ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವಿನ ಔಪಚಾರಿಕ ಮಾತುಕತೆಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರೆಸ್ಸೆಸ್) ಸಿದ್ಧಾಂತಗಳು ನಿರಂತರವಾಗಿ ತಡೆಯೊಡ್ಡುತ್ತಾ ಬಂದಿವೆ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರು ಶುಕ್ರವಾರ ಆರೋಪಿಸಿದ್ದಾರೆ.
"ನಾವು (ಪಾಕಿಸ್ತಾನ) ನೆರೆಹೊರೆಯವರಾಗಿ ಸಹಬಾಳ್ವೆಯಿಂದ ಬದುಕಲು ಬಹಳ ಸಮಯದಿಂದ ಕಾಯುತ್ತಿದ್ದೇವೆ ಎಂದು ಭಾರತಕ್ಕೆ ನಾವು ಹೇಳಬಹುದು... ಆದರೆ ಏನು ಮಾಡುವುದು? ಆರ್‌ಎಸ್‌ಎಸ್‌ನ ಸಿದ್ಧಾಂತವು ನಮ್ಮ ನಡುವೆ ಅಡ್ಡ ಬರುತ್ತದೆ” ಎಂದು ಇಮ್ರಾನ್ ಖಾನ್ ತಾಷ್ಕೆಂಟ್‌ನಲ್ಲಿ ಹೇಳಿದ್ದಾರೆ. ಭಾರತ ಮತ್ತು ಪಾಕಿಸ್ತಾನದ ನಡುವೆ ಮಾತುಕತೆಯ ಸಾಧ್ಯತೆಗಳಿವೆ ಎಂಬ ಬಗ್ಗೆ ಪತ್ರಕರ್ತರೊಬ್ಬರ ಪ್ರಶ್ನೆಗೆ ಅವರು ಈ ರೀತಿ ಉತ್ತರ ನೀಡಿದ್ದಾರೆ.
ಇದನ್ನೂ ಓದಿ:ಆಫ್ಗನ್ ಕಾಳಗ: ಭಾರತೀಯ ಫೋಟೊ ಜರ್ನಲಿಸ್ಟ್ ಸಾವು
ಇಮ್ರಾನ್ ಖಾನ್ ಈ ಹಿಂದೆಯೂ ಆರೆಸ್ಸೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ಕಳೆದ ವರ್ಷ ವಿಶ್ವಸಂಸ್ಥೆಯ ಮಹಾಸಭೆಯಲ್ಲಿ ಮಾತನಾಡಿದ್ದ ಅವರು, ‘ನಾಜಿಗಳ ದ್ವೇಷವನ್ನು ಯಹೂದಿಗಳತ್ತ ನಿರ್ದೇಶಿಸಲಾಗಿದ್ದರೆ, ಆರೆಸ್ಸೆಸ್ ಮುಸ್ಲಿಮರ ಕಡೆಗೆ ಮತ್ತು ಸ್ವಲ್ಪ ಮಟ್ಟಿಗೆ ಕ್ರೈಸ್ತರ ಕಡೆಗೆ ತಿರುಗಿಸಿದೆ. ಭಾರತವು ಹಿಂದೂಗಳಿಗಾಗಿಯೇ ಇರುವ ಪ್ರತ್ಯೇಕ ರಾಷ್ಟ್ರ ಮತ್ತು ಇತರ ಧರ್ಮೀಯರು ಸಮಾನರಲ್ಲ ಎಂದು ಅವರು ನಂಬುತ್ತಾರೆ’ ಎಂದು ಹೇಳಿದ್ದರು.
2013ರಲ್ಲಿ ಅಂತ್ಯಗೊಂಡಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಮಾತುಕತೆಗಳು ಮತ್ತೆ ಆರಂಭವಾಗುವ ನಿರೀಕ್ಷೆಯೊಂದಿಗೆ ಇದೇ ವರ್ಷ ಫೆಬ್ರವರಿಯಂದು ನಿಯಂತ್ರಣಾ ರೇಖೆಯ ಬಳಿ ಕದನ ವಿರಾಮ ಘೋಷಿಸಲಾಗಿದ್ದು, ಗುಂಡಿನ ದಾಳಿಗೆ ಎರಡೂ ಅಂತ್ಯ ಹಾಡಲಾಗಿದೆ. 2003ರ ಕದನ ವಿರಾಮ ಒಪ್ಪಂದಕ್ಕೆ ಎರಡೂ ರಾಷ್ಟ್ರಗಳು ಬದ್ಧವಾಗಿರುವುದಾಗಿ ಒಪ್ಪಿಕೊಂಡಿವೆ.
ಕಳೆದ ಕೆಲವು ತಿಂಗಳುಗಳಿಂದ ಯುನೈಟೆಡ್ ಅರಬ್ ಎಮಿರೆಟ್ಸ್‌ನಲ್ಲಿ ಉಭಯ ರಾಷ್ಟ್ರಗಳ ಉನ್ನತಮಟ್ಟದ ಅಧಿಕಾರಿಗಳು ಹಲವಾರು ಸುತ್ತಿನ ಅನೌಪಚಾರಿಕ ಮಾತುಕತೆಗಳನ್ನು ನಡೆಸಿದ್ದಾರೆ. ಸ್ಥಗಿತಗೊಂಡಿರುವ ಮಾತುಕತೆಯನ್ನು ಪುನರಾರಂಭಿಸುವುದು ಇದರ ಹಿಂದಿನ ಉದ್ದೇಶವಾಗಿದೆ.
ಆದರೆ ಈ ಮಾತುಕತೆಗಳನ್ನು ಭಾರತ ಸರ್ಕಾರ ಅಧಿಕೃತವಾಗಿ ಘೋಷಿಸಿಯೂ ಇಲ್ಲ, ನಿರಾಕರಣೆಯನ್ನೂ ಮಾಡಿಲ್ಲ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.