್ಕಾರದ ಪರಿಸರ ವಿಭಾಗದ ಉಪನಿರ್ದೇಶಕ ಇಮ್ರಾನ್ ಸಯೀದ್ ಕಾಕರ್ ತಿಳಿಸಿದ್ದಾರೆ.

'ಹಡಗನ್ನು ಮೊದಲು ಬಾಂಗ್ಲಾದೇಶಕ್ಕೆ, ನಂತರ ಭಾರತಕ್ಕೆ ತರಲಾಗಿತ್ತು. ಅಪಾಯಕಾರಿ ರಾಸಾಯನಿಕಗಳಿದ್ದ ಕಾರಣಕ್ಕೆ ಅದನ್ನು ಒಡೆಯಲು ಅಲ್ಲಿನ ಸರ್ಕಾರಗಳು ಅನುಮತಿ ನೀಡಿರಲಿಲ್ಲ. ಈಗ ಇಲ್ಲಿಗೆ ತರಲಾಗಿದೆ,' ಎಂದು ಅವರು ಮಾಹಿತಿ ನೀಡಿದ್ದಾರೆ.

'ಹಡಗಿನಲ್ಲಿ ಮಾರಕ ರಾಸಾಯನಿಕಗಳಿವೆಯೇ ಎಂಬುದನ್ನು ತಿಳಿದುಕೊಳ್ಳಲು ಅದರಲ್ಲಿರುವ ವಸ್ತುಗಳ ಮಾದರಿಯನ್ನು ಮೂರು ಪ್ರಯೋಗಶಾಲೆಗಳಿಗೆ ರವಾನಿಸಲಾಗಿದೆ. ಆದರೆ, ಈ ಹಡುಗು ಎಲ್ಲ ಎಚ್ಚರಿಕೆಗಳನ್ನು ಮೀರಿ ಇಲ್ಲಿಗೆ ಹೇಗೆ ಬಂತು ಎಂಬುದೇ ಅಚ್ಚರಿಯ ವಿಷಯ,' ಎಂದು ಕಾಕರ್‌ ಹೇಳಿದ್ದಾರೆ.

'ಈ ಹಡಗಿನಲ್ಲಿ ಪಾದರಸ ಅಗತ್ಯಕ್ಕಿಂತಲೂ ಹೆಚ್ಚಿಗೆ ಇದೆ. ಹಡಗಿನ ಮಾಲೀಕನಿಗೆ ಇದನ್ನು ಇಲ್ಲಿ ಒಡೆಯಲು ಅವಕಾಶ ನೀಡಿಲ್ಲ. ಒಂದು ವೇಳೆ ಹಡಗಿನಲ್ಲಿ ಪಾದರಸ ಹೆಚ್ಚಿನ ಪ್ರಮಾಣದಲ್ಲಿದೆ ಎಂದು ವರದಿಗಳು ಹೇಳಿದರೆ ಕ್ರಮ ಕೈಗೊಳ್ಳಲಾಗುತ್ತದೆ,' ಎಂದು ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT