ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಳಿಗೀಡಾದ ಹಿಂದೂ ದೇಗುಲ ಮರುನಿರ್ಮಾಣಕ್ಕೆ ಪಾಕ್‌ ಸರ್ವೋಚ್ಚ ನ್ಯಾಯಾಲಯದ ಆದೇಶ

ವಲಸೆ ಹೋದ ಅಲ್ಪಸಂಖ್ಯಾತರ ಆಸ್ತಿ ನಿರ್ವಹಿಸುವ ಮಂಡಳಿಗೆ ತರಾಟೆ
Last Updated 5 ಜನವರಿ 2021, 13:15 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌: ಕಳೆದ ವಾರ ಖೈಬರ್‌ ಪಂಕ್ತುಕ್ವಾ ಪ್ರಾಂತ್ಯದಲ್ಲಿ ದುಷ್ಕರ್ಮಿಗಳ ದಾಳಿಗೆ ತುತ್ತಾದ ಹಿಂದೂ ದೇವಾಲಯದ ‍ಪುನರ್‌ನಿರ್ಮಾಣ ಮಾಡುವಂತೆ ಪಾಕಿಸ್ತಾನದ ಸರ್ವೋಚ್ಚ ನ್ಯಾಯಾಲಯ ಮಂಗಳವಾರ ಆದೇಶ ನೀಡಿದೆ.

ದೇಗುಲದ ಮೇಲಿನ ದಾಳಿಯಿಂದ ಪಾಕಿಸ್ತಾನ ಅಂತರರಾಷ್ಟ್ರೀಯ ಮಟ್ಟದಲ್ಲಿ ಮುಜುಗರದ ಸನ್ನಿವೇಶ ಎದುರಿಸಬೇಕಾಗಿದೆ ಎಂದು ನ್ಯಾಯಾಲಯ ಹೇಳಿತು. ದೇವಾಲಯದ ಮರುನಿರ್ಮಾಣ ಮಾಡುವಂತೆ ಅದು ‘ತೆರವಾದ ಆಸ್ತಿಗಳ ಟ್ರಸ್ಟ್‌ ಮಂಡಳಿ’ಗೆ (ಇಪಿಟಿಬಿ) ಸೂಚಿಸಿತು.

ದೇಗುಲದ ಮೇಲಿನ ದಾಳಿಯನ್ನು ಗಮನದಟ್ಟಲಿಟ್ಟುಕೊಂಡು ಸರ್ವೋಚ್ಚ ನ್ಯಾಯಾಲಯ, ಜನವರಿ 5ರಂದು ತನ್ನ ಎದುರು ಹಾಜರಾಗುವಂತೆ ಸ್ಥಳೀಯ ಅಧಿಕಾರಿಗಳಿಗೆ ಸೂಚಿಸಿತ್ತು. ದೇಶದೆಲ್ಲೆಡೆ ಸಕ್ರಿಯವಾಗಿರುವ ಮತ್ತು ಕಾರ್ಯನಿರ್ವಹಣೆಯಿಲ್ಲದೇ ಇರುವ ದೇಗುಲಗಳು ಮತ್ತು ಗುರುದ್ವಾರಗಳ ವಿವರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆಯೂ ಅದು ಇಪಿಟಿಬಿಗೆ ಸೂಚನೆ ನೀಡಿದೆ ಎಂದು ಡಾನ್‌ ದೈನಿಕ ವರದಿ ಮಾಡಿದೆ.

ಖೈಬರ್‌ ಪಂಖ್ತುಕ್ವಾ ಪ್ರಾಂತ್ಯದ ಕರಾಕ್‌ ಜಿಲ್ಲೆಯ ಟೆರ‍್ರಿ ಎಂಬ ಗ್ರಾಮದ ದೇಗುಲದ ಮೇಲೆ ಜಮಿಯತ್‌ ಉಲೇಮಾ–ಇ–ಇಸ್ಲಾಮ್‌ ಪಾರ್ಟಿ (ಫಜಲ್‌ ಉರ್‌ ರೆಹಮಾನ್‌ ಬಣ) ಸಂಘಟನೆಯ ಸದಸ್ಯರಿಂದ ದಾಳಿ ನಡೆದಿತ್ತು. ದಾಳಿಯನ್ನು ಮಾನವ ಹಕ್ಕುಗಳ ಕಾರ್ಯಕರ್ತರು ಮತ್ತು ಅಲ್ಪಸಂಖ್ಯಾತ ಹಿಂದೂ ಸಮುದಾಯಗಳ ಮುಖಂಡರು ತೀವ್ರವಾಗಿ ಖಂಡಿಸಿದ್ದರು.

ಮುಖ್ಯ ನ್ಯಾಯಮೂರ್ತಿ ಗುಲ್ಜಾರ್‌ ಅಹ್ಮದ್‌ ಅವರನ್ನು ಒಳಗೊಂಡ ಮೂವರು ಸದಸ್ಯರ ನ್ಯಾಯಪೀಠವು ಮಂಗಳವಾರ ವಿಚಾರಣೆಯ ಸಂದರ್ಭದಲ್ಲಿ, ದೇಶದೆಲ್ಲೆಡೆ ದೇವಾಲಯಗಳ ಜಾಗದಲ್ಲಿ ಆಗಿರುವ ಅತಿಕ್ರಮಣಗಳನ್ನು ತೆರವು ಮಾಡಬೇಕು ಮತ್ತು ಇದರಲ್ಲಿ ಭಾಗಿಯಾಗಿರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದೂ ಇಪಿಟಿಬಿಗೆ ಆದೇಶ ನೀಡಿದೆ.

ಕರಾಕ್‌ ಘಟನೆಯು ಪಾಕಿಸ್ತಾನಕ್ಕೆ ತೀವ್ರ ಇರಿಸುಮುರಿಸು ಉಂಟುಮಾಡಿದೆ ಎಂದು ಜಸ್ಟಿಸ್‌ ಅಹ್ಮದ್‌ ಅಭಿಪ್ರಾಯಪಟ್ಟರು.

ಇಪಿಟಿಬಿಯು ಕಾನೂನುಬದ್ಧ ಸಂಸ್ಥೆಯಾಗಿದ್ದು, ದೇಶ ವಿಭಜನೆಯ ನಂತರ ಭಾರತಕ್ಕೆ ವಲಸೆ ಹೋಗಿರುವ ಹಿಂದೂಗಳು ಮತ್ತು ಸಿಖ್ಖರ ದೇಗುಲ, ಗುರುದ್ವಾರಗಳು ಮತ್ತು ಅವುಗಳ ಆಸ್ತಿಗಳ ನಿರ್ವಹಣೆ ನೋಡಿಕೊಳ್ಳುತ್ತದೆ.

ಖೈಬರ್‌ ಪಂಖ್ತುಕ್ವಾದ ಮುಖ್ಯ ಕಾರ್ಯದರ್ಶಿ, ಪೊಲೀಸ್‌ ಮುಖ್ಯಸ್ಥ ಮತ್ತು ಅಲ್ಪಸಂಖ್ಯಾತರ ಹಕ್ಕುಗಳ ಆಯೋಗದ ಅಧ್ಯಕ್ಷ ಡಾ.ಶೋಯಬ್‌ ಸಡಲ್‌ ಅವರು ವಿಚಾರಣೆಯ ವೇಳೆ ಹಾಜರಿದ್ದರು.

ಕರಾಕ್‌ನಲ್ಲಿ ದಾಳಿಗೊಳಗಾದ ದೇಗುಲದ ಸ್ಥಳಕ್ಕೆ ಭೇಟಿ ನೀಡಿದ್ದ ಶೋಯಬ್‌ ಅವರು ನ್ಯಾಯಾಲಯಕ್ಕೆ ಸೋಮವಾರ ಸಮಗ್ರ ವರದಿ ಸಲ್ಲಿಸಿದ್ದರು.

‘ದೇಗುಲದ ಬಳಿಯೇ ಪೊಲೀಸ್‌ ಚೌಕಿಯಿರುವಾಗ ದಾಳಿ ನಡೆದಿರುವುದಾದರೂ ಹೇಗೆ? ನಿಮ್ಮ ಗುಪ್ತಚರ ಸಂಸ್ಥೆಗಳು ಎಲ್ಲಿದ್ದವು’ ಎಂದು ನ್ಯಾಯಮೂರ್ತಿ ಇಝಾಜುಲ್‌ ಅಶನ್‌ ಅವರು ಪೊಲೀಸ್‌ ಮುಖ್ಯಸ್ಥರನ್ನು ಪ್ರಶ್ನಿಸಿದರು.

ದೇಗುಲದ ಬಳಿಯ ಜಾಗದಲ್ಲಿ ಮೌಲಾನಾ ಫೈಝುಲ್ಲಾ ನೇತೃತ್ವದಲ್ಲಿ ಜಮಿಯತ್‌ ಉಲೇಮಾ ಇ ಇಸ್ಲಾಂ (ಫಝಲ್‌) ಹಮ್ಮಿಕೊಂಡಿದ್ದ ಪ್ರತಿಭಟನೆಯ ದಿನ ಈ ದಾಳಿ ನಡೆದಿದೆ ಎಂದು ಪೊಲೀಸ್‌ ಮುಖ್ಯಸ್ಥರು ವಿವರಣೆ ನೀಡಿದರು.

ಪ್ರಕರಣಕ್ಕೆ ಸಂಬಂಧಿಸಿ 109 ಜನರನ್ನು ಬಂಧಿಸಲಾಗಿದೆ. ಅಂದು ಕರ್ತವ್ಯದಲ್ಲಿದ್ದ ಪೊಲೀಸ್‌ ವರಿಷ್ಠಾಧಿಕಾರಿ, ಡಿಎಸ್‌ಪಿ ಸೇರಿ 92 ಪೊಲೀಸರನ್ನು ಅಮಾನತುಗೊಳಿಸಲಾಗಿದೆ ಎಂದು ವಿವರ ನೀಡಿದರು.

‘ಅಮಾನತು ಶಿಕ್ಷೆ ಸಾಕಾಗುವುದಿಲ್ಲ’ ಎಂದು ನ್ಯಾಯಮೂರ್ತಿ ಅಹ್ಮದ್‌ ತಿಳಿಸಿದರು.

ಸರ್ಕಾರಿ ಮನೋಭಾವ ಇಟ್ಟುಕೊಂಡು ಅಧ್ಯಕ್ಷರ ಸ್ಥಾನದಲ್ಲಿ ಕೆಲಸ ಮಾಡಬೇಡಿ ಎಂದು ನ್ಯಾಯಮೂರ್ತಿ ಅವರು ಇಪಿಟಿಬಿ ಅಧ್ಯಕ್ಷರನ್ನು ತರಾಟೆಗೆ ತೆಗೆದುಕೊಂಡರು,

‘ದೇಗುಲಗಳಿಗೆ ಸೇರಿದ ಜಾಗದಲ್ಲಿ ನಿಮ್ಮ ನೌಕರರು ವ್ಯವಹಾರ ನಡೆಸುತ್ತಿದ್ದಾರೆ. ಅವರನ್ನು ಬಂಧಿಸಿ, ದೇಗುಲಗಳ ಮರುನಿರ್ಮಾಣ ಆರಂಭಿಸಿ’ ಎಂದು ನ್ಯಾಯಮೂರ್ತಿ ಅಹ್ಮದ್‌ ನಿರ್ದೇಶನ ನೀಡಿದರು.

ವಿವರವಾದ ತೀರ್ಪನ್ನು ಎರಡು ವಾರಗಳಲ್ಲಿ ನೀಡುವುದಾಗಿ ನ್ಯಾಯಾಲಯ ತಿಳಿಸಿ ವಿಚಾರಣೆಯನ್ನು ಎರಡು ವಾರಗಳ ಕಾಲ ಮುಂದೂಡಿತು.

ಪಾಕಿಸ್ತಾನದಲ್ಲಿ ಹಿಂದೂಗಳು ಅತಿ ದೊಡ್ಡ ಅಲ್ಪಸಂಖ್ಯಾತ ಸಮುದಾಯವಾಗಿದ್ದಾರೆ. ಅಧಿಕೃತ ಅಂದಾಜಿನ ಪ್ರಕಾರ ದೇಶದಲ್ಲಿ 75 ಲಕ್ಷ ಹಿಂದೂಗಳು ನೆಲೆಸಿದ್ದಾರೆ. ಆದರೆ 90 ಲಕ್ಷಕ್ಕಿಂತ ಹೆಚ್ಚು ಹಿಂದೂಗಳು ಇದ್ದಾರೆ ಎಂಬುದು ಆ ಸಮುದಾಯದ ಲೆಕ್ಕಾಚಾರವಾಗಿದೆ.

ಹೆಚ್ಚಿನ ಸಂಖ್ಯೆಯ ಹಿಂದೂಗಳು ಸಿಂಧ್‌ ಪ್ರಾಂತ್ಯದಲ್ಲಿ ನೆಲೆಸಿದ್ದಾರೆ. ಅಲ್ಲಿನ ಸ್ಥಳೀಯರ ಜೊತೆ ಭಾಷೆ, ಸಂಸ್ಕೃತಿ, ಸಂಪ್ರದಾಯಗಳನ್ನು ಹಂಚಿಕೊಂಡಿದ್ದಾರೆ. ಆದರೆ ಉಗ್ರವಾದಿ ಸಂಘಟನೆಗಳಿಂದ ಪದೇ ಪದೇ ದೌರ್ಜನ್ಯ ನಡೆಯುತ್ತಿದೆ ಎಂಬ ದೂರುಗಳೂ ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT