ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾಂಪಸ್‌ನಲ್ಲಿ ಗುಂಡಿನ ದಾಳಿ: ಎಂಟು ಸಾವು

ರಷ್ಯಾದ ಪರ್ಮ್ ವಿ.ವಿಯಲ್ಲಿ ಕೃತ್ಯ: ಶಂಕಿತನ ಸೆರೆ
Last Updated 20 ಸೆಪ್ಟೆಂಬರ್ 2021, 20:00 IST
ಅಕ್ಷರ ಗಾತ್ರ

ಮಾಸ್ಕೊ: ಬಂದೂಕುಧಾರಿಯೊಬ್ಬ ಸೋಮವಾರ ಇಲ್ಲಿನ ಪರ್ಮ್‌ ರಾಜ್ಯ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಗುಂಡಿನ ದಾಳಿ ನಡೆಸಿದ್ದು, ಎಂಟು ಮಂದಿ ಮೃತಪಟ್ಟಿದ್ದಾರೆ. 28 ಜನ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಂದೂಕುಧಾರಿಯ ಮೇಲೆ ಪೊಲೀಸರೂ ಗುಂಡಿನ ದಾಳಿ ನಡೆಸಿದ್ದು, ಗಾಯಗೊಂಡ ಸ್ಥಿತಿಯಲ್ಲಿ ಆತನನ್ನು ಸೆರೆಹಿಡಿಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆತನ ಗುರುತು ಮತ್ತು ದಾಳಿ ಹಿಂದಿನ ಉದ್ದೇಶ ಸದ್ಯಕ್ಕೆ ತಿಳಿದುಬಂದಿಲ್ಲ.

ಗುಂಡಿನ ದಾಳಿ ನಡೆದ ಕೃತ್ಯದ ಹಿಂದೆಯೇ, ಭೀತಿಗೊಂಡ ಅನೇಕ ವಿದ್ಯಾರ್ಥಿಗಳು 2ನೇ ಅಂತಸ್ತಿನಿಂದ ಜೀವ ರಕ್ಷಣೆ ಯತ್ನದಲ್ಲಿ ಕೆಳಗೆ ಜಿಗಿದಿದ್ದಾರೆ. ಈ ಸಂಬಂಧಿತ ದೃಶ್ಯಾವಳಿಗಳನ್ನು ಸ್ಥಳೀಯ ಸುದ್ಧಿಸಂಸ್ಥೆಗಳು ಬಿತ್ತರಿಸಿವೆ. ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಸಿಬ್ಬಂದಿ ಮತ್ತು ಹೆಚ್ಚಿನ ವಿದ್ಯಾರ್ಥಿಗಳು ಕೊಠಡಿಯಲ್ಲಿ ಸ್ವಯಂ ದಿಗ್ಬಂಧನಕ್ಕೆ ಒಳಗಾಗಿದ್ದರು.

ಕಪ್ಪು ವಸ್ತ್ರ, ಹೆಲ್ಮೆಟ್ ಧರಿಸಿದ್ದ ವ್ಯಕ್ತಿಯೊಬ್ಬರು ಶಸ್ತ್ರಾಸ್ತ್ರ ಹಿಡಿದು ಒಳ ಪ್ರವೇಶಿಸುತ್ತಿರುವುದು ಕೆಲ ದೃಶ್ಯಗಳಲ್ಲಿ ದಾಖಲಾಗಿದೆ. ರಷ್ಯಾದ ತನಿಖಾ ಸಮಿತಿಯು, ಶಂಕಿತನು ಶಾಟ್‌ಗನ್‌ ಬಳಸಿರುವ ಸಾಧ್ಯತೆ ಇದೆ ಎಂದು ತಿಳಿಸಿದೆ.

ಮೊದಲಿಗೆ ಸಂಚಾರ ಪೊಲೀಸರು ಬಂದಿದ್ದು, ಶಂಕಿತನು ಅವರ ಮೇಲೂ ಗುಂಡಿನ ದಾಳಿ ನಡೆಸಿದ್ದಾನೆ. ರಷ್ಯಾದಲ್ಲಿ ಶಸ್ತ್ರಾಸ್ತ್ರ ಹೊಂದುವುದು ಸುಲಭವಲ್ಲ. ಆದರೂ, ಅನೇಕ ಜನರು ಬೇಟೆಯಾಡುವ ಶಸ್ತ್ರಾಸ್ತ್ರ ಕುರಿತ ಲೈಸೆನ್ಸ್‌ ಹೊಂದಿದ್ದಾರೆ. ಶಂಕಿತನು ಪಂಪ್‌ ಆ್ಯಕ್ಷನ್‌ ಶಾಟ್‌ಗನ್ ಲೈಸೆನ್ಸ್‌ ಹೊಂದಿರುವ ಶಂಕೆ ಇದೆ. ಆದರೆ, ಅದನ್ನೇ ಬಳಸಿದ್ದಾನಾ ಎಂಬುದು ದೃಢಪಟ್ಟಿಲ್ಲ.

ಪರ್ಮ್‌ ರಾಜ್ಯ ವಿಶ್ವವಿದ್ಯಾಲಯದಲ್ಲಿ ಅಂದಾಜು 12 ಸಾವಿರ ವಿದ್ಯಾರ್ಥಿಗಳಿದ್ದಾರೆ. ಗುಂಡಿನ ದಾಳಿ ನಡೆದಾಗ ಸುಮಾರು 3,000 ವಿದ್ಯಾರ್ಥಿಗಳು ಕ್ಯಾಂಪಸ್‌ನಲ್ಲಿ ಇದ್ದರು. ಪರ್ಮ್ ನಗರವು ಮಾಸ್ಕೊಗೆ 700 ಮೈಲಿ ದೂರದಲ್ಲಿದೆ.

ಘಟನೆಯಲ್ಲಿ 28 ಮಂದಿ ಗಾಯಗೊಂಡಿದ್ದಾರೆ. ಕೆಲವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತನಿಖಾ ಸಮಿತಿ ತಿಳಿಸಿದೆ. ಆದರೆ, ಕೃತ್ಯದ ಬಗ್ಗೆ ಹೆಚ್ಚಿನ ವಿವರ ಬಹಿರಂಗಪಡಿಸಿಲ್ಲ.

ಆರೋಗ್ಯ ಸಚಿವಾಲಯದ ಪ್ರಕಾರ, 19 ಜನರ ಮೇಲೆ ಗುಂಡು ಹಾರಿಸಲಾಗಿದೆ. ಆದರೆ, ಎಷ್ಟು ಮಂದಿ ಗಾಯಗೊಂಡಿದ್ದಾರೆ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ಕಳೆದ ಮೇ ತಿಂಗಳಲ್ಲಿಯೂ ಕಜಾನ್‌ನ ಶಾಲೆಯೊಂದರಲ್ಲಿ ಗುಂಡಿನ ದಾಳಿ ನಡೆದಿತ್ತು. ಆಗ ಏಳು ವಿದ್ಯಾರ್ಥಿಗಳು, ಇಬ್ಬರು ಶಿಕ್ಷಕರು ಮೃತಪಟ್ಟಿದ್ದರು.

ಭಾರತೀಯ ವಿದ್ಯಾರ್ಥಿಗಳು ಸುರಕ್ಷಿತ
ಪರ್ಮ್ ವಿಶ್ವವಿದ್ಯಾಲಯದಲ್ಲಿ ಇರುವ ಎಲ್ಲ ಭಾರತೀಯ ವಿದ್ಯಾರ್ಥಿಗಳು ಸುರಕ್ಷಿತವಾಗಿದ್ದಾರೆ. ಗುಂಡಿನ ದಾಳಿ ಕೃತ್ಯದ ಹಿನ್ನೆಲೆಯಲ್ಲಿ ರಷ್ಯಾದಲ್ಲಿ ಇರುವ ಭಾರತೀಯ ರಾಯಭಾರ ಕಚೇರಿ ಈ ಹೇಳಿಕೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT