ಗುರುವಾರ , ಮೇ 19, 2022
21 °C

ಫಿಲಿಪ್ಪೀನ್ಸ್‌ ಐಸ್‌ ತಯಾರಿಕಾ ಘಟಕದಲ್ಲಿ ಅಮೋನಿಯಾ ಸೋರಿಕೆ; ಇಬ್ಬರು ಸಾವು

ಎಪಿ Updated:

ಅಕ್ಷರ ಗಾತ್ರ : | |

Prajavani

ಮನಿಲಾ: ಫಿಲಿಪ್ಪೀನ್ಸ್‌ನ ರಾಜಧಾನಿ ಮನಿಲಾದ ಐಸ್‌ ತಯಾರಿಕಾ ಘಟಕವೊಂದರಲ್ಲಿ ಅಮೋನಿಯಾ ಸೋರಿಕೆಯಾಗಿದ್ದು, ಇದರಿಂದಾಗಿ ಇಬ್ಬರು ಮೃತಪಟ್ಟಿದ್ದಾರೆ. 90ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ಗುರುವಾರ ತಿಳಿಸಿದರು.

‘ಟಿ‍ಪಿ ಮಾರ್ಸೆಲೊ ಐಸ್‌ ತಯಾರಿಕಾ ಘಟಕದ ಉದ್ಯೋಗಿಯೊಬ್ಬರು ಅಮೋನಿಯಾದಿಂದಾಗಿ ಮೃತಪಟ್ಟಿದ್ದಾರೆ. ಇದೇ ವೇಳೆ ಕಟ್ಟಡದಲ್ಲಿ ಘಟಕದ ಎಲೆಕ್ಟ್ರೀಷಿಯನ್ ಅವರ ಶವ ಕೂಡ ಪತ್ತೆಯಾಗಿದೆ’ ಎಂದು ನವೋಟಾಸ್‌ ನಗರದ ಮೇಯರ್‌ ಟೊಬಿ ಟಿಯಾಂಗ್ಕೊ ಅವರು ಮಾಹಿತಿ ನೀಡಿದರು.

‘ಅಮೋನಿಯಾ ಸೋರಿಕೆಯಿಂದಾಗಿ ಅಸ್ವಸ್ಥರಾದ 90ಕ್ಕೂ ಹೆಚ್ಚು ಉದ್ಯೋಗಿಗಳು ಮತ್ತು ಸ್ಥಳೀಯರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಇದರಲ್ಲಿ 20 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರು ಉಸಿರಾಟದ ತೊಂದರೆ, ಕಣ್ಣು ಮತ್ತು ಚರ್ಮದಲ್ಲಿ ತುರಿಕೆ ಸೇರಿದಂತೆ ಹಲವು ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ’ ಎಂದು ಅವರು ಹೇಳಿದರು.

‘ಪೈಪ್‌ನಿಂದ ಅಮೋನಿಯಾ ಸೋರಿಕೆಯಾಗಿದೆಯೇ ಅಥವಾ ಅರ್ಧ ತುಂಬಿದ ಟ್ಯಾಂಕ್‌ ಸ್ಫೋಟಗೊಂಡ ಕಾರಣ ಈ ದುರ್ಘಟನೆ ಸಂಭವಿಸಿದೆಯೇ ಎಂಬುದನ್ನು ತನಿಖಾಧಿಕಾರಿಗಳು ಪತ್ತೆ ಹಚ್ಚುತ್ತಿದ್ದಾರೆ. ಸಂತ್ರಸ್ತರ ವೈದ್ಯಕೀಯ ಚಿಕಿತ್ಸೆಯ ವೆಚ್ಚವನ್ನು ಕಂಪೆನಿಯೇ ಭರಿಸಲಿದೆ’ ಎಂದು ಅವರು ಹೇಳಿದರು.

‘ಸದ್ಯಕ್ಕೆ ಈ ಐಸ್‌ ತಯಾರಿಕಾ ಘಟಕವನ್ನು ಮುಚ್ಚಲಾಗಿದೆ. ಹೆಚ್ಚಿನ ಸುರಕ್ಷತಾ ಕ್ರಮಗಳನ್ನು ಕೈಗೊಂಡ ಬಳಿಕ ಘಟಕವನ್ನು ತೆರೆಯಲಾಗುವುದು’ ಎಂದು ಅಧಿಕಾರಿಗಳು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು