ಗುರುವಾರ , ನವೆಂಬರ್ 26, 2020
22 °C

ಪುಲ್ವಮಾ ದಾಳಿ ಪಾಕ್‌ನ ಯಶಸ್ಸು ಎಂಬ ಹೇಳಿಕೆಯಿಂದ ಹಿಂದೆ ಸರಿದ ಸಚಿವ

ಪ್ರಜಾವಾಣಿ ವೆಬ್‌ ಡೆಸ್ಕ್ Updated:

ಅಕ್ಷರ ಗಾತ್ರ : | |

ಇಸ್ಲಾಮಾಬಾದ್‌: ಜಮ್ಮು ಮತ್ತು ಕಾಶ್ಮೀರದಲ್ಲಿ 2019ರ ಫೆಬ್ರುವರಿಯಲ್ಲಿ ನಡೆದಿದ್ದ ಪುಲ್ವಾಮಾ ದಾಳಿಗೆ ಪಾಕಿಸ್ತಾನವೇ ಕಾರಣ ಎಂಬ ತಮ್ಮ ಹೇಳಿಕೆಯಿಂದ ಪಾಕ್‌ ಸಚಿವ ಫವಾದ್ ಚೌಧರಿ ಹಿಂದೆ ಸರಿದಿದ್ದಾರೆ. ಅಲ್ಲದೇ ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಹೇಳಿರುವುದಾಗಿ ವರದಿಯಾಗಿದೆ.

'ಪಾಕಿಸ್ತಾನ ಯಾವುದೇ ರೀತಿಯ ಭಯೋತ್ಪಾದನೆಯನ್ನು ಒಪ್ಪುವುದಿಲ್ಲ. ನನ್ನನ್ನು ತಪ್ಪಾಗಿ ಅರ್ಥೈಸಲಾಗಿದೆ,' ಎಂದು ಪಾಕಿಸ್ತಾನ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಫವಾದ್‌ ಚೌಧರಿ ಎನ್‌ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಭಾರತ ಮತ್ತು ಪಾಕಿಸ್ತಾನದ ನಡುವೆ ಎದುರಾಗಿದ್ದ ಉದ್ವಿಘ್ನ ಪರಿಸ್ಥಿತಿಯ ಹಿನ್ನೆಲೆಯಲ್ಲಿ 'ಪುಲ್ವಾಮಾ' ಎಂಬ ಪದವನ್ನು ನಾನು ವಿಶಾಲಾರ್ಥದಲ್ಲಿ ಹೇಳಿದ್ದೆ. ನನ್ನ ಹೇಳಿಕೆ ಬಹಳ ಸ್ಪಷ್ಟವಾಗಿದೆ. ಪುಲ್ವಾಮಾ ಭಯೋತ್ಪಾದನಾ ದಾಳಿಯ ನಂತರ ಭಾರತವು ಪಾಕ್‌ನ ವಾಯುಗಡಿ ಪ್ರವೇಶಿಸಿ, ಬಾಳಾಕೋಟ್‌ ಮೇಲೆ ದಾಳಿ ನಡೆಸಿತ್ತು. ಅದಕ್ಕೆ ಪ್ರತಿಯಾಗಿ ಪಾಕಿಸ್ತಾನವು ಪ್ರತಿದಾಳಿ ನಡೆಸಿತ್ತು. ಇದೇ ಕಾರ್ಯಾಚರಣೆಯ ಬಗ್ಗೆ ನಾನು ಮಾತನಾಡಿದ್ದೆ,' ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

‘ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ಬಿಡುಗಡೆ ಮಾಡದಿದ್ದರೆ, ಭಾರತ ದಾಳಿ ಮಾಡಬಹುದು ಎಂಬ ಮಾತು ಕೇಳಿ ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಜಾವೇದ್ ಬಾಜ್ವಾ ಬೆವರಿದ್ದರು, ಅವರ ಕಾಲುಗಳು ನಡುಗುತ್ತಿದ್ದವು’ ಎಂದು ಪಾಕಿಸ್ತಾನದ ಪ್ರತಿಪಕ್ಷದ ನಾಯಕ ಆಯಾಝ್‌ ಸಿದ್ಧಿಖ್‌ ಹೇಳಿದ್ದರು. ಸಿದ್ಧಿಖ್‌ ಅವರ ಈ ಹೇಳಿಕೆಗೆ ತಿರುಗೇಟು ನೀಡುವ ವೇಳೆ, ಸಚಿವ ಫವಾದ್ ಚೌಧರಿ 'ಭಾರತಕ್ಕೆ ನಾವು ಅದರ ಮನೆಯಲ್ಲೇ ಹೊಡೆದೆವು. ಪುಲ್ವಾಮಾದಲ್ಲಿನ ನಮ್ಮ ಯಶಸ್ಸು, ಇಮ್ರಾನ್ ಖಾನ್ ನೇತೃತ್ವದಲ್ಲಿ ಈ ರಾಷ್ಟ್ರ ಸಾಧಿಸಿದ ಯಶಸ್ಸಾಗಿದೆ. ನೀವು ಮತ್ತು ನಾವೆಲ್ಲರೂ ಆ ಯಶಸ್ಸಿನ ಭಾಗವಾಗಿದ್ದೇವೆ' ಎಂದು ಹೇಳಿದ್ದರು.

ಫೆ.27ರಂದು ನಡೆದ ವೈಮಾನಿಕ ಘರ್ಷಣೆಯಲ್ಲಿ ಅಭಿನಂದನ್ ಚಲಾಯಿಸುತ್ತಿದ್ದ ಮಿಗ್–21 ವಿಮಾನವನ್ನು ಪಾಕಿಸ್ತಾನ ಹೊಡೆದುರುಳಿಸಿ, ಅವರನ್ನು ಸೆರೆ ಹಿಡಿದಿತ್ತು. ತಮ್ಮ ವಿಮಾನ ಪತನವಾಗುವ ಮುನ್ನ ಅಭಿನಂದನ್ ಅವರು ಪಾಕಿಸ್ತಾನದ ಎಫ್–16 ಯುದ್ಧವಿಮಾನವನ್ನು ಹೊಡೆದುರುಳಿಸಿದ್ದರು. ಮಾರ್ಚ್ 1ರಂದು ಅವರು ಬಿಡುಗಡೆಯಾದರು. ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಫೆ. 26ರ ನಸುಕಿನಲ್ಲಿ ಬಾಲಾಕೋಟ್‌ ಮೇಲೆ ಭಾರತ ‘ನಿರ್ದಿಷ್ಟ ದಾಳಿ’ ನಡೆಸಿತ್ತು. ಮರುದಿನ ಪಾಕಿಸ್ತಾನದಿಂದ ವೈಮಾನಿಕ ದಾಳಿ ನಡೆದಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು