ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು: ಮೀನುಗಾರರ ಬದುಕು ದುಸ್ತರ

ನೆಗೆಂಬೊ: ಶ್ರೀಲಂಕಾದಲ್ಲಿ ಉಂಟಾಗಿರುವ ಆರ್ಥಿಕ ಬಿಕ್ಕಟ್ಟು ಮತ್ತು ಇಂಧನ ಕೊರತೆ ಮೀನುಗಾರಿಕೆಗೆ ಅಡ್ಡಿಯಾಗಿದ್ದು, ಮೀನುಗಾರರ ಬದುಕು ದುಸ್ತರವಾಗಿದೆ.
ಮೀನುಗಾರಿಕೆ ಬೋಟ್‌ಗೆ ಬಳಕೆ ಮಾಡುವ ಅನಿಲ ಕೊರತೆ, ತೈಲ ಕೊರತೆ ಮತ್ತು ಬೆಲೆ ಹೆಚ್ಚಳದಿಂದ ಮೀನುಗಾರಿಕೆ ನಡೆಸುವುದೇ ಸವಾಲಾಗಿದೆ. ಕರಾವಳಿ ಪ್ರದೇಶದಲ್ಲಿ ಇದೇ ವೃತ್ತಿಯನ್ನು ನಂಬಿ ಬದುಕುವ ಸಾವಿರಾರು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಒಂದು ಹೊತ್ತಿನ ಊಟಕ್ಕೆ ಪರದಾಡುವ ಪರಿಸ್ಥಿತಿ ಎದುರಾಗಿದೆ.
ಮೀನುಗಾರಿಕೆ ಕುಂಠಿತಗೊಂಡಿರುವುದರಿಂದ ದೇಶದಲ್ಲಿ ಆಹಾರ ಸಮಸ್ಯೆಯೂ ಸೃಷ್ಟಿಯಾಗಿದ್ದು, ಹೋಟೆಲ್‌ಗಳು ಮತ್ತು ಸ್ಟಾರ್ ಹೋಟೆಲ್‌ಗಳ ಮೇಲೂ ಪರಿಣಾಮ ಬೀರಿದೆ.
’ಬೆಳಿಗ್ಗೆ 5ಕ್ಕೆ ಸರತಿ ಸಾಲಿನಲ್ಲಿ ನಿಂತರೆ ಮಧ್ಯಾಹ್ನ 3ರ ಹೊತ್ತಿಗೆ ಇಂಧನ ಸಿಗುತ್ತದೆ. ಕೆಲವೊಮ್ಮೆ ನಮ್ಮ ಸರದಿ ಬರುವ ವೇಳೆಗೆ ಇಂಧನವೇ ಮುಗಿದು ಹೋಗುತ್ತದೆ. ಸಂಪಾದನೆ ಇಲ್ಲದೆ ಬರಿಗೈಯಲ್ಲಿ ಮನೆಗೆ ಹಿಂದಿರುಗಿದರೆ, ನಮಗೇಕೆ ಊಟ ಕೊಡುತ್ತಿಲ್ಲ ಎಂದು ಮಕ್ಕಳು ಕೇಳುತ್ತಾರೆ. ನಮ್ಮ ಸಮಸ್ಯೆಗಳು ಅವರಿಗೆ ತಿಳಿಯುವುದಿಲ್ಲ’ ಎಂದು ಮೀನುಗಾರ ಅರುಳಾನಂದನ್ ವ್ಯಥೆ ಹೇಳಿಕೊಂಡರು.
‘ಇತ್ತೀಚಿನ ದಿನಗಳಲ್ಲಿ ಮೀನು ಮಾರಾಟವೂ ಕಡಿಮೆಯಾಗಿದ್ದು, ಇದಕ್ಕಾಗಿ ಮಾಡುವ ಖರ್ಚು ಅಧಿಕವಾಗಿದೆ. ನಷ್ಟ ಅನುಭವಿಸುತ್ತಿದ್ದೇವೆ. ಇಂಥ ಸಂಕಷ್ಟಗಳ ನಡುವೆ ಇನ್ನು ಈ ದೇಶದಲ್ಲಿ ಬದುಕಲು ಬಯಸುವುದಿಲ್ಲ ಎಂದು ಸೀಗಡಿ ವ್ಯಾಪಾರಿ ಮೊಹಮ್ಮದ್ ಅನ್ಸಾರಿ ತಿಳಿಸಿದರು.
1948ರ ಸ್ವಾತಂತ್ರ್ಯ ಬಳಿಕ ಶ್ರೀಲಂಕಾ ಸರ್ಕಾರ ಈಗ ಅತ್ಯಂತ ಭೀಕರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದೆ. ಹಣದುಬ್ಬರದಿಂದ ಡೀಸೆಲ್ ಬೆಲೆ ದ್ವಿಗುಣವಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.