ಶುಕ್ರವಾರ, ಡಿಸೆಂಬರ್ 2, 2022
20 °C

ಇಮ್ರಾನ್‌ಗೆ ಗುಂಡೇಟು: 24 ಗಂಟೆಯೊಳಗೆ ಎಫ್ಐಆರ್‌ಗೆ ಸುಪ್ರೀಂ ಆದೇಶ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಇಸ್ಲಾಮಾಬಾದ್ : ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಮೇಲೆ ಕಳೆದ ಗುರುವಾರ ನಡೆದ ಗುಂಡಿನ ದಾಳಿಗೆ ಸಂಬಂಧಿಸಿದಂತೆ 24 ಗಂಟೆ ಒಳಗಾಗಿ ಎಫ್‌ಐಆರ್‌ ದಾಖಲಿಸುವಂತೆ ಪಂಜಾಬ್‌ ಪ್ರಾಂತ್ಯದ ಐಜಿಗೆ ಪಾಕ್ ಸುಪ್ರೀಂಕೋರ್ಟ್‌ ಸೋಮವಾರ ಆದೇಶಿಸಿದೆ.

ಸುಪ್ರೀಂನ ಈ ನಡೆಯನ್ನು ಇಮ್ರಾನ್‌ ಖಾನ್‌ ಅವರು ‘ನ್ಯಾಯದತ್ತ ಮೊದಲ ಹೆಜ್ಜೆ’ ಎಂದು ಪ್ರಶಂಸಿಸಿದ್ದಾರೆ.

‘ತನ್ನ ಮೇಲಿನ ಹತ್ಯೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಳ್ಳಲು ಪೊಲೀಸರು ನಿರಾಕರಿಸುತ್ತಿದ್ದು, ದೂರಿನಲ್ಲಿರುವ ಸೇನೆಯ ಜನರಲ್ ಹೆಸರನ್ನು ತೆಗೆಯುವಂತೆ ಒತ್ತಾಯಿಸುತ್ತಿದ್ದಾರೆ’ ಎಂದು ಭಾನುವಾರ ಇಮ್ರಾನ್ ಆರೋಪಿಸಿದ್ದರು.

ಒಂದು ವೇಳೆ ಪ್ರಕರಣ ದಾಖಲಿಸಿಕೊಳ್ಳದಿದ್ದರೆ ಕೋರ್ಟ್‌ ಸ್ವಯಂ ಪ್ರೇರಿತವಾಗಿ ವಿಷಯ ಕೈಗೆತ್ತಿಕೊಳ್ಳುವುದಾಗಿ ಹೇಳಿದ್ದು, ಈ ವರೆಗೆ ಪ್ರಕರಣ ದಾಖಲಿಸಿಕೊಳ್ಳದೇ ಇರುವುದಕ್ಕೆ ಕಾರಣವನ್ನು ನೀಡುವಂತೆಯೂ ಪೊಲೀಸ್ ಮುಖ್ಯಸ್ಥ ಫೈಸಲ್‌ ಶಹಕರ್ ಅವರಿಗೆ ಮುಖ್ಯ ನ್ಯಾಯಾಮೂರ್ತಿ ಉಮರ್ ಅಟಾ ಬಂಡಿಯಾಲ್ ಆದೇಶಿಸಿದ್ದಾರೆ. ಅಲ್ಲದೇ ಸತ್ಯದ ಶೋಧನೆಯಲ್ಲಿ ಕೋರ್ಟ್‌ ತಮ್ಮ ಜೊತೆ ಇರಲಿದೆ ಎಂದೂ ಆಶ್ವಾಸನೆ ನೀಡಿದ್ದಾರೆ.

ಅಧ್ಯಕ್ಷರಿಗೆ ಪತ್ರ:  ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕು ರಕ್ಷಣೆ, ದೇಶದ ಸುರಕ್ಷತೆ ಕಾಪಾಡಲು ಹಾಗೂ ಅಧಿಕಾರದ ದುರುಪಯೋಗ ಪಡೆಸಿಕೊಳ್ಳುತ್ತಿರುವವರನ್ನು ತಡೆಯುವ ಸಲುವಾಗಿ ದೇಶದ ಅತ್ಯುನ್ನತ ಹುದ್ದೆಯಲ್ಲಿರುವ ನೀವು ಈಗ ಕಾರ್ಯಪ್ರವೃತ್ತರಾಗಬೇಕೆಂದು ವಿನಂತಿಸಿಕೊಳ್ಳುತ್ತಿದ್ದೇನೆ ಎಂದು ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು ಪಾಕ್ ಅಧ್ಯಕ್ಷ ಅರಿಫ್‌ ಅಲ್ವಿ ಅವರಿಗೆ ಪತ್ರ ಬರೆದಿದ್ದಾರೆ.

ಆಂತರಿಕ ಸಚಿವ ರಾಣಾ ಸನಾವುಲ್ಲಾ ಅವರು ತಮಗೆ ಪದೇ ಪದೇ ಕೊಲೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದು, ಪಿಟಿಐ ಸರ್ಕಾರ ಅಧಿಕಾರದಲ್ಲಿದ್ದಾಗ ದೇಶ ಶಾಂತವಾಗಿತ್ತು ಎಂದು ಖಾನ್ ಪತ್ರದಲ್ಲಿ ತಿಳಿಸಿದ್ದಾರೆ.

ಶನಿವಾರ ಪಾಕ್ ಅಧ್ಯಕ್ಷ ಅಲ್ವಿ ಹಾಗೂ ಅವರ ಪತ್ನಿ ಬೇಗಂ ಸಮೀನಾ ಆರಫ್ ಅಲ್ವಿ ಅವರು ಆಸ್ಪತ್ರೆಯಲ್ಲಿ ಇಮ್ರಾನ್‌ ಖಾನ್ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿ, ಸುಮಾರು ಒಂದು ಗಂಟೆ ಕಾಲ ಅವರೊಂದಿಗೆ ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು