ಶುಕ್ರವಾರ, ಅಕ್ಟೋಬರ್ 30, 2020
23 °C
ಜಾರ್ಜ್‌ ಫ್ಲಾಯ್ಡ್‌ ಹತ್ಯೆ ಖಂಡಿಸಿ ನಡೆದ ಪ್ರತಿಭಟನೆಯ ಪ್ರಸ್ತಾಪಿಸಿದ ಅಮೆರಿಕ ಅಧ್ಯಕ್ಷ

ಪ್ರತಿಭಟನಾಕಾರರು ಗಾಂಧಿ ಪ್ರತಿಮೆಯನ್ನೂ ಕೆಡವಿದರು: ಡೊನಾಲ್ಡ್‌ ಟ್ರಂಪ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ‘ಕಪ್ಪು ವರ್ಣೀಯ ನಾಗರಿಕ ಜಾರ್ಜ್‌ ಫ್ಲಾಯ್ಡ್‌ ಹತ್ಯೆ ಖಂಡಿಸಿ  ಪ್ರತಿಭಟನೆ ನಡೆಸಿದವರ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಕಿಡಿಕಾರಿದ್ದಾರೆ.

ಪ್ರತಿಭಟನಾಕಾರರು ವಾಷಿಂಗ್ಟನ್‌ ಡಿ.ಸಿ.ಯಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆಗೂ ಹಾನಿ ಮಾಡಿದರು. ಈ ಕೃತ್ಯದಲ್ಲಿ ಭಾಗಿಯಾದವರೆಲ್ಲಾ ಕೊಲೆಗಡುಕರು’ ಎಂದು ಅಮೆರಿಕದ ಹಾಲಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಕಿಡಿಕಾರಿದ್ದಾರೆ.

ಮತ್ತೊಂದು ಅವಧಿಗೆ ಅಧ್ಯಕ್ಷ ಗಾದಿಗೆ ಏರಲು ಬಯಸಿರುವ ಟ್ರಂಪ್‌, ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. 

ಮಿನ್ನೆಸೊಟಾ ಪ್ರಾಂತ್ಯದಲ್ಲಿ ಶುಕ್ರವಾರ ನಿಗದಿಯಾಗಿದ್ದ ಚುನಾವಣಾ ಪ್ರಚಾರ ರ‍್ಯಾಲಿಯಲ್ಲಿ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಅವರು ‘ಉದ್ರಿಕ್ತರ ಗುಂಪು ಅಬ್ರಾಹಂ ಲಿಂಕನ್ ಅವರ ಪ್ರತಿಮೆಯನ್ನು ಕೆಡವಲು ಮುಂದಾಯಿತು. ಆಗ ನಾನು ಸ್ವಲ್ಪ ತಾಳ್ಮೆಯಿಂದಿರಿ ಎಂದು ಮನವಿ ಮಾಡಿದೆ. ಅದಕ್ಕೆ ಕಿವಿಗೊಡದೇ ಥಾಮಸ್‌ ಜೆಫರ್‌ಸನ್‌ ಸೇರಿದಂತ ಎಲ್ಲರ ಪ್ರತಿಮೆಗಳನ್ನೂ ಉರುಳಿಸಿತು’ ಎಂದರು. 2016ರಲ್ಲಿ ನಡೆದಿದ್ದ ಚುನಾವಣೆಯ ವೇಳೆ ಈ ಪ್ರಾಂತ್ಯದಲ್ಲಿ ಟ್ರಂಪ್‌ 44,000ಕ್ಕೂ ಅಧಿಕ ಮತಗಳಿಂದ ಸೋತಿದ್ದರು.

ಇದೇ ವರ್ಷದ ಮೇ 25ರಂದು ಮಿನ್ನೆಪೊಲಿಸ್‌ನಲ್ಲಿ ಶ್ವೇತವರ್ಣದ ಪೊಲೀಸ್‌ ಅಧಿಕಾರಿ ಡೆರೆಕ್‌ ಚೌವಿನ್‌ ಎಂಬುವರು ಜಾರ್ಜ್‌ ಫ್ಲಾಯ್ಡ್‌ಗೆ ಕೈಕೋಳ ತೊಡಿಸಿ ಕುತ್ತಿಗೆಯ ಮೇಲೆ ಎಂಟು ನಿಮಿಷಗಳ ಕಾಲ ಮಂಡಿಯೂರಿ ನೆಲಕ್ಕೆ ಅದುಮಿ ಹಿಡಿದಿದ್ದರು. ಹೀಗಾಗಿ ಫ್ಲಾಯ್ಡ್‌ ಉಸಿರುಗಟ್ಟಿ ಸಾವನ್ನಪ್ಪಿದ್ದರು. ಇದು ಅಮೆರಿಕದಾದ್ಯಂತ ಭಾರಿ ಜನಾಕ್ರೋಶಕ್ಕೆ ಕಾರಣವಾಗಿತ್ತು. ಫ್ಲಾಯ್ಡ್‌ ಸಾವನ್ನು ಖಂಡಿಸಿ ವಿಶ್ವದಾದ್ಯಂತ ‘ಬ್ಲಾಕ್‌ ಲೈವ್ಸ್‌ ಮ್ಯಾಟರ್‌’ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.

‘ಗಾಂಧೀಜಿ ಅವರು ಶಾಂತಿದೂತರಾಗಿದ್ದರು. ಜೀವನದುದ್ದಕ್ಕೂ ಹಿಂಸಾಚಾರವನ್ನು ವಿರೋಧಿಸಲೇ ಬಂದಿದ್ದರು. ಅಂತಹ ಮಹಾತ್ಮನ ಪ್ರತಿಮೆಯನ್ನೂ ಕಿಡಿಗೇಡಿಗಳು ಧ್ವಂಸಗೊಳಿಸಿದರು. ಪ್ರತಿಭಟನಾಕಾರರಿಗೆ ತಾವು ಏನು ಮಾಡುತ್ತಿದ್ದೇವೆ ಎಂಬುದರ ಅರಿವೇ ಇರಲಿಲ್ಲ’ ಎಂದು ಟ್ರಂಪ್‌ ಹೇಳಿದ್ದಾರೆ.

ಕೆಲ ಸಮಯದ ನಂತರ ಭಾರತೀಯ ಎಂಬೆಸಿಯು ನ್ಯಾಷನಲ್‌ ಪಾರ್ಕ್‌ ಪೊಲೀಸ್‌ ಮತ್ತು ಸ್ಥಳೀಯ ಆಡಳಿತದ ನೆರವಿನಿಂದ ಹಾನಿಗೀಡಾಗಿದ್ದ ಗಾಂಧಿ ಪ್ರತಿಮೆಯನ್ನು ಪುನರ್‌ಪ್ರತಿಷ್ಠಾಪಿಸಿತ್ತು.

‘ಇಂತಹ ಕಿಡಿಗೇಡಿಗಳಿಗೆ ತಕ್ಕ ಶಿಕ್ಷೆಯಾಗಬೇಕು. ಅದಕ್ಕಾಗಿ ನಾನು ಹೊಸ ಕಾರ್ಯಾದೇಶಕ್ಕೆ ಸಹಿ ಮಾಡಿದ್ದೇನೆ. ಇದರ ಪ್ರಕಾರ ದುಷ್ಕರ್ಮಿಗಳಿಗೆ 10 ವರ್ಷ ಜೈಲು ಶಿಕ್ಷೆಯಾಗಲಿದೆ’ ಎಂದು ತಿಳಿಸಿದರು.

‘ನೀವು ಇತಿಹಾಸದ ಪುಟಗಳನ್ನು ತೆಗೆದು ನೋಡಿ. ಮಧ್ಯ ಪ್ರಾಚ್ಯ ಹಾಗೂ ಇತರ ರಾಷ್ಟ್ರಗಳತ್ತಲೂ ಕಣ್ಣಾಹಿಸಿ. ಐಸಿಸ್‌ ಸಂಘಟನೆ ಏನು ಮಾಡಿತು. ಅವರೆಲ್ಲಾ ವಿಧ್ವಂಸಕ ಕೃತ್ಯಗಳಲ್ಲಿ ಭಾಗಿಯಾಗಿದ್ದರು. ವಸ್ತು ಸಂಗ್ರಹಾಲಯ ಹಾಗೂ ಇತರ ಸ್ಥಳಗಳಿಗೆ ಹೋಗಿ ಕೈಗೆ ಸಿಕ್ಕಿದ್ದನ್ನೆಲ್ಲಾ ನಾಶ ಪಡಿಸಿದರು. ಅವರು ನಿಮ್ಮ ಗತಕಾಲದ ನೆನಪುಗಳನ್ನು ಕಿತ್ತುಕೊಳ್ಳಲು ಬಯಸಿದರು. ಅಮೆರಿಕನ್ನರ ಇತಿಹಾಸವನ್ನು ನಾಶ ಪಡಿಸಲು ಅವರಿಂದ ಸಾಧ್ಯವಿಲ್ಲ. ನಾನು ಇರುವವರೆಗೂ ಅದಕ್ಕೆ ಆಸ್ಪದ ನೀಡುವುದಿಲ್ಲ’ ಎಂದು ಟ್ರಂಪ್‌ ನುಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು