ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಜನ್‌ ಜನರಲ್‌ ಹುದ್ದೆಗೆ ಡಾ.ವಿವೇಕ್‌ ಮೂರ್ತಿ ನೇಮಕ: ಸೆನೆಟ್‌ ಅನುಮೋದನೆ

57– 43 ಮತಗಳಿಂದ ಪ್ರಸ್ತಾವಕ್ಕೆ ಅಂಗೀಕಾರ, ರಿಪಬ್ಲಿಕನ್‌ ಪಕ್ಷದ ಏಳು ಸೆನೆಟ್‌ರಗಳ ಬೆಂಬಲ
Last Updated 24 ಮಾರ್ಚ್ 2021, 6:52 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಭಾರತ–ಅಮೆರಿಕನ್‌ ತಜ್ಞ ವೈದ್ಯ ವಿವೇಕ್‌ ಮೂರ್ತಿ ಅವರನ್ನು ಅಧ್ಯಕ್ಷ ಜೋ ಬೈಡನ್‌ ಅವರ ಸರ್ಜನ್‌ ಜನರಲ್‌ ಹುದ್ದೆಗೆ ನೇಮಕ ಮಾಡಿರುವುದಕ್ಕೆ ಸೆನೆಟ್‌ ಅನುಮೋದನೆ ನೀಡಿದೆ.

45 ವರ್ಷದ ಡಾ. ಮೂರ್ತಿ ಅವರು ಅಮೆರಿಕದ ಸರ್ಜನ್‌ ಜನರಲ್‌ ಹುದ್ದೆಯನ್ನು ಅಲಂಕರಿಸುತ್ತಿರುವುದು ಇದು ಎರಡನೇ ಬಾರಿಯಾಗಿದೆ. 2013ರಲ್ಲಿ ಅಮೆರಿಕ ಅಧ್ಯಕ್ಷರಾಗಿದ್ದ ಬರಾಕ್‌ ಒಬಾಮ ಅವರು ವಿವೇಕ್‌ ಮೂರ್ತಿ ಅವರನ್ನು ಸರ್ಜನ್‌ ಜನರಲ್‌ ಹುದ್ದೆಗೆ ನೇಮಿಸಿಕೊಂಡಿದ್ದರು. ಆಗ ಮೂರ್ತಿ ಅವರಿಗೆ ಕೇವಲ 37 ವರ್ಷಗಳಾಗಿದ್ದವು. ಈ ಹುದ್ದೆಯನ್ನು ಅಲಂಕರಿಸಿದ್ದ ಅಂತ್ಯಂತ ಕಿರಿಯ ವಯಸ್ಸಿನ ವೈದ್ಯ ಎನ್ನುವ ಹಿರಿಮೆಗೂ ಪಾತ್ರರಾಗಿದ್ದರು. ಆದರೆ, ಟ್ರಂಪ್‌ ಆಡಳಿತದಲ್ಲಿ ಈ ಹುದ್ದೆಯನ್ನು ತೊರೆದಿದ್ದರು.

ಮೂರ್ತಿ ಅವರ ನಾಮನಿರ್ದೇಶನವನ್ನು ಸೆನೆಟ್‌ 57– 43 ಮತಗಳ ಮೂಲಕ ಅನುಮೋದಿಸಿತು. ರಿಪಬ್ಲಿಕನ್‌ ಪಕ್ಷದ ಏಳು ಸೆನೆಟರ್‌ಗಳು ಸಹ ಡಾ. ಮೂರ್ತಿ ಅವರಿಗೆ ಬೆಂಬಲ ಸೂಚಿಸಿದರು.

‘ಸರ್ಜನ್‌ ಜನರಲ್‌ ಆಗಿ ಮತ್ತೊಮ್ಮೆ ಸೇವೆ ಸಲ್ಲಿಸಲು ಸೆನೆಟ್‌ ಅನುಮೋದನೆ ನೀಡಿರುವುದಕ್ಕೆ ಧನ್ಯವಾದಗಳು. ಕಳೆದ ಕೆಲವು ವರ್ಷಗಳಿಂದ ನಾವು ಸಂಕಷ್ಟಗಳನ್ನು ಎದುರಿಸಿದ್ದೇವೆ. ಈ ಸಂಕಷ್ಟಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ನಿಮ್ಮೆಲ್ಲರ ಜತೆ ಕಾರ್ಯನಿರ್ವಹಿಸುವ ಅವಕಾಶ ದೊರೆತಿದೆ. ನಮ್ಮ ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ನಾವೆಲ್ಲ ಕೈಜೋಡಿಸೋಣ’ ಎಂದು ಮೂರ್ತಿ ಪ್ರತಿಕ್ರಿಯಿಸಿದರು.

ಅಮೆರಿಕದಲ್ಲಿ ಗಂಭೀರವಾಗಿರುವ ಕೊರೊನಾ ವೈರಸ್‌ ನಿಯಂತ್ರಿಸುವುದು ಮೂರ್ತಿ ಅವರ ಮೊದಲ ಆದ್ಯತೆಯಾಗಿದೆ.

ಕೊರೊನಾ ವೈರಸ್‌ ಸಾಂಕ್ರಾಮಿಕ ಪರಿಸ್ಥಿತಿ ಮತ್ತು ಅದನ್ನು ನಿಯಂತ್ರಿಸುವ ಬಗ್ಗೆ ಡಾ. ಮೂರ್ತಿ ಅವರು ಅಧ್ಯಕ್ಷ ಜೋ ಬೈಡನ್‌ ಅವರಿಗೆ ಸಲಹೆ ನೀಡಲಿದ್ದಾರೆ. ಜತೆಗೆ, ಸಾರ್ವಜನಿಕ ಆರೋಗ್ಯ ನಿರ್ವಹಣೆಯ ಜವಾಬ್ದಾರಿಯೂ ಅವರಿಗಿದೆ.

ಕರ್ನಾಟಕದ ಮಂಡ್ಯ ಜಿಲ್ಲೆಯ ಹಲ್ಲೆಗೆರೆ ಮೂಲದ ಡಾ.ವಿವೇಕ್‌ ಮೂರ್ತಿ, ‘ಡಾಕ್ಟರ್ಸ್‌ ಫಾರ್‌ ಅಮೆರಿಕ’ ಎನ್ನುವ ಸಂಸ್ಥೆಯನ್ನು ಅಮೆರಿಕದಲ್ಲಿ ಆರಂಭಿಸಿದ್ದಾರೆ. ಈ ಸಂಸ್ಥೆಯಲ್ಲಿ 18 ಸಾವಿರ ತಜ್ಞ ವೈದ್ಯರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳು ಸದಸ್ಯರಾಗಿದ್ದಾರೆ. ಕೈಗೆಟಕುವ ದರದಲ್ಲಿ ಆರೋಗ್ಯ ಸೇವೆಗಳನ್ನು ಒದಗಿಸುವುದು ಈ ಸಂಸ್ಥೆಯ ಉದ್ದೇಶವಾಗಿದೆ.

ಚುನಾವಣಾ ಪ್ರಚಾರದ ಸಮಯದಲ್ಲೇ ಜೋ ಬೈಡನ್ ಅವರಿಗೆ ಮೂರ್ತಿ ಅವರು ಸಾರ್ವಜನಿಕ ಆರೋಗ್ಯ ವಿಚಾರದಲ್ಲಿ ಪ್ರಮುಖ ಸಲಹೆಗಾರರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT