ಸೋಮವಾರ, ಮಾರ್ಚ್ 27, 2023
31 °C
ದಂಗೆ ಎದ್ದು ಪ್ರಧಾನಿಯನ್ನೇ ಕೆಳಗಿಳಿಸಿ ಆಡಳಿತ ಚುಕ್ಕಾಣಿ ಹಿಡಿದಿದ್ದ ಸೇನಾಧಿಕಾರಿ

ಕಾರ್ಗಿಲ್‌ ಸಂಘರ್ಷಕ್ಕೆ ಕಾರಣರಾಗಿದ್ದ ಪರ್ವೇಜ್‌ ಮುಷರ್ರಫ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಇಸ್ಲಾಮಾಬಾದ್: ಪರ್ವೇಜ್‌ ಮುಷರ್ರಫ್‌ ಅವರು ಪ್ರಜಾಸತ್ತಾತ್ಮಕವಾಗಿ ಚುನಾಯಿತ ಸರ್ಕಾರದ ವಿರುದ್ಧ ದಂಗೆ ಎದ್ದು, ಪ್ರಧಾನಿಯನ್ನು ಗದ್ದುಗೆಯಿಂದ ಕೆಳಗಿಳಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ, ನೆರೆಯ ಭಾರತದ ವಿರುದ್ಧದ ಕಾರ್ಗಿಲ್ ಸಂಘರ್ಷಕ್ಕೆ ಕಾರಣರಾಗಿದ್ದ ಅವರು, ಈ ಕಾಳಗದಲ್ಲಿ ಸೋಲನುಭವಿಸಿದ್ದರು.

ಒಂಬತ್ತು ವರ್ಷಗಳ ಕಾಲ ದೇಶದ ಆಡಳಿತ ಚುಕ್ಕಾಣಿ ಹಿಡಿದಿದ್ದ ಮುಷರ್ರಫ್‌, ಈ ಅವಧಿಯಲ್ಲಿ ಮೂರು ಬಾರಿ ನಡೆದ ಹತ್ಯೆ ಯತ್ನಗಳಿಂದ ಬಚಾವಾಗಿದ್ದರು. ಹಲವು ಆರೋಪಗಳನ್ನು ಎದುರಿಸಿದ್ದ ಅವರಿಗೆ ವಿಶೇಷ ನ್ಯಾಯಾಲಯ ಮರಣ ದಂಡನೆ ವಿಧಿಸಿತ್ತು. ನಂತರ, ಲಾಹೋರ್‌ ಹೈಕೋರ್ಟ್ ಮರಣ ದಂಡನೆಯನ್ನು ರದ್ದುಗೊಳಿಸಿ, ಅವರಿಗೆ ಜೀವದಾನ ನೀಡಿತ್ತು.

ಕಾರ್ಗಿಲ್‌ ಯುದ್ಧದಲ್ಲಿ ಪರಾಭವಗೊಂಡ ಆಗಿನ ಪ್ರಧಾನಿ ನವಾಜ್‌ ಷರೀಫ್‌ ಅವರು, ಅಂದಿನ ಭಾರತದ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರೊಂದಿಗೆ ಲಾಹೋರ್‌ನಲ್ಲಿ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ್ದರು. ಇದಾದ ನಂತರ, ಷರೀಫ್‌ ಅವರ ಸರ್ಕಾರವನ್ನು ಕಿತ್ತೊಗೆದಿದ್ದ ಮುಷರ‍್ರಫ್‌, ದೇಶದ ಆಡಳಿತವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.

ನ್ಯೂಯಾರ್ಕ್‌ನ ವಿಶ್ವ ವ್ಯಾಪಾರ ಕೇಂದ್ರದ ಮೇಲೆ ಉಗ್ರರ ದಾಳಿ ನಡೆದ ಸಂದರ್ಭದಲ್ಲಿ ಮುಷರ‍್ರಫ್‌ ಅವರು ಪಾಕಿಸ್ತಾನದ ಅಧ್ಯಕ್ಷರಾಗಿದ್ದರು. ಆಗ, ಅವರು ಅಮೆರಿಕದೊಂದಿಗೆ ಸ್ನೇಹ ಹಸ್ತ ಚಾಚಿದರು. ದೇಶದಲ್ಲಿ ಇಸ್ಲಾಮಿಕ್ ಭಯೋತ್ಪಾದಕ ಸಂಘಟನೆಗಳ ಹೆಡೆಮುರಿ ಕಟ್ಟಿದ್ದ ಅವರು, ಹಲವಾರು ಸಂಘಟನೆಗಳನ್ನು ನಿಷೇಧಿಸಿದ್ದರು. ಇದು ಉಗ್ರರನ್ನು ಕಂಗೆಡಿಸಿತ್ತು. ನಂತರದ ವರ್ಷಗಳಲ್ಲಿ ಹಲವು ಬಾರಿ ಅವರ ಹತ್ಯೆಗೆ ಯತ್ನಗಳು ನಡೆದಿದ್ದವು.

2006ರಲ್ಲಿ ಮುಷರ‍್ರಫ್‌ ಅವರ ಆದೇಶದಂತೆ ಪಾಕಿಸ್ತಾನ ಸೇನೆಯು ಬಲೂಚಿಸ್ತಾನದ ಗವರ್ನರ್ ಹಾಗೂ ಬುಗ್ತಿ ಬುಡಕಟ್ಟು ನಾಯಕ ನವಾಬ್‌ ಅಕ್ಬರ್‌ ಖಾನ್ ಬುಗ್ತಿ ಹಾಗೂ ಇತರ 12 ಜನರನ್ನು ಹತ್ಯೆ ಮಾಡಿತು. ಇದು, ಬಲೂಚಿಸ್ತಾನದಲ್ಲಿ ವ್ಯಾಪಕ ಗಲಭೆಗೆ ಕಾರಣವಾಗಿತ್ತಲ್ಲದೇ, ಪ್ರತ್ಯೇಕ ಬಲೂಚ್‌ಗಾಗಿ ಆಗ್ರಹಿಸಿ ಚಳವಳಿ ಭುಗಿಲೇಳುವಂತೆ ಮಾಡಿತ್ತು.

2007ರಲ್ಲಿ ಬೆನಜೀರ್‌ ಭುಟ್ಟೊ ಹತ್ಯೆಯಾಗಿ, ಮತ್ತೆ ವ್ಯಾಪಕ ಹಿಂಸಾಚಾರ ನಡೆಯಿತು. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಅವರು ದೇಶ ತೊರೆದು, ತಲೆಮರೆಸಿಕೊಂಡಿದ್ದರು.

2019ರಲ್ಲಿ ಅವರ ಅನುಪಸ್ಥಿತಿಯಲ್ಲಿ ತೀರ್ಪು ಪ್ರಕಟಿಸಿದ್ದ ವಿಶೇಷ ನ್ಯಾಯಾಲಯ, ದೇಶದ್ರೋಹ ಹಾಗೂ 2007ರ ನವೆಂಬರ್‌ 3ರಂದು ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ ಆರೋಪದಡಿ ಅವರಿಗೆ ಮರಣ ದಂಡನೆ ವಿಧಿಸಿತ್ತು. ಅದೇ ಮೊದಲ ಬಾರಿಗೆ, ಮಿಲಿಟರಿಯ ಮಾಜಿ ಉನ್ನತಾಧಿಕಾರಿಯೊಬ್ಬರಿಗೆ ದೇಶದ್ರೋಹ ಆರೋಪದಡಿ ಕಠಿಣ ಶಿಕ್ಷೆ ವಿಧಿಸಲಾಗಿತ್ತು. ಈ ತೀರ್ಪು ಮಿಲಿಟರಿಯನ್ನು ಕೆರಳುವಂತೆ ಮಾಡಿತ್ತು. ನಂತರ, ಲಾಹೋರ್‌ ಹೈಕೋರ್ಟ್‌ ಈ ತೀರ್ಪನ್ನು ರದ್ದುಪಡಿಸಿತ್ತು.

ಭಾರತ ವಿರುದ್ಧದ ಯುದ್ಧದಲ್ಲಿ ಭಾಗಿ: 1965ರಲ್ಲಿ ನಡೆದ ಭಾರತ–ಪಾಕಿಸ್ತಾನ ಯುದ್ಧದಲ್ಲಿ ಮುಷರ‍್ರಫ್‌ ಭಾಗಿಯಾಗಿದ್ದರು. ಅವರು ಆಗಷ್ಟೇ ಸೇನೆಗೆ ಸೇರಿದ್ದ ಯುವ ಅಧಿಕಾರಿ. 1971ರಲ್ಲಿ ಭಾರತದೊಂದಿಗೆ ನಡೆದ ಯುದ್ಧದ ಸಂದರ್ಭದಲ್ಲಿ ಅವರು ಕಂಪನಿ ಕಮಾಂಡರ್ ಆಗಿದ್ದರು. 1998ರ ಅಕ್ಟೋಬರ್‌ನಲ್ಲಿ ಅವರು ಸೇನಾ ಸಿಬ್ಬಂದಿ ಮುಖಸ್ಥರಾಗಿ ನೇಮಕಗೊಂಡಿದ್ದರು.

ಟರ್ಕಿಯಲ್ಲಿ ಬಾಲ್ಯ: ಮೂವರು ಮಕ್ಕಳಲ್ಲಿ ಮುಷರ‍್ರಫ್‌ ಎರಡನೆಯವರು. ಅವರ ತಂದೆ ಸೈಯದ್‌ ಮುಷರ‍್ರಫು–ಉದ್‌–ದಿನ್‌ ಅವರು ಉದ್ಯೋಗ ನಿಮಿತ್ತ ಅಂಕಾರದಲ್ಲಿದ್ದರು. ಹೀಗಾಗಿ ಮುಷರ‍್ರಫ್ ಅವರು ತಮ್ಮ ಬಾಲ್ಯದ ಬಹುತೇಕ ದಿನಗಳನ್ನು ಟರ್ಕಿಯೆಯಲ್ಲಿ ಕಳೆದಿದ್ದರು.

ಅವರು 1968ರಲ್ಲಿ ಮದುವೆಯಾಗಿದ್ದರು. ಅವರಿಗೆ ಪುತ್ರ ಹಾಗೂ ಪುತ್ರಿ ಇದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು