2022ನೇ ಚಳಿಗಾಲದ ಒಲಿಂಪಿಕ್ಸ್ ಬಹಿಷ್ಕಾರಕ್ಕೆ ರಿಪಬ್ಲಿಕನ್ ನಾಯಕರ ಒತ್ತಾಯ

ವಾಷಿಂಗ್ಟನ್: ಚೀನಾ ಮಾನವ ಹಕ್ಕುಗಳನ್ನು ಉಲ್ಲಂಘಿಸಿದೆ ಎಂದು ಆರೋಪಿಸಿರುವ ರಿಪಬ್ಲಿಕನ್ ನಾಯಕರು, ಬೀಜಿಂಗ್ನಲ್ಲಿ ನಡೆಯಲಿರುವ 2022ನೇ ಚಳಿಗಾಲದ ಒಲಿಂಪಿಕ್ಸ್ ಅನ್ನು ಅಮೆರಿಕ ಬಹಿಷ್ಕರಿಸಬೇಕು ಎಂದು ಒತ್ತಾಯಿಸಿದ್ದಾರೆ.
2022ನೇ ಚಳಿಗಾಲದ ಒಲಿಂಪಿಕ್ಸ್ ಅನ್ನು ಸರ್ಕಾರ ಬಹಿಷ್ಕರಿಸಬೇಕು ಮತ್ತು ಈ ಒಲಿಂಪಿಕ್ಸ್ ಅನ್ನು ಬೇರೆ ಸ್ಥಳದಲ್ಲಿ ಆಯೋಜಿಸುವಂತೆ ಅಂತರರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಗೆ ಮನವಿ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
‘ಈ ಕುರಿತಂತೆ ಈವರೆಗೆ ಯಾವುದೇ ನಿರ್ಧಾರವನ್ನು ಕೈಗೊಂಡಿಲ್ಲ’ ಎಂದು ಶ್ವೇತಭವನ ಹೇಳಿದೆ.
‘ಬೃಹತ್ ಕಮ್ಯುನಿಸ್ಟ್ ಪ್ರಚಾರ ಅಭಿಯಾನಕ್ಕಾಗಿ ಚೀನಾವು ಚಳಿಗಾಲದ ಒಲಿಂಪಿಕ್ಸ್ ಅನ್ನು ಬೀಜಿಂಗ್ನಲ್ಲಿ ಆಯೋಜಿಸುತ್ತಿದೆ ಎಂಬುದು ರಹಸ್ಯದ ವಿಷಯವಲ್ಲ. ಚೀನಾ ಹಲವು ಬಾರಿ ಮಾನವ ಹಕ್ಕುಗಳನ್ನು ಉಲ್ಲಂಘಿಸಿದೆ. ಈ ಒಲಿಂಪಿಕ್ಸ್ ಮೂಲಕ ಮಾನವ ಹಕ್ಕುಗಳ ಉಲ್ಲಂಘನೆಯ ಕೃತ್ಯಗಳನ್ನು ಮುಚ್ಚಲು ಚೀನಾ ಪ್ರಯತ್ನಿಸುತ್ತಿದೆ. ಹಾಗಾಗಿ ಜೋ ಬೈಡನ್ ನೇತೃತ್ವದ ಸರ್ಕಾರ 2022ನೇ ಚಳಿಗಾಲದ ಒಲಿಂಪಿಕ್ಸ್ ಅನ್ನು ಬಹಿಷ್ಕರಿಸಬೇಕು’ ಎಂದು ವಿಶ್ವಸಂಸ್ಥೆಗೆ ಅಮೆರಿಕದ ಮಾಜಿ ರಾಯಭಾರಿ ನಿಕ್ಕಿ ಹ್ಯಾಲೆ ಅವರು ಈ ಕುರಿತ ಅಭಿಯಾನಕ್ಕೆ ಚಾಲನೆ ನೀಡಿ ಆಗ್ರಹಿಸಿದ್ದಾರೆ.
ಈ ಸಂಬಂಧ ಸಂಸದ ರಿಕ್ ಸ್ಕಾಟ್ ಅವರು ಜೋ ಬೈಡನ್ ಅವರಿಗೆ ಪತ್ರ ಬರೆದಿದ್ದಾರೆ. ಚೀನಾದಿಂದ ಮಾನವ ಹಕ್ಕುಗಳ ಉಲ್ಲಂಘನೆಯಾಗಿರುವ ಬಗ್ಗೆ ಮತ್ತು 2022ನೇ ಚಳಿಗಾಲದ ಒಲಿಂಪಿಕ್ಸ್ ಅನ್ನು ಬೇರೆ ಸ್ಥಳದಲ್ಲಿ ಆಯೋಜಿಸುವಂತೆ ಅಂತರರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಗೆ ಮನವಿ ಮಾಡುವ ಬಗ್ಗೆ ಚರ್ಚೆ ನಡೆಸಲು ಸಭೆ ಕರೆಯಬೇಕು’ ಎಂದು ರಿಕ್ ಸ್ಕಾಟ್ ಅವರು ಪತ್ರದಲ್ಲಿ ಹೇಳಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.