ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ರಾನ್ಸ್‌: ಪಿಂಚಣಿ ನೀತಿಯ ವಿರುದ್ಧ ಭಾರಿ ಪ್ರತಿರೋಧ

ಮೂರನೇ ರಾಜ ಚಾರ್ಲ್ಸ್‌ ಅವರ ಫ್ರಾನ್ಸ್‌ ಭೇಟಿ ಮುಂದೂಡಿಕೆ
Last Updated 24 ಮಾರ್ಚ್ 2023, 13:13 IST
ಅಕ್ಷರ ಗಾತ್ರ

ಪ್ಯಾರಿಸ್‌: ಪಿಂಚಣಿ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಮುಂದಾಗಿರುವ ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುಯೆಲ್‌ ಮ್ಯಾಕ್ರನ್ ಅವರ ಕ್ರಮಕ್ಕೆ ದೇಶದಾದ್ಯಂತ ದೊಡ್ಡ ಮಟ್ಟದ ಪ್ರತಿರೋಧ ವ್ಯಕ್ತವಾಗುತ್ತಿದೆ. ಮತಕ್ಕೆ ಹಾಕದೆಯೇ ನೀತಿಯನ್ನು ಅಂಗೀಕಾರ ಮಾಡಿದ ಅಧ್ಯಕ್ಷ ಮ್ಯಾಕ್ರನ್‌ ಅವರ ಕ್ರಮವನ್ನು ಜನರು ಕಟುವಾಗಿ ವಿರೋಧಿಸುತ್ತಿದ್ದಾರೆ. ‌

ನಿವೃತ್ತಿ ವಯಸ್ಸನ್ನು 62ರಿಂದ 64ಕ್ಕೆ ಏರಿಸಿರುವುದು ಜನರು ಆಕ್ರೋಶಕ್ಕೆ ಕಾರಣವಾಗಿದೆ. ಪಿಂಚಣಿ ನೀತಿಯನ್ನು ವಿರೋಧಿಸಿ ಗುರುವಾರದಿಂದೀಚೆಗೆ ಸುಮಾರು 300 ಕಡೆಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿದ್ದು, 10 ಲಕ್ಷಕ್ಕೂ ಹೆಚ್ಚು ಜನರು ಪಾಲ್ಗೊಳ್ಳುತ್ತಿದ್ದಾರೆ. ಪ್ಯಾರಿಸ್‌ನಲ್ಲಿ 450ಕ್ಕೂ ಹೆಚ್ಚು ಪ್ರತಿಭಟನಕಾರರನ್ನು ಬಂಧಿಸಲಾಗಿದೆ.

ಗುರುವಾರ ನಡೆದ ಹಲವು ಪ್ರತಿಭಟನೆಗಳು ಹಿಂಸಾ ರೂಪ ಪಡೆದುಕೊಂಡಿದ್ದವು. ಕಪ್ಪುಪಟ್ಟಿ ತೊಟ್ಟಿದ್ದ ಪ್ರತಿಭಟನಕಾರರು ಹಾಗೂ ಪೊಲೀಸರು ನಡುವೆ ಘರ್ಷಣೆ ನಡೆದಿತ್ತು. ‘ಹಿಂಸಾಚಾರದಲ್ಲಿ ಪೊಲೀಸರು ಹಾಗೂ ಅರೆಸೇನಾ ಪಡೆ ಸಿಬ್ಬಂದಿ ಸೇರಿ ಸುಮಾರು 441 ಮಂದಿಗೆ ಗಾಯಗಳಾಗಿವೆ’ ಎಂದು ಆಂತರಿಕ ಸಚಿವ ಗೆರಾಲ್ಡ್‌ ಡಾರ್ಮ್ಯಾನಿನ್‌ ಮಾಹಿತಿ ನೀಡಿದ್ದಾರೆ.

ಪಿಂಚಣಿ ಸುಧಾರಣಾ ನೀತಿಯ ಸಂಬಂಧ ಎದ್ದಿರುವ ಪ್ರತಿರೋಧದ ಹಿನ್ನೆಲೆಯಲ್ಲಿ ದೇಶದಲ್ಲಿ ನೀತಿಯ ಕುರಿತು ಅಭಿಪ್ರಾಯ ಸಂಗ್ರಹಣೆ ನಡೆದಿದೆ. ಇದರಲ್ಲಿ ಪಿಂಚಣಿ ನೀತಿಯ ವಿರುದ್ಧ ಫ್ರಾನ್ಸ್‌ ಜನರು ತಮ್ಮ ಅಭಿಪ್ರಾಯ ದಾಖಲಿಸಿದ್ದಾರೆ. ಆದ್ದರಿಂದ ನೀತಿಯನ್ನು ಹಿಂಪಡೆಯುವ ಸಂಬಂಧ ಅಧ್ಯಕ್ಷ ಮ್ಯಾಕ್ರನ್‌ ಅವರ ಮೇಲೆ ಒತ್ತಡ ಹೆಚ್ಚುತ್ತಿದೆ. ಆದರೆ, ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಮ್ಯಾಕ್ರನ್‌, ‘ವ್ಯವಸ್ಥೆಯು ದಿಕ್ಕುತಪ್ಪದಂತೆ ಮಾಡಲು ಈ ನೀತಿಯು ಅಗತ್ಯವಾಗಿದೆ’ ಎಂದಿದ್ದಾರೆ.

ಭೇಟಿ ಮುಂದೂಡಿಕೆ: ಬ್ರಿಟನ್‌ನ ರಾಜ ಮೂರನೇ ಚಾರ್ಲ್ಸ್‌ ಅವರು ಮಂಗಳವಾರ ಬೋಡೊ ನಗರಕ್ಕೆ ಭೇಟಿ ನೀಡಲಿದ್ದರು. ಈ ವೇಳೆ ದೇಶದಾದ್ಯಂತ ಪ್ರತಿಭಟನೆಗಳನ್ನು ನಡೆಸಲು ಕಾರ್ಮಿಕ ಒಕ್ಕೂಟಗಳು ನಿರ್ಧರಿಸಿದ್ದವು. ಗುರುವಾರ ರಾತ್ರಿ ಬೋಡೊ ನಗರದ ಭವ್ಯವಾದ ಸಿಟಿ ಹಾಲ್‌ನ ಮರದ ಬಾಗಿಲಿಗೆ ಪ್ರತಿಭಟನಕಾರರು ಬೆಂಕಿ ಹಚ್ಚಿದ್ದರು. ‘ಪ್ರತಿಭಟನೆಯ ಕಾರಣಗಳಿಂದ ರಾಜ ಮೂರನೇ ಚಾರ್ಲ್ಸ್‌ ಅವರ ಫ್ರಾನ್ಸ್‌ ಭೇಟಿಯನ್ನು ಮುಂದೂಡಲಾಗಿದೆ’ ಎಂದು ಅಧ್ಯಕ್ಷ ಮ್ಯಾಕ್ರನ್‌ ಕಚೇರಿ ಶುಕ್ರವಾರ ತಿಳಿಸಿದೆ.

ಫ್ರಾನ್ಸ್‌ ರಸ್ತೆಗಳಲ್ಲಿ ಕಸದ ರಾಶಿ

ಫ್ರಾನ್ಸ್‌ನ ರಸ್ತೆಯ ತುಂಬೆಲ್ಲಾ ಕಸಗಳ ರಾಶಿಗಳನ್ನು ಸುರಿಯುವುದು, ಅದಕ್ಕೆ ಬೆಂಕಿ ಹಚ್ಚುವುದು ಕಂಡುಬಂದಿದೆ. ಸ್ವಚ್ಛತಾ ಕಾರ್ಮಿಕರೂ ಪ್ರತಿಭಟನೆ ನಡೆಸುತ್ತಿರುವುದರಿಂದ ಫ್ರಾನ್ಸ್‌ನ ರಸ್ತೆಗಳಲ್ಲಿ ಕಸದ ರಾಶಿ ಬಿದ್ದಿದೆ. ಗುರುವಾರದಂದು ಪ್ಯಾರಿಸ್‌ನಲ್ಲಿ ಸುಮಾರು ಸಾವಿರ ಕಸದ ರಾಶಿಗಳಿಗೆ ಬೆಂಕಿ ಹಚ್ಚಲಾಗಿತ್ತು.

ದೇಶದಲ್ಲಿ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಕಂಡುಬಂದಿದೆ. ದೇಶದ ಅತಿ ದೊಡ್ಡ ಮಾಸೈ ವಾಣಿಜ್ಯ ಬಂದರಿನ ಮಾರ್ಗಗಳನ್ನು ಬಂದು ಮಾಡಲಾಗಿದೆ. ನಾರ್ಮಂಡಿ ದ್ವೀಪದಲ್ಲಿರುವ ತೈಲ ಸಂಸ್ಕರಣಾ ಘಟಕದಿಂದ ಫ್ರಾನ್ಸ್‌ಗೆ ಬರುತ್ತಿದ್ದ ತೈಲವನ್ನು ನಿಲ್ಲಿಸಲಾಗಿತ್ತು. ಪೊಲೀಸರ ಮಧ್ಯಸ್ಥಿಕೆಯ ಕಾರಣದಿಂದಾಗಿ ಶುಕ್ರವಾರ ತೈಲವನ್ನು ಸರಬರಾಜು ಮಾಡಲಾಗುತ್ತಿದೆ. ಮಾಸೈ ನಗರದಲ್ಲಿರುವ ತೈಲ ಟರ್ಮಿನಲ್‌ನಿಂದಲೂ ತೈಲ ಸರಬರಾಜು ಆಗದಂತೆ ತಡೆಯಲು ಪ್ರತಿಭಟನಕಾರರು ಯೋಜನೆ ರೂಪಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT