ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜೀನಾಮೆ ಆಲೋಚನೆ ಇಲ್ಲ: ಪೋಪ್‌ ಫ್ರಾನ್ಸಿಸ್‌

Last Updated 1 ಸೆಪ್ಟೆಂಬರ್ 2021, 11:44 IST
ಅಕ್ಷರ ಗಾತ್ರ

ವ್ಯಾಟಿಕನ್ ಸಿಟಿ: ‘ರಾಜೀನಾಮೆ ನೀಡುವ ಬಗ್ಗೆ ಯೋಚಿಸಿಲ್ಲ. ಜುಲೈನಲ್ಲಿ ಕರುಳಿನ ಶಸ್ತ್ರಚಿಕಿತ್ಸೆಯ ನಂತರ ಸಂಪೂರ್ಣ ಚೇತರಿಸಿಕೊಂಡು, ಸಹಜ ಜೀವನ ನಡೆಸುತ್ತಿದ್ದೇನೆ’ ಎಂದು ಪೋಪ್ ಫ್ರಾನ್ಸಿಸ್ ಬುಧವಾರ ರೇಡಿಯೊ ಸಂದರ್ಶನದಲ್ಲಿ ಹೇಳಿದರು.

84 ವರ್ಷದ ಫ್ರಾನ್ಸಿಸ್ ಅವರು ಸ್ಪ್ಯಾನಿಷ್ ರೇಡಿಯೊ ನೆಟ್‌ವರ್ಕ್ ಕೋಪ್‌ಗೆ(ಸಿಒಪಿಇ) ಸಂದರ್ಶನ ನೀಡಿದ್ದು, ಇಟಲಿಯ ಪತ್ರಿಕೆಯೊಂದರಲ್ಲಿ ಪೋಪ್‌ ರಾಜೀನಾಮೆ ಬಗ್ಗೆ ಪ್ರಕಟವಾಗಿರುವ ವರದಿಯನ್ನು ಅಲ್ಲಗಳೆದರು. ‘ಅವರು ಕಳೆದ ವಾರ ನಾನು ರಾಜೀನಾಮೆ ನೀಡಲಿದ್ದೇನೆ ಎನ್ನುವ ಸುದ್ದಿಯನ್ನು ಎಲ್ಲಿಂದ ಪಡೆದರೋ ನನಗೆ ಗೊತ್ತಿಲ್ಲ. ರಾಜೀನಾಮೆ ನೀಡುವ ವಿಚಾರ ನನ್ನ ಮನಸಿನಲ್ಲಿ ಬಂದೇ ಇಲ್ಲ’ ಎಂದರು.

‘ನವೆಂಬರ್‌ನಲ್ಲಿ ಗ್ಲಾಸ್ಗೊದಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಸಮಾವೇಶದಲ್ಲಿ (ಸಿಒಪಿ 26) ನಾನು ಭಾಗವಹಿಸುವುದು ಬಹುತೇಕ ಖಚಿತ. ಸೆಪ್ಟೆಂಬರ್ 12ರಿಂದ 15ರವರೆಗೆ ಹಂಗೇರಿ ಮತ್ತು ಸ್ಲೊವಾಕಿಯಾ ಪ್ರವಾಸ ಕೈಗೊಳ್ಳಲಿದ್ದು, ಸೈಪ್ರಸ್, ಗ್ರೀಸ್ ಮತ್ತು ಮಾಲ್ಟಾಕ್ಕೂ ಭೇಟಿ ನೀಡಲಿದ್ದೇನೆ’ ಎಂದು ಅವರು ಹೇಳಿದರು.

ಸಂದರ್ಶನದಲ್ಲಿ ಪೋಪ್ ‘ಆತ ನನ್ನ ಜೀವ ಉಳಿಸಿದ. ಆಂಟಿಬಯೋಟಿಕ್‌ ಮತ್ತು ಇತರ ಔಷಧಿಗಳೊಂದಿಗೆ ಚಿಕಿತ್ಸೆ ಮುಂದುವರಿಸುವ ಬದಲು ತನ್ನ ಕರುಳಿನ ಭಾಗ ತೆಗೆಯುವ ಶಸ್ತ್ರಚಿಕಿತ್ಸೆಗೆ ಒಳಗಾಗುವಂತೆ ಮನವರಿಕೆ ಮಾಡಿಕೊಟ್ಟ. ಕೆಲವು ವೈದ್ಯರು ಕೂಡ ಇದಕ್ಕೆ ಒಲವು ತೋರಿಸಿದರು. ಆತನಿಗೆ ಧನ್ಯವಾದಗಳು’ ಎಂದು ವ್ಯಾಟಿಕನ್‌ನ ಪುರುಷ ನರ್ಸ್‌ವೊಬ್ಬರಿಗೆ ಕೃತಜ್ಞತೆ ಸಲ್ಲಿಸಿದರು.

‘ಈಗ ನಾನು ಎಲ್ಲವನ್ನೂ ತಿನ್ನಬಹುದು, ಇದು ಮೊದಲು ಸಾಧ್ಯವಾಗುತ್ತಿರಲಿಲ್ಲ. ನಾನು ಸಂಪೂರ್ಣ ಚೇತರಿಸಿಕೊಂಡಿದ್ದು, ಸಹಜ ಜೀವನ ನಡೆಸುತ್ತಿದ್ದೇನೆ’ ಎಂದು ಪೋಪ್‌ ಹೇಳಿದರು.

2013ರಲ್ಲಿ ಧರ್ಮಗುರುಗಳಾಗಿ ಆಯ್ಕೆಯಾದ ಫ್ರಾನ್ಸಿಸ್ ಪೋಪ್‌, ಜುಲೈ 4ರಂದು ಶಸ್ತ್ರಚಿಕಿತ್ಸೆಗೆ ಒಳಗಾಗಿ, 11 ದಿನಗಳು ಆಸ್ಪತ್ರೆಯಲ್ಲಿದ್ದರು. ಕರುಳು ಕಿರಿದಾಗುವಿಕೆಯ ತೀವ್ರ ಸಮಸ್ಯೆಯ ರೋಗಲಕ್ಷಣದಿಂದ (ಡೈವರ್ಟಿಕ್ಯುಲರ್ ಸ್ಟೆನೋಸಿಸ್) ಅವರು ಬಳಲುತ್ತಿದ್ದರು. ಅವರ ಕರುಳನ್ನು 33 ಸೆಂಟಿ ಮೀಟರ್‌ನಷ್ಟು (13 ಇಂಚು) ಶಸ್ತ್ರ ಚಿಕಿತ್ಸೆ ಮೂಲಕ ತೆಗೆದುಹಾಕಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT