ಶನಿವಾರ, ಜನವರಿ 28, 2023
20 °C

ಪಾಕಿಸ್ತಾನ: ಪಿಟಿಐ ಮುಖ್ಯಸ್ಥ ಸ್ಥಾನದಿಂದ ಇಮ್ರಾನ್‌ ವಜಾ ಪ್ರಕ್ರಿಯೆಗೆ ಚಾಲನೆ

ಪಿಟಿಐ Updated:

ಅಕ್ಷರ ಗಾತ್ರ : | |

ಇಸ್ಲಾಮಾಬಾದ್‌: ಪಾಕಿಸ್ತಾನ ತೆಹ್ರೀಕ್‌–ಎ– ಇನ್ಸಾಫ್‌(ಪಿಟಿಐ) ಪಕ್ಷದ ಮುಖ್ಯಸ್ಥರೂ ಆಗಿರುವ ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಅವರನ್ನು ಆ ಸ್ಥಾನದಿಂದ ವಜಾಗೊಳಿಸುವ ಪ್ರಕ್ರಿಯೆಗೆ ಪಾಕಿಸ್ತಾನ ಚುನಾವಣಾ ಆಯೋಗವು (ಇಸಿಪಿ) ಮಂಗಳವಾರ ಚಾಲನೆ ನೀಡಿದೆ. 

ತೊಶಖಾನ ಪ್ರಕರಣದಲ್ಲಿ ಇಮ್ರಾನ್‌ ಖಾನ್‌ ಅವರನ್ನು ಸಾರ್ವಜನಿಕ ಹುದ್ದೆಯಿಂದ ಅನರ್ಹಗೊಳಿಸಿದ ಬಳಿಕ ಚುನಾವಣಾ ಆಯೋಗವು ಈ ಕ್ರಮಕ್ಕೆ ಮುಂದಾಗಿದೆ. ಈ ಪ್ರಕ್ರಿಯೆಗೆ ಸಂಬಂಧಿಸಿ ಇಮ್ರಾನ್‌ ಖಾನ್‌ ಅವರಿಗೆ ನೋಟಿಸ್‌ ನೀಡಲಾಗಿದೆ. ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಡಿಸೆಂಬರ್‌ 13ಕ್ಕೆ ನಿಗದಿಪಡಿಸಲಾಗಿದೆ ಎಂದು ಆಯೋಗದ ಅಧಿಕಾರಿಯೊಬ್ಬರ ಹೇಳಿಕೆಯನ್ನು ಉಲ್ಲೇಖಿಸಿ ಪಾಕಿಸ್ತಾನದ ‘ಡಾನ್‌’ ಪತ್ರಿಕೆ ವರದಿ ಮಾಡಿದೆ. 

ದುಬಾರಿ ತೊಶಖಾನ ಉಡುಗೊರೆಗಳ ಕುರಿತ ಮಾಹಿತಿಯನ್ನು ಮರೆಮಾಚಿದ ಆರೋಪದ ಮೇಲೆ ಇಮ್ರಾನ್ ಖಾನ್‌ ಅವರನ್ನು ಪಾಕಿಸ್ತಾನ ಸಂವಿಧಾನದ 62 ಮತ್ತು 63ನೇ ವಿಧಿ ಅಡಿ ಇಸಿಪಿ ಅನರ್ಹಗೊಳಿಸಿತ್ತು. ಈ ವಿಧಿಗಳ ಅಡಿ ಅನರ್ಹಗೊಂಡ ವ್ಯಕ್ತಿಯು ರಾಜಕೀಯ ಪಕ್ಷದ ಮುಖ್ಯಸ್ಥರಾಗಬಾರದು ಎಂದು ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠವು 2018ರಲ್ಲೇ ಆದೇಶ ಹೊರಡಿಸಿತ್ತು.

ಪಾಕಿಸ್ತಾನದ ಆಡಳಿತಗಾರರು, ಸಂಸತ್‌ ಸದಸ್ಯರು, ಅಧಿಕಾರಿಗಳು ಪಡೆಯುವ ಉಡುಗೊರೆಗಳನ್ನು ಸಂಗ್ರಹಿಸಿಡುವ ಇಲಾಖೆಯನ್ನು ತೊಶಖಾನ ಎಂದು ಕರೆಯಲಾಗುತ್ತದೆ. ಇದು ಸಂಸದೀಯ ವಿಭಾಗದ ಆಡಳಿತದ ನಿಯಂತ್ರಣದಲ್ಲಿ ಇರುತ್ತದೆ.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು