ಸೋಮವಾರ, ಏಪ್ರಿಲ್ 19, 2021
23 °C

‘ಸಾಯುವವರೆಗೂ ಶೂಟ್ ಮಾಡಿ’: ಮ್ಯಾನ್ಮಾರ್‌ನ ಕ್ರೂರ ಆದೇಶದ ಬಗ್ಗೆ ವಿವರಿಸಿದ ಪೊಲೀಸ್

ರಾಯಿಟರ್ಸ್ Updated:

ಅಕ್ಷರ ಗಾತ್ರ : | |

Prajavani

ಚಾಂಫೈ: ಮ್ಯಾನ್ಮಾರ್‌ನಲ್ಲಿ ಸೇನಾ ದಂಗೆ ನಡೆದು ಮತ್ತೆ ಪ್ರಜಾಪ್ರಭುತ್ವ ಸ್ಥಾಪನೆಗೆ ಒತ್ತಾಯಿಸಿ ಹೋರಾಟಗಳು ನಡೆಯುತ್ತಿವೆ. ಈ ಮಧ್ಯೆ, ಅಲ್ಲಿನ ಸೇನಾಡಳಿತದ ಕ್ರೂರ ಆದೇಶಗಳನ್ನು ಪಾಲಿಸಲಾಗದೆ ಭಾರತಕ್ಕೆ ಓಡಿ ಬಂದ ಪೊಲೀಸ್ ಅಧಿಕಾರಿ ಥಾ ಪೆಂಗ್ ಅಲ್ಲಿನ ಹಿಂಸಾತ್ಮಕ ಪರಿಸ್ಥಿತಿ ಬಗ್ಗೆ ರಾಯಿಟರ್ಸ್ ಜೊತೆ ಹೇಳಿಕೊಂಡಿದ್ದಾರೆ.

ಫೆಬ್ರವರಿ 27 ರಂದು ಮ್ಯಾನ್ಮಾರ್ ಪಟ್ಟಣ ಖಂಪತ್‌ನಲ್ಲಿ ಗುಂಪು ಚದುರಿಸಲು ಪ್ರತಿಭಟನಾಕಾರರತ್ತ ಸಬ್‌ಮಷಿನ್ ಗನ್ನಿಂದ ಗುಂಡು ಹಾರಿಸಲು ಆದೇಶಿಸಿದ್ದರು. ಸಾಯುವವರೆಗೂ ಗುಂಡು ಹಾರಿಸಲು ಆದೇಶವಿತ್ತು. ಆದರೆ, ನಾನು ಆ ಕ್ರೂರ ಆದೇಶವನ್ನು ನಿರಾಕರಿಸಿದೆ ಎಂದು ಪೊಲೀಸ್ ಲ್ಯಾನ್ಸ್ ಕಾರ್ಪೋರಲ್ ಹೇಳಿದ್ದಾರೆ.

'ಮರುದಿನ, ನಾನು ಶೂಟ್ ಮಾಡುತ್ತೇನೆಯೇ ಎಂದು ಕೇಳಲು ಅಧಿಕಾರಿಯೊಬ್ಬರು ಕರೆದರು" ಆಗಲೂ ನಾನು ನಿರಾಕರಿಸಿದೆ ಮತ್ತು ಕೆಲಸಕ್ಕೆ ರಾಜೀನಾಮೆ ನೀಡಿದೆ' ಎಂದಿದ್ದಾರೆ.

ಇದಾದ ಬಳಿಕ, ಮಾರ್ಚ್ 1 ರಂದು, ಅವರು ತಮ್ಮ ಮನೆ ಮತ್ತು ಕುಟುಂಬವನ್ನು ಖಂಪತ್‌ನಲ್ಲೇ ಬಿಟ್ಟು ಮೂರು ದಿನಗಳ ಕಾಲ ಭಾರತದತ್ತ ಪ್ರಯಾಣ ಮಾಡಿದರು, ಗುರುತು ಪತ್ತೆ ಹಚ್ಚುವುದನ್ನು ತಪ್ಪಿಸಲು ರಾತ್ರಿಯಲ್ಲಿ ಪ್ರಯಾಣ ಮಾಡಿ ಭಾರತದ ಮಿಜೋರಾಂ ರಾಜ್ಯವನ್ನು ತಲುಪಿದರು.

‘ಶೂಟ್ ಮಾಡುವುದನ್ನು ಬಿಟ್ಟರೆ ನನಗೆ ಬೇರೆ ಆಯ್ಕೆ ಇರಲಿಲ್ಲ‘ ಎಂದು ಥಾ ಪೆಂಗ್ ಮಂಗಳವಾರ ರಾಯಿಟಸ್‌ಗೆ ನೀಡಿದ ಸಂದರ್ಶನದಲ್ಲಿ ಭಾಷಾಂತರಕಾರರ ಮೂಲಕ ಮಾತನಾಡುತ್ತಾ ಹೇಳಿದ್ದಾರೆ. ತನ್ನ ಗುರುತನ್ನು ರಕ್ಷಿಸಲು ಮಾರ್ಗ ಮಧ್ಯೆ ತನ್ನ ಹೆಸರಿನ ಒಂದು ಭಾಗವನ್ನು ಮಾತ್ರ ಕೊಟ್ಟಿದ್ದರು. ಬಳಿಕ, ರಾಯಿಟರ್ಸ್ ಪರಿಶೀಲಿಸಿದಾಗ ಅವರ ಬಳಿ ಇದ್ದ ಪೊಲೀಸ್ ಮತ್ತು ರಾಷ್ಟ್ರೀಯ ಗುರುತಿನ ಚೀಟಿಗಳಲ್ಲಿ ಹೆಸರು ಖಚಿತಪಟ್ಟಿದೆ.

ನಾನು ಮತ್ತು ಆರು ಸಹೋದ್ಯೋಗಿಗಳು ಫೆಬ್ರವರಿ 27ರ ಉನ್ನತ ಅಧಿಕಾರಿಯ ಆದೇಶವನ್ನು ಧಿಕ್ಕರಿಸಿದ್ದಾರೆ ಎಂದು ಥಾ ಪೆಂಗ್ ಹೇಳಿದ್ದಾರೆ.

ರಾಯಿಟರ್ಸ್ ಪರಿಶೀಲಿಸಿದ ವರ್ಗೀಕೃತ ಆಂತರಿಕ ಪೊಲೀಸ್ ದಾಖಲೆಯ ಪ್ರಕಾರ, ಘಟನೆಗಳ ವಿವರಣೆಯು ಮಾರ್ಚ್ 1 ರಂದು ಮಿಜೋರಾಂನಲ್ಲಿ ಇನ್ನೊಬ್ಬ ಮ್ಯಾನ್ಮಾರ್ ಪೊಲೀಸ್ ಲ್ಯಾನ್ಸ್ ಕಾರ್ಪೋರಲ್ ಮತ್ತು ಭಾರತಕ್ಕೆ ಕಾಲಿಟ್ಟ ಮೂವರು ಕಾನ್‌ಸ್ಟೆಬಲ್‌ಗಳು ನೀಡಿದಂತೆಯೇ ಇತ್ತು.

ಈ ದಾಖಲೆಯನ್ನು ಮಿಜೋರಾಂ ಪೊಲೀಸ್ ಅಧಿಕಾರಿಗಳು ಬರೆದಿದ್ದು, ಅದರಲ್ಲಿ ನಾಲ್ಕು ವ್ಯಕ್ತಿಗಳ ವಿವರ ಮತ್ತು ಅವರು ಏಕೆ ಓಡಿಬಂದರು ಎಂಬ ಬಗ್ಗೆ ವಿವರಣೆ ನೀಡಲಾಗಿದೆ.

‘ಕಾನೂನು ಅಸಹಕಾರ ಚಳುವಳಿ, ವಿವಿಧ ಸ್ಥಳಗಳಲ್ಲಿ ದಂಗೆ-ವಿರೋಧಿ ಪ್ರತಿಭಟನಾಕಾರರು ನಡೆಸುತ್ತಿರುವ ಆಂದೋಲನ ಹೆಚ್ಚುತ್ತಿರುವುದರಿಂದ ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಲು ನಮಗೆ ಸೂಚನೆ ನೀಡಲಾಗಿದೆ‘ ಎಂದು ಅವರು ಮಿಜೋರಾಂ ಪೊಲೀಸರಿಗೆ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘ಅಂತಹ ಸನ್ನಿವೇಶದಲ್ಲಿ, ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಿರುವ ನಮ್ಮ ಸ್ವಂತ ಜನರ ಮೇಲೆ ಗುಂಡು ಹಾರಿಸುವ ಧೈರ್ಯ ನಮಗಿರಲಿಲ್ಲ‘ ಎಂದು ಅವರು ಹೇಳಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು