ಬುಧವಾರ, ಮೇ 25, 2022
30 °C
ಕ್ರಾಮರೊಸ್ಕಿ ಮೇಲೆ ನಡೆದ ಕ್ಷಿಪಣಿ ದಾಳಿಗೆ ಆಕ್ರೋಶ l ಮೃತರ ಸಂಖ್ಯೆ 52ಕ್ಕೆ ಏರಿಕೆ l ದಾಳಿ ಭೀತಿ, ಜನರ ಗುಳೆ

ರಷ್ಯಾಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಲು ಉಕ್ರೇನ್ ಆಗ್ರಹ

ಎಪಿ Updated:

ಅಕ್ಷರ ಗಾತ್ರ : | |

Prajavani

ಕೀವ್‌, ಉಕ್ರೇನ್: ಪ್ರಯಾಣಿಕರು ಕಿಕ್ಕಿರಿದು ಸೇರಿದ್ದ, ಕ್ರಾಮರೊಸ್ಕಿ ರೈಲ್ವೆ ನಿಲ್ದಾಣದ ಮೇಲೆ ಕ್ಷಿಪಣಿ ದಾಳಿ ನಡೆಸಿದ ರಷ್ಯಾಗೆ ‘ತೀಕ್ಷ್ಣ ಪ್ರತಿಕ್ರಿಯೆ’ ನೀಡಬೇಕು ಎಂದು ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಅವರು ವಿಶ್ವದ ರಾಷ್ಟ್ರಗಳನ್ನು ಆಗ್ರಹಿಸಿದ್ದಾರೆ. 

ಸುಮಾರು 4000 ಪ್ರಯಾಣಿಕರಿದ್ದ ರೈಲ್ವೆ ನಿಲ್ದಾಣದ ಮೇಲೆ ನಡೆದ ಕ್ಷಿಪಣಿ ದಾಳಿಯಿಂದ ಕನಿಷ್ಠ 52 ಜನ ಮೃತಪಟ್ಟಿದ್ದರು. ಉಕ್ರೇನ್‌ ಈ ಕೃತ್ಯವನ್ನು ‘ಯುದ್ಧ ಅಪರಾಧ’ ಎಂದು ಹೇಳಿದೆ. ‘ಈ ದಾಳಿಗೆ ತಾನು ಹೊಣೆಯಲ್ಲ’ ಎಂದು ರಷ್ಯಾ ಪ್ರತಿಕ್ರಿಯಿಸಿದೆ.

ಇದು, ರಷ್ಯಾದ ಮತ್ತೊಂದು ಯುದ್ಧ ಅಪರಾಧ. ಇದಕ್ಕೆ ಕಾರಣರಾದ ಎಲ್ಲರನ್ನೂ ಹೊಣೆಗಾರರನ್ನಾಗಿಸ ಲಾಗುವುದು. ಬುಕಾದ ನರಮೇಧ ಜೊತೆಗೆ ಕ್ರಾಮರೊಸ್ಕಿ ಘಟನೆಯನ್ನು ಯುದ್ಧ ಅಪರಾಧವಾಗಿ ಪರಿಗಣಿಸಬೇಕು ಎಂದು ಝೆಲೆನ್‌ಸ್ಕಿ ಆಗ್ರಹಪಡಿಸಿದ್ದಾರೆ. 

ನಾಗರಿಕರು ಬಲಿಯಾದ ರೈಲು ನಿಲ್ದಾಣ ಮೇಲಿನ ದಾಳಿಯನ್ನು ವಿಶ್ವದ ನಾಯಕರು ಈಗಾಗಲೇ ಖಂಡಿಸಿದ್ದಾರೆ. ಆದರೆ, ಕಟ್ಟುನಿಟ್ಟಿನ ತೀಕ್ಷ ಪ್ರತಿಕ್ರಿಯೆ ನೀಡಬೇಕು ಎಂದು ಬಯಸುತ್ತೇವೆ ಎಂದಿರುವ ಝೆಲೆನ್‌ಸ್ಕಿ, ರಷ್ಯಾ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಕ್ಷಿಪಣಿ ದಾಳಿಯಲ್ಲಿ ಮೃತಪಟ್ಟವರಲ್ಲಿ ಮಕ್ಕಳೂ ಸೇರಿದ್ದು, 300ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ರಸ್ತೆ ಬದಿಯಲ್ಲಿ ಪ್ಲಾಸ್ಟಿಕ್ ಹಾಳೆ ಮೇಲೆ 30 ಶವಗಳನ್ನು ಸಾಲಾಗಿ ಇರಿಸಿದ್ದನ್ನು ಗಮನಿಸಿದ್ದಾಗಿ ಎಎಫ್‌ಪಿ ಮಾಧ್ಯಮ ಪ್ರತಿನಿಧಿಗಳು ತಿಳಿಸಿದ್ದಾರೆ. 

ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರು ಈ ದಾಳಿಯನ್ನು ಭೀಕರ ದೌರ್ಜನ್ಯ ಎಂದು ಬಣ್ಣಿಸಿದ್ದರೆ, ‘ಮಾನವೀಯತೆ ಮೇಲಿನ ಅಪರಾಧ’ ಎಂದು ಫ್ರಾನ್ಸ್‌ ಹೇಳಿದೆ. ಯೂರೋಪ್‌ ಒಕ್ಕೂಟ ಆಯೋಗದ ಅಧ್ಯಕ್ಷ ಉರ್ಸುಲಾ ವೊನ್‌ ಡೆರ್ ಲೆಯೆನ್ ಅವರು, ‘ರಷ್ಯಾದ ಈ ನಡೆ ಸಿನಿಕತನದ್ದು’ ಎಂದಿದ್ದಾರೆ. ವಿಶ್ವದ ವಿವಿಧ ನಾಯಕರೂ ತೀವ್ರವಾಗಿ ಖಂಡಿಸಿದ್ದಾರೆ.

ರಷ್ಯಾದ ‘ಯುದ್ಧ ಅಪರಾಧ’ ಸಾಬೀತಿಗೆ ಪೂರಕ ಸಾಕ್ಷ್ಯ ಸಂಗ್ರಹ: ಝೆಲೆನ್‌ಸ್ಕಿ

‘ರಷ್ಯಾದ ಸೇನೆ ಯುದ್ಧ ಅಪರಾಧ ಎಸಗುತ್ತಿರುವುದನ್ನು ಸಾಬೀತುಪಡಿಸಲು ಸಾಕ್ಷ್ಯವನ್ನು ದೇಶದ ಭದ್ರತಾ ವಿಭಾಗ ಸಂಗ್ರಹಿಸುತ್ತಿದೆ’ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಹೇಳಿದ್ದಾರೆ.

52 ಜನರು ಮೃತಪಟ್ಟ ರೈಲ್ವೆ ನಿಲ್ದಾಣದ ಮೇಲೆ ಕ್ಷಿಪಣಿ ದಾಳಿ ನಡೆದ ಹಿನ್ನೆಲೆಯಲ್ಲಿ ಸಿಬಿಎಸ್‌ಗೆ ನೀಡಿದ ಸಂದರ್ಶನದಲ್ಲಿ ಅವರು ಈ ಮಾತು ಹೇಳಿದ್ದಾರೆ.

ರಷ್ಯಾದ ಸೈನಿಕರು ತಮ್ಮ ಕೃತ್ಯಗಳ ಬಗ್ಗೆ ಪೋಷಕರ ಜೊತೆಗೆ ಮಾತನಾಡಿದ್ದಾರೆ. ಜನರ ಹತ್ಯೆ ಮಾಡಿದ್ದನ್ನು ರಷ್ಯಾದ ಯುದ್ಧ ಕೈದಿಗಳು ಒಪ್ಪಿಕೊಂಡಿದ್ದಾರೆ. ಯುದ್ಧ ಕೈದಿಗಳಾಗಿರುವ ಪೈಲಟ್‌ಗಳ ಬಳಿ ಉಕ್ರೇನ್‌ನ ನಾಗರಿಕ ತಾಣ ಕುರಿತ ನಕ್ಷೆಗಳಿವೆ. ಕೃತ್ಯ ನಡೆದ ಸ್ಥಳದ ಸಾಕ್ಷ್ಯ ಆಧರಿಸಿ ತನಿಖೆ ನಡೆದಿದೆ ಎಂದಿದ್ದಾರೆ.

ಈ ಕೃತ್ಯಗಳಿಗೆ ಹೊಣೆ ಯಾರು? ಕ್ಷಿಪಣಿ ದಾಳಿಗೆ ಅನುಮತಿ ನೀಡಿದವರು ಯಾರು, ಎಲ್ಲಿಂದ ಕ್ಷಿಪಣಿ ಪ್ರಯೋಗಿಸಲಾಗಿದೆ? ಎಂಬುದು ಸೇರಿದಂತೆ ಎಲ್ಲ ಮಾಹಿತಿಗಳನ್ನು ಕಲೆಹಾಕುತ್ತಿದೆ ಎಂದು ಹೇಳಿದ್ದಾರೆ.

‘ಕೃತ್ಯ ಎಸಗಲು ಆದೇಶ ನೀಡಿದವರು ಹಾಗೂ ಕೃತ್ಯ ಎಸಗಿದವರು ಇದರ ತಪ್ಪಿತಸ್ಥರು’ ಎಂದು ಝೆಲೆನ್ಸ್‌ಸ್ಕಿ ಹೇಳಿದರು. ರಷ್ಯಾ ಅಧ್ಯಕ್ಷ ಪುಟಿನ್ ಕೂಡಾ ಹೊಣೆಗಾರರೇ ಎಂಬ ಪ್ರಶ್ನೆಗೆ ‘ಅವರೂ ಒಬ್ಬರು’ ಎಂದರು. 

ಈ ಮಧ್ಯೆ ರಷ್ಯಾದ ರಕ್ಷಣಾ ಸಚಿವಾಲಯವು, ‘ಈ ದಾಳಿಯನ್ನು ಕೀವ್‌ ನಡೆಸಿದೆ. ಉಕ್ರೇನ್‌ನ ಸೇನಾ ಪಡೆಗಳ ರಕ್ಷಣೆಗಾಗಿ ನಾಗರಿಕರನ್ನೇ ಬಳಸುತ್ತಿದೆ’ ಎಂದು ಆರೋಪಿಸಿದೆ.

ರಷ್ಯಾದ ಜೊತೆಗೆ ಮಾತುಕತೆಗೆ ಈಗಲೂ ಸಿದ್ಧ: ಉಕ್ರೇನ್‌ ಅಧ್ಯಕ್ಷ

ರಷ್ಯಾದ ಜೊತೆಗೆ ಈಗಲೂ ಮಾತುಕತೆಗೆ ಸಿದ್ಧ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಹೇಳಿದ್ದಾರೆ. ಬುಕಾ ನರಮೇಧ ಘಟನೆ ನಂತರ ಮಾತುಕತೆಗೆ ಹಿನ್ನಡೆಯಾಗಿತ್ತು. ಮಾ.29ರಂದು ಕಡೇ ಬಾರಿಗೆ ಸಂಧಾನ ಮಾತುಕತೆ ನಡೆದಿತ್ತು.

‘ಮಾತುಕತೆ ನಡೆಸಲು ಉಕ್ರೇನ್ ಎಂದಿಗೂ ಸಿದ್ಧವಿದೆ. ಯುದ್ಧ ನಿಲ್ಲಿಸುವ ಮಾರ್ಗಗಳನ್ನು ನಾವು ನಿರೀಕ್ಷಿಸುತ್ತಿದ್ದೇವೆ. ನಾವು ಹೋರಾಟಕ್ಕೂ ಸಜ್ಜಾಗಿದ್ದೇವೆ. ರಾಜತಾಂತ್ರಿಕ ಮಾರ್ಗದಲ್ಲಿ ಚರ್ಚೆಗೆ ಸಿದ್ಧರಿದ್ದೇವೆ’ ಎಂದು ಝೆಲೆನ್‌ಸ್ಕಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು