ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೇಶಾವರ: ಆತ್ಮಾಹುತಿ ಬಾಂಬ್‌ ಸ್ಫೋಟ, 61 ಮಂದಿ ಸಾವು

Last Updated 31 ಜನವರಿ 2023, 3:03 IST
ಅಕ್ಷರ ಗಾತ್ರ

ಪೇಶಾವರ: ಪಾಕಿಸ್ತಾನದ ವಾಯವ್ಯ ಭಾಗದ ನಗರ ಪೆಶಾವರದ ಪೊಲೀಸ್‌ ಪ್ರಧಾನ ಕಚೇರಿ ಸಮೀಪದ ಬಿಗಿ ಭದ್ರತೆಯ ಮಸೀದಿಯಲ್ಲಿ ಸೋಮವಾರ ಮಧ್ಯಾಹ್ನ ಆತ್ಮಾಹುತಿ ಬಾಂಬ್‌ ದಾಳಿ ನಡೆದಿದ್ದು, 61 ಮಂದಿ ಮೃತಪಟ್ಟು, 157 ಮಂದಿ ಗಾಯಗೊಂಡಿದ್ದಾರೆ.

ಪೊಲೀಸ್‌ ಲೈನ್‌ ಪ್ರದೇಶದಲ್ಲಿರುವ ಮಸೀದಿಯಲ್ಲಿ ಮಧ್ಯಾಹ್ನದ ಪ್ರಾರ್ಥನೆ ಸಲ್ಲಿಸುತ್ತಿದ್ದ ವೇಳೆ ಆತ್ಮಹತ್ಯಾ ಬಾಂಬರ್‌ ತನ್ನನ್ನು ತಾನು ಸ್ಫೋಟಿಸಿಕೊಂಡ. ನಾಲ್ಕು ಹಂತದ ಭದ್ರತಾ ವ್ಯವಸ್ಥೆಯನ್ನು ಆತ ಭೇದಿಸಿಕೊಂಡು ಬಂದಿದ್ದ.

ಸುಮಾರು 400 ಮಂದಿ ಪೊಲೀಸರು ಸ್ಥಳದಲ್ಲಿದ್ದರು. ಘಟನೆಯಲ್ಲಿ ಮಸೀದಿಯ ಕಟ್ಟಡದ ಒಂದು ಭಾಗ ಕುಸಿದುಬಿದ್ದಿದ್ದು, ಅದರ ಅಡಿಯಲ್ಲಿ ಹಲವರು ಸಿಕ್ಕಿಹಾಕಿಕೊಂಡಿರುವ ಆತಂಕ ಇದೆ ಎಂದು ಭದ್ರತಾ ಮತ್ತ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

‘ಪ್ರಾರ್ಥನೆ ಸಲ್ಲಿಸುವ ಸಲುವಾಗಿ ಮಸೀದಿಯೊಳಗೆ ಪ್ರವೇಶಿಸುತ್ತಿದ್ದ ವೇಳೆ ಸ್ಫೋಟ ಸಂಭವಿಸಿತು. ನಾನು ಸ್ವಲ್ಪದರಲ್ಲೇ ಪಾರಾದೆ’ ಎಂದು ಪೆಶಾವರದ ಪೊಲೀಸ್ ಅಧೀಕ್ಷಕ ಶಾಜದ್‌ ಕೌಕಬ್‌ ತಿಳಿಸಿದರು. ಪೆಶಾವರದ ಆಸ್ಪತ್ರೆಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದ್ದು, ಸಂತ್ರಸ್ತರಿಗಾಗಿ ರಕ್ತದಾನ ಮಾಡುವಂತೆ ನಾಗರಿಕರಲ್ಲಿ ಕೋರಲಾಗಿದೆ.

ಟಿಟಿಪಿ ಹೊಣೆ: ಅಫ್ಗಾನಿಸ್ತಾನದಲ್ಲಿ ಕಳೆದ ಆಗಸ್ಟ್‌ನಲ್ಲಿ ನಡೆದ ದಾಳಿಯ ವೇಳೆ ತೆಹ್ರೀಕ್‌–ಎ–ತಾಲಿಬಾನ್‌ ಪಾಕಿಸ್ತಾನ್‌ (ಟಿಟಿಪಿ) ಕಮಾಂಡರ್‌ ಉಮರ್ ಖಾಲಿದ್‌ ಖುರಸಾನಿ ಮೃತಪಟ್ಟಿದ್ದು, ಅದಕ್ಕೆ ಪ್ರತೀಕಾರವಾಗಿ ಈ ಆತ್ಮಾಹುತಿ ದಾಳಿ ನಡೆಸಲಾಗಿದೆ ಎಂದು ಆತನ ಸಹೋದರ ಹೇಳಿಕೆ ನೀಡಿದ್ದಾನೆ.

ಕಳೆದ ವರ್ಷ ನಗರದ ಕೊಚಾ ರಿಸಾಲ್ದಾರ್ ಪ್ರದೇಶದ ಶಿಯಾ ಮಸೀದಿಯೊಳಗೆ ಇಂತಹದೇ ದಾಳಿ ನಡೆದು 63 ಮಂದಿ ಮೃತಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT