ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾನೂನು ಸಮರದಲ್ಲಿ ಇಮ್ರಾನ್‌ಗೆ ಸೋಲು: ಅವಿಶ್ವಾಸ ನಿರ್ಣಯ ಮತಕ್ಕೆ ಹಾಕಲು ಸೂಚನೆ

Last Updated 8 ಏಪ್ರಿಲ್ 2022, 1:07 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌: ಪಾಕಿಸ್ತಾನ ಸಂಸತ್ತನ್ನು ವಿಸರ್ಜಿಸುವ ನಿರ್ಧಾರವು ಅಸಾಂವಿಧಾನಿಕ ಎಂದು ಆ ದೇಶದ ಸುಪ್ರೀಂ ಕೋರ್ಟ್ ಗುರುವಾರ ಸಂಜೆ ತೀರ್ಪು ನೀಡಿದೆ. ಇಮ್ರಾನ್‌ ಖಾನ್‌ ನೇತೃತ್ವದ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವನ್ನು ತಿರಸ್ಕರಿಸಿದ ಉಪ ಸ್ಪೀಕರ್‌ ಖಾಸಿಂ ಸೂರಿ ಅವರ ನಿರ್ಧಾರವನ್ನು ಕೋರ್ಟ್‌ ರದ್ದುಪಡಿಸಿದೆ.

ಅವಿಶ್ವಾಸ ನಿರ್ಣಯವನ್ನು ಮತ್ತೆ ಮತಕ್ಕೆ ಹಾಕಬೇಕು. ಅದಕ್ಕಾಗಿ ಶನಿವಾರ ಸಂಸತ್ತಿನ ಅಧಿವೇಶನ ನಡೆಸಬೇಕು. ಶನಿವಾರ ಬೆಳಿಗ್ಗೆ 10 ಗಂಟೆಗೆ ಅವಿಶ್ವಾಸ ನಿರ್ಣಯವನ್ನು ಮತಕ್ಕೆ ಹಾಕಬೇಕು ಎಂದು ಮುಖ್ಯ ನ್ಯಾಯಮೂರ್ತಿ ಉಮರ್‌ ಅತಾ ಬಂದ್ಯಾಲ್‌ ನೇತೃತ್ವದ ಐವರು ನ್ಯಾಯಮೂರ್ತಿಗಳ ಪೀಠವು ಸೂಚನೆ ನೀಡಿದೆ.

ಅವಿಶ್ವಾಸ ನಿರ್ಣಯವನ್ನು ಉಪಸ್ಪೀಕರ್‌ ತಿರಸ್ಕರಿಸಿದ ಬಳಿಕ, ಸಂಸತ್ತನ್ನು ವಿಸರ್ಜಿಸುವಂತೆ ಇಮ್ರಾನ್ ಅವರು ಅಧ್ಯಕ್ಷ ಆರಿಫ್‌ ಅಲ್ವಿ ಅವರಿಗೆ ಶಿಫಾರಸು ಮಾಡಿದ್ದರು. ಅಲ್ವಿ ಅವರು ಸಂಸತ್ತನ್ನು ವಿಸರ್ಜಿಸಿ ಆದೇಶಿಸಿದ್ದರು. ಜತೆಗೆ, ಮೂರು ತಿಂಗಳಲ್ಲಿ ಚುನಾವಣೆ ನಡೆಸುವಂತೆ ಚುನಾವಣಾ ಆಯೋಗಕ್ಕೆ ಸೂಚನೆ ನೀಡಿದ್ದರು.

ಉಪ ಸ್ಪೀಕರ್‌ ಅವರ ನಿರ್ಧಾರ ಮತ್ತು ಸಂಸತ್ತು ವಿಸರ್ಜನೆ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಸ್ವಯಂ ಪ್ರೇರಣೆಯಿಂದ ಕೈಗೆತ್ತಿಕೊಂಡಿತ್ತು. ಇಮ್ರಾನ್‌ ನೇತೃತ್ವದ ಮೈತ್ರಿಕೂಟದ ಕೆಲವು ಪಕ್ಷಗಳು ಮೈತ್ರಿಕೂಟ ತೊರೆದಿವೆ. ಹಾಗಾಗಿ, ಸರ್ಕಾರಕ್ಕೆ ಸಂಸತ್ತಿನಲ್ಲಿ ಬಹುಮತ ನಷ್ಟವಾಗಿದೆ. ಕಳೆದ ವಾರ ಮಂಡನೆಯಾಗಿದ್ದ ಅವಿಶ್ವಾಸ ನಿರ್ಣಯವನ್ನು ಮತಕ್ಕೆ ಹಾಕಿದ್ದರೆ ಇಮ್ರಾನ್‌ ಸೋಲುವುದು ನಿಚ್ಚಳ ಎನ್ನಲಾಗಿತ್ತು.

ಪ್ರತಿಕ್ರಿಯೆ ಇಲ್ಲ

ನವದೆಹಲಿ (ಪಿಟಿಐ): ಪಾಕಿಸ್ತಾನದ ಆಂತರಿಕ ವಿಚಾರಗಳ ಬಗ್ಗೆ ಭಾರತವು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಹೇಳಿದೆ.

‘ಪಾಕಿಸ್ತಾನದಲ್ಲಿ ಈಗಿನ ರಾಜಕೀಯ ಬೆಳವಣಿಗೆಗಳನ್ನು ಗಮನಿಸುತ್ತಿದ್ದೇವೆ. ಅದು ಅವರ ಆಂತರಿಕ ವಿಚಾರ. ಈ ಬಗ್ಗೆ ನಾವು ಪ್ರತಿಕ್ರಿಯೆ ನೀಡುವುದಿಲ್ಲ’ ಎಂದು ಸಚಿವಾಲಯವು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT