ಮೈ ಆಕ್ಟೋಪಸ್ ಟೀಚರ್ ಸಾಕ್ಷ್ಯಚಿತ್ರಕ್ಕೆ ಆಸ್ಕರ್ ಪ್ರಶಸ್ತಿ; ರಾಮಾಫೊಸಾ ಶ್ಲಾಘನೆ

ಜೋಹಾನ್ಸ್‌ಬರ್ಗ್: ದಕ್ಷಿಣ ಆಫ್ರಿಕಾದ ‘ಮೈ ಆಕ್ಟೋಪಸ್ ಟೀಚರ್’ ಸಾಕ್ಷ್ಯಚಿತ್ರವು ಆಸ್ಕರ್ ಪ್ರಶಸ್ತಿಯನ್ನು ಬಾಚಿಕೊಂಡಿದೆ. ಈ ಬಗ್ಗೆ ಶ್ಲಾಘಿಸಿರುವ ಅಧ್ಯಕ್ಷ ಸಿರಿಲ್ ರಾಮಾಫೊಸಾ ಅವರು,‘ ಈ ಚಿತ್ರವು ದೇಶದ ಸಾಗರಗಳು ಮತ್ತು ಸಮುದ್ರದ ಪರಿಸರ ವ್ಯವಸ್ಥೆಯ ನೈಸರ್ಗಿಕ ಸೌಂದರ್ಯ ಮತ್ತು ವೈವಿಧ್ಯತೆಯ ಬಗ್ಗೆ ಹೇಳಿದೆ ಎಂದರು.
‘ಮೈ ಆಕ್ಟೋಪಸ್ ಟೀಚರ್’ ಸಾಕ್ಷ್ಯಚಿತ್ರದಲ್ಲಿ ಭಾರತೀಯ ನಿರ್ಮಾಪಕಿ ಸ್ವಾತಿ ತ್ಯಾಗರಾಜನ್ ಅವರು ಸಹಾಯಕ ನಿರ್ಮಾಪಕಿ ಮತ್ತು ಉತ್ಪಾದನಾ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ.
ಪಿಪ್ಪಾ ಎಹ್ರ್ಲಿಚ್ ಮತ್ತು ಜೇಮ್ಸ್ ರೀಡ್ ಅವರು ಈ ಸಾಕ್ಷ್ಯಚಿತ್ರದ ನಿರ್ಮಾಪಕರಾಗಿದ್ದಾರೆ. ಇದರಲ್ಲಿ ವೆಸ್ಟರ್ನ್ ಕೇಪ್ ಕರಾವಳಿಯ ಕೆಲ್ಪ್ ಕಾಡುಗಳಲ್ಲಿರುವ ಕ್ರೇಗ್ ಫೋಸ್ಟರ್ ಅವರ ಕತೆ ಮತ್ತು ಆಕ್ಟೋಪಸ್‌ನೊಂದಿಗಿನ ಅವರ ಗಮನಾರ್ಹ ಸಂಬಂಧವನ್ನು ಬಣ್ಣಿಸಲಾಗಿದೆ.
2021ನೇ ಸಾಲಿನ ‘ಉತ್ತಮ ಸಾಕ್ಷ್ಯಚಿತ್ರ’ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿಯನ್ನು ಪಡೆದ ‘ಮೈ ಆಕ್ಟೋಪಸ್ ಟೀಚರ್’ ನಿರ್ಮಾಣ ತಂಡಕ್ಕೆ ಮತ್ತೊಮ್ಮೆ ಅಭಿನಂದನೆಗಳನ್ನು ತಿಳಿಸುತ್ತಿದ್ಧೇನೆ’ ಎಂದು ರಾಮಾಫೊಸಾ ಅವರು ಟ್ವೀಟ್ ಮಾಡಿದ್ದಾರೆ.
‘ಈ ಸಿನಿಮಾವು ಸಾಗರ ಸಂರಕ್ಷಣೆಯನ್ನು ಪ್ರೋತ್ಸಾಹಿಸಲಿ ಎಂದು ನಾನು ಆಶಿಸುತ್ತೇನೆ. ಪ್ರಸ್ತುತ ಸಮಯದಲ್ಲಿ ಸಾಗರ ಅವನತಿಯು ಜಾಗತಿಕ ಸಮಸ್ಯೆಯಾಗಿದೆ’ ಎಂದು ಅವರು ಅಭಿಪ್ರಾಯಪಟ್ಟರು. ಅಂತರರಾಷ್ಟ್ರೀಯ ಖ್ಯಾತಿಯ ದಕ್ಷಿಣ ಆಫ್ರಿಕಾದ ಚಲನಚಿತ್ರ ನಿರ್ಮಾಪಕ ಅನಂತ್ ಸಿಂಗ್ ಕೂಡ ಈ ಸಾಕ್ಷ್ಯಚಿತ್ರವನ್ನು ಶ್ಲಾಘಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.