ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪುಟ್ನಿಕ್‌-ವಿ ಶೇ 95ರಷ್ಟು ಪರಿಣಾಮಕಾರಿ: 1 ಡೋಸ್‌ ಬೆಲೆ 10 ಡಾಲರ್‌ಗಿಂತ ಕಡಿಮೆ

Last Updated 24 ನವೆಂಬರ್ 2020, 19:16 IST
ಅಕ್ಷರ ಗಾತ್ರ

ನವದೆಹಲಿ: ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಅಭಿವೃದ್ಧಿಪಡಿಸಿರುವ ‘ಸ್ಪುಟ್ನಿಕ್ ವಿ’ ಲಸಿಕೆ ಶೇ 95ಕ್ಕಿಂತಲೂ ಹೆಚ್ಚು ಪರಿಣಾಮಕಾರಿ ಎಂದು ರಷ್ಯಾ ಮಂಗಳವಾರ ಹೇಳಿಕೊಂಡಿದೆ.

ಮಾಸ್ಕೊದಲ್ಲಿ ವರ್ಚ್ಯುವಲ್ ಸಭೆಯಲ್ಲಿ ಮಾತನಾಡಿದ ‘ರಷ್ಯಾ ಡೈರೆಕ್ಟ್‌ ಇನ್‌ವೆಸ್ಟ್‌ಮೆಂಟ್‌ ಫಂಡ್‌ನ (ಆರ್‌ಡಿಐಎಫ್) ಸಿಇಒ ಕಿರಿಲ್ ಡಿಮಿಟ್ರಿವ್ ಅವರು, ‘ಸ್ಪುಟ್ನಿಕ್ ವಿ ಹೆಚ್ಚು ಪರಿಣಾಮಕಾರಿ ಮಾತ್ರವಲ್ಲದೇ, ಜಗತ್ತಿನಲ್ಲೇ ಕಡಿಮೆ ದರದಲ್ಲಿ ಸಿಗುವ ಲಸಿಕೆ’ ಎಂದು ಹೇಳಿದ್ದಾರೆ.

‘ಲಸಿಕೆಯನ್ನು 2 ಡಿಗ್ರಿ ಸೆಲ್ಸಿಯಸ್‌ನಿಂದ 8 ಡಿಗ್ರಿ ಸೆಲ್ಸಿಯಸ್‌ ವರೆಗಿನ ತಾಪಮಾನದಲ್ಲಿ ಶೇಖರಿಸಿ ಇಡಬಹುದು. ಲಸಿಕೆಯನ್ನು ಸುಲಭವಾಗಿ ವಿತರಣೆ ಮಾಡುವಲ್ಲಿ ಈ ಅಂಶ ಪ್ರಮುಖವಾಗಿದೆ. ಲಸಿಕೆಯ ಶುಷ್ಕ ರೂಪವನ್ನು (ಡ್ರೈ ಫಾರ್ಮ್) ಈ ತಾಪಮಾನದಲ್ಲಿ ಇರಿಸುವುದರಿಂದ ಶೇಖರಣೆ, ಸಾಗಣೆ ವೆಚ್ಚ ಕಡಿಮೆ ಆಗಲಿದೆ’ ಎಂದಿದ್ದಾರೆ.

ಲಸಿಕೆಯನ್ನು ರಷ್ಯಾದ ಗಮಾಲೆಯ ರಾಷ್ಟ್ರೀಯ ಸಂಶೋಧನಾ ಕೇಂದ್ರ ಹಾಗೂ ಆರ್‌ಡಿಐಎಫ್ ಅಭಿವೃದ್ಧಿಪಡಿಸಿವೆ. ರಷ್ಯಾ, ಭಾರತ ಸೇರಿ ಹಲವು ದೇಶಗಳಲ್ಲಿ ಮನುಷ್ಯನ ಮೇಲೆ ಪ್ರಯೋಗ ನಡೆಯುತ್ತಿದೆ. ರಷ್ಯಾದಲ್ಲಿ 42 ಸಾವಿರ ಸ್ವಯಂಸೇವಕರು ಪರೀಕ್ಷೆಯಲ್ಲಿ ಭಾಗಿಯಾಗಿದ್ದಾರೆ. ಪರೀಕ್ಷೆಯ ದತ್ತಾಂಶಗಳು ಅಂತರರಾಷ್ಟ್ರೀಯ ಪತ್ರಿಕೆಗಳಲ್ಲಿ ಪ್ರಕಟವಾಗಿವೆ ಎಂದು ಡಿಮಿಟ್ರಿವ್ ಹೇಳಿದ್ದಾರೆ.

ಭಾರತದಲ್ಲಿ ಡಾ. ರೆಡ್ಡೀಸ್ ಲ್ಯಾಬ್ ಜೊತೆ ರಷ್ಯಾ ಒಪ್ಪಂದ ಮಾಡಿಕೊಂಡಿದೆ. ದೇಶದಲ್ಲಿ ಪ್ರಾಯೋಗಿಕ ಪರೀಕ್ಷೆಯನ್ನು ರೆಡ್ಡೀಸ್ ಲ್ಯಾಬ್ ನಿರ್ವಹಿಸುತ್ತಿದ್ದು,ಸ್ಪುಟ್ನಿಕ್ ಲಸಿಕೆ ವಿತರಣೆ ಜವಾಬ್ದಾರಿಯನ್ನೂ ಹೊತ್ತಿದೆ.

ಕೋವಿಡ್‌ಗೆ ಪರಿಣಾಮಕಾರಿ ಲಸಿಕೆ ಅಭಿವೃದ್ಧಿ ಮಾಡಿದ್ದೇವೆ ಎಂಬ ಸುದ್ದಿ ಪ್ರಕಟಿಸಲು ವಿಶ್ವದ ವಿವಿಧ ಕಂಪನಿಗಳು ಸ್ಪರ್ಧೆಗೆ ಬಿದ್ದಿವೆ. ಫೈಝರ್ ಸಂಸ್ಥೆಯು ಶೇ 95ರಷ್ಟು ಪರಿಣಾಮಕಾರಿ ಲಸಿಕೆ ತಯಾರಿಸಿರುವುದಾಗಿ ಇತ್ತೀಚೆಗೆ ತಿಳಿಸಿತ್ತು. ಅಮೆರಿಕ ಮೂಲದ ಮೊಡೆರ್ನಾ ಸಂಸ್ಥೆ ಕೂಡ ಶೇ 94.5ರಷ್ಟು ಪರಿಣಾಮ ಹೊಂದಿರುವ ಲಸಿಕೆ ಅಭಿವೃದ್ಧಿಪಡಿಸಿರುವುದಾಗಿ ಘೋಷಿಸಿತ್ತು.

*

ಲಸಿಕೆ ಶೇ 95ಕ್ಕಿಂತಲೂ ಹೆಚ್ಚು ಪರಿಣಾಮಕಾರಿ ಎಂಬ ಸುದ್ದಿ ರಷ್ಯಾಗೆ ಮಾತ್ರವಲ್ಲ, ಇಡೀ ಪ್ರಪಂಚಕ್ಕೆ ಸಂತಸದ ವಿಷಯ.
-ರಿಲ್ ಡಿಮಿಟ್ರಿವ್, ಆರ್‌ಡಿಐಎಫ್ ಸಿಇಒ

*

ರಷ್ಯಾದಲ್ಲಿ ಉಚಿತ: ವಿದೇಶದಲ್ಲಿ 10 ಡಾಲರ್‌ಗೂ ಕಡಿಮೆ
'ರಷ್ಯಾದ ಸ್ಪುಟ್ನಿಕ್‌-ವಿ ಲಸಿಕೆಯ ಒಂದು ಡೋಸ್‌ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹತ್ತು ಡಾಲರ್‌ಗಳಿಂತಲೂ (ಭಾರತದಲ್ಲಿ ₹740) ಕಡಿಮೆ ಬೆಲೆಗೆ ಸಿಗಲಿದೆ. ರಷ್ಯಾದ ನಾಗರಿಕರಿಗೆ ಉಚಿತವಾಗಿ ನೀಡಲಾಗುತ್ತದೆ,' ಎಂದು 'ಸ್ಪುಟ್ನಿಕ್‌-ವಿ' ಟ್ವೀಟ್‌ ಮಾಡಿ ತಿಳಿಸಿದೆ. ಒಬ್ಬ ವ್ಯಕ್ತಿಗೆ ಎರಡು ಡೋಸ್‌ಗಳು ಅಗತ್ಯವಿದೆ.

'2021ರ ಹೊತ್ತಿಗೆ 50 ಕೋಟಿ ಜನರಿಗೆ ಲಸಿಕೆ ತಯಾರಿಸಲು ಆರ್‌ಡಿಐಎಫ್ ಅಂತರರಾಷ್ಟ್ರೀಯ ಉತ್ಪಾದನಾ ಪಾಲುದಾರರೊಂದಿಗೆ ಒಪ್ಪಂದಗಳನ್ನು ಮಾಡಿಕೊಳ್ಳಲಿದೆ,' ಎಂದೂ ಅದು ಟ್ವೀಟ್‌ನಲ್ಲಿ ತಿಳಿಸಿದೆ.

'ಸ್ಪುಟ್ನಿಕ್‌-ವಿ ಲಸಿಕೆಯು ತನ್ನ ಇತರ ಪ್ರತಿಸ್ಪರ್ಧಿಗಳಿಗಿಂತ ಗಮನಾರ್ಹವಾಗಿ ಕಡಿಮೆ ಬೆಲೆಗೆ ಸಿಗಲಿದೆ,' ಎಂದು ರಷ್ಯಾದ ಸಂಪತ್ತು ನಿಧಿಯ ಮುಖ್ಯಸ್ಥರು ಮಂಗಳವಾರ ಹೇಳಿದ್ದರು.

ಕೈಗೆಟುಕುವ ದರ: ರಷ್ಯಾ
*
ಲಸಿಕೆಯ ಒಂದು ಡೋಸ್‌ ದರ ಸುಮಾರು ₹740 (10 ಡಾಲರ್‌)
*ಮೊದಲ ಡೋಸ್‌ ಬಳಿಕ ರೋಗನಿರೋಧಕ ಶಕ್ತಿ ಹೆಚ್ಚಿಸಲು ಹೆಚ್ಚುವರಿ ಡೋಸ್ (ಪ್ರೀಮಿಯರ್ ಬೂಸ್ಟರ್ ಶಾಟ್) ಅಗತ್ಯ
*ಎರಡೂ ಡೋಸ್‌ ಸೇರಿ ಸುಮಾರು ₹1,480 (20 ಯುಎಸ್‌ಡಿ) ವೆಚ್ಚ ತಗುಲಲಿದೆ
* ಪ್ರತಿಸ್ಪರ್ಧಿ ಕಂಪನಿಗಳ ಲಸಿಕೆಗಳಿಗೆ ಹೋಲಿಸಿದರೆ, ಈ ದರ ಅರ್ಧದಷ್ಟು ಕಡಿಮೆ ಎಂದು ರಷ್ಯಾ ಹೇಳಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT